
ಹುಬ್ಬಳ್ಳಿ: ನಗರದ ಕೆಎಂಸಿ–ಆರ್‌ಐ ಆಸ್ಪತ್ರೆಯಲ್ಲಿ ವೈದ್ಯರು ಔಷಧಿಗಳನ್ನು ಹೊರಗೆ ಬರೆದುಕೊಡುತ್ತಿದ್ದಾರೆ ಎನ್ನುವ ದೂರಿನ ಮೇರೆಗೆ ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಎಸ್.ಟಿ. ನೇತೃತ್ವದ ತಂಡ ಮಂಗಳವಾರ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಯ ಲೋಕಾಯುಕ್ತ 40 ಸಿಬ್ಬಂದಿ 12 ತಂಡಗಳಾಗಿ, ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ, ಮಕ್ಕಳ ವಿಭಾಗ, ಹೊರರೋಗಿ ವಿಭಾಗ ಸೇರಿ ವಿವಿಧೆಡೆ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದರು. ಔಷಧ ಉಗ್ರಾಣದಲ್ಲಿರುವ ಔಷಧಿಗಳ ಬಾಕ್ಸ್, ಅವುಗಳ ಹೆಸರು, ಕಂಪನಿ ಹೆಸರು, ಬಳಕೆಯ ಅವಧಿ ದಿನಾಂಕ ಪರಿಶೀಲಿಸಿದರು. ಇಂಡೆಂಟ್ ವರದಿ ಆಧರಿಸಿ ಟೆಂಡರ್‌ನ ಕೆಲವು ಮಾಹಿತಿಗಳನ್ನು ವೈದ್ಯರಿಂದ ಪಡೆದರು.
ಮಕ್ಕಳ ವಿಭಾಗ ಹಾಗೂ ತುರ್ತು ಚಿಕಿತ್ಸಾ ವಿಭಾಗದಲ್ಲಿರುವ ರೋಗಿಗಳ ಹಾಗೂ ಸಂಬಂಧಿಕರಿಂದ ಚಿಕಿತ್ಸೆಯ ಕುರಿತು ಮಾಹಿತಿ ಪಡೆದ ತಂಡ, ಆಡಳಿತ ವಿಭಾಗಕ್ಕೆ ತೆರಳಿ ಕಡತಗಳನ್ನು ಪರಿಶೀಲನೆ ಮಾಡಿತು. ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿಯಿಂದ ಕೆಲವು ಮಾಹಿತಿಗಳನ್ನು ಪಡೆದು, ಆಸ್ಪತ್ರೆಯ ನಿರ್ದೇಶಕರ ಜೊತೆ ಚರ್ಚೆ ನಡೆಸಿತು.
‘ಔಷಧಕ್ಕಾಗಿ ರೋಗಿಯ ಸಂಬಂಧಿಕರೊಬ್ಬರು ನಗರದಲ್ಲಿ ಅಲೆದಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿತ್ತು. ಉಪ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದರು. ಅದರನ್ವಯ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆಗೆ ಬಂದಿದ್ದಾರೆ’ ಎಂದು ಕೆಎಂಸಿ–ಆರ್‌ಐ ಆಸ್ಪತ್ರೆ ನಿರ್ದೇಶಕ ಡಾ.ಈಶ್ವರ ಹೊಸಮನಿ ಹೇಳಿದರು.
‘ದೂರಿನ ಕುರಿತು ಈಗಾಗಲೇ ವಿಭಾಗದ ಮುಖ್ಯಸ್ಥರ, ರೋಗಿಗಳ ಸಂಬಂಧಿಕರ ಹೇಳಿಕೆ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿಗೆ ಅಧಿಕಾರಿಗಳು ಬಂದಿದ್ದು, ಆಸ್ಪತ್ರೆಯಿಂದ ಸಂಪೂರ್ಣ ಸಹಕಾರ ನಿಡಲಾಗುತ್ತಿದೆ’ ಎಂದರು.
ಮಾಧ್ಯಮದವರೊಂದಿಗೆ ಮಾತನಾಡಿದ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಎಸ್.ಟಿ., ‘ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾಗಿ ಔಷಧಿ ಸಿಗುತ್ತಿಲ್ಲ ಎನ್ನುವ ದೂರು ಬಂದಿದೆ. ಸೌಲಭ್ಯ, ಚಿಕಿತ್ಸೆ, ಆಡಳಿತ ವ್ಯವಸ್ಥೆ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸಿ ವರದಿ ನಿಡಲು ಉಪ ಲೋಕಾಯುಕ್ತರು ಸೂಚನೆ ನೀಡಿದ್ದಾರೆ. ಚಿಕಿತ್ಸಾ ವಿಭಾಗ, ಆವರಣದ ಶುಚಿತ್ವ, ಆಡಳಿತದಲ್ಲಿನ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದರು.
ಆಸ್ಪತ್ರೆಯ ಕೆಲವು ವಿಭಾಗದಲ್ಲಿನ ಮಾಹಿತಿ ಸಂಗ್ರಹಿಸಿದ್ದು ಸಮಗ್ರ ವರದಿ ಸಿದ್ಧಪಡಿಸಿ ಉಪ ಲೋಕಾಯುಕ್ತರಿಗೆ ಸಲ್ಲಿಸಲಾಗುವುದು.
- ಸಿದ್ದಲಿಂಗಪ್ಪ ಎಸ್.ಟಿ ಲೋಕಾಯುಕ್ತ ಎಸ್ಪಿ ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.