ಧಾರವಾಡ: ತಾಲ್ಲೂಕಿನ ಲೋಕೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ, ಯುಕೆಜಿ), ಪ‍್ರಾಥಮಿಕ ಹಾಗೂ ಪ್ರೌಢಶಾಲೆ ತರಗತಿಗಳು ನಡೆಯುತ್ತಿವೆ. ಶಾಲೆಯಲ್ಲಿ ಕೊಠಡಿಗಳ ಕೊರತೆ ಇದ್ದು, ಕಾಮಗಾರಿ ಪೂರ್ಣಗೊಳ್ಳದ ದಾಸೋಹ ಭವನದಲ್ಲೂ ತರಗತಿ ನಡೆಸಲಾಗುತ್ತಿದೆ.
ಎಲ್‌ಕೆಜಿಯಿಂದ 10ನೇ ತರಗತಿವರೆಗೆ 550 ವಿದ್ಯಾರ್ಥಿಗಳು ಇದ್ದಾರೆ. ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ವಿಭಾಗವಿದೆ. 15 ಕೊಠಡಿಗಳಲ್ಲೇ ಕಚೇರಿ ಸೇರಿದಂತೆ ಎಲ್ಲ ತರಗತಿಗಳನ್ನು ನಡೆಸಬೇಕಿದೆ. ಈ ಪೈಕಿ ಕೆಲವು ಕೊಠಡಿಗಳು ಸೋರುತ್ತಿವೆ. ಕೆಲವು ಕೊಠಡಿಗಳಲ್ಲಿ ಎರಡೆರಡು ತರಗತಿ ನಡೆಸಲಾಗುತ್ತಿದೆ.
ಶಾಲೆಯಲ್ಲಿ ಒಂದೇ ಶೌಚಾಲಯ ಇದೆ. ಇನ್ನೊಂದು ಶೌಚಾಲಯ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ವಿದ್ಯಾರ್ಥಿಗಳು ಶೌಚಕ್ಕೆ ಶಾಲೆ ಬದಿಯ ಬಯಲು ಆಶ್ರಯಿಸಬೇಕಿದೆ.
ಕಚೇರಿ ಕೆಲಸಕ್ಕೆ, ಬೋಧಕರು ಕುಳಿತುಕೊಳ್ಳಲು, ಕಲಿಕಾ ಪರಿಕರ ಇಡಲು ಒಂದೇ ಕೊಠಡಿಯಿದೆ. 10ನೇ ತರಗತಿಯಲ್ಲಿ 52 ವಿದ್ಯಾರ್ಥಿಗಳಿದ್ದು, ತರಗತಿ ಕೊಠಡಿ ಚಿಕ್ಕದಾಗಿದೆ. ಕಿರು ಪರೀಕ್ಷೆ, ಸ್ಪರ್ಧೆ ಮೊದಲಾದವು ಇದ್ದಾಗ ಪಡಸಾಲೆಯಲ್ಲೂ ವಿದ್ಯಾರ್ಥಿಗಳನ್ನು ಕೂರಿಸಲಾಗುತ್ತದೆ.
‘ಚಿಕ್ಕ ಕೊಠಡಿಯಲ್ಲಿ ಒತ್ತೊತ್ತಾಗಿ ಕುಳಿತುಕೊಳ್ಳಬೇಕು. ಕೆಲವು ಕಡೆ ಸೋರುತ್ತದೆ. ಇಡೀ ಶಾಲೆಯವರು ಒಂದೇ ಶೌಚಾಲಯ ಬಳಸಬೇಕಾಗಿದೆ’ ಎಂದು ವಿದ್ಯಾರ್ಥಿನಿಯೊಬ್ಬರು ತಿಳಿಸಿದರು.
ಲೋಕೂರಿನ ಶಾಲಾ ಕಟ್ಟಡ ಸ್ಥಿತಿ ಮಾಹಿತಿ ಪಡೆದು ಪರಿಶೀಲನೆ ಮಾಡುತ್ತೇನೆ. ಹೊಸ ಕಟ್ಟಡದಲ್ಲಿ ಪ್ರೌಢಶಾಲೆ ಸ್ಥಳಾಂತರಕ್ಕೆ ಕ್ರಮ ವಹಿಸಲಾಗುವುದುಭುವನೇಶ ಪಾಟೀಲ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯಿತಿ
ಪ್ರೌಢಶಾಲೆ ಉದ್ಘಾಟನೆ ವಿಳಂಬ:
ಈರಪ‍್ಪ ಮತ್ತು ಅಶೋಕ ಏಗಪ್ಪ ನರಸಿಂಗನವರ ಕುಟುಂಬದವರು ಪ್ರೌಢಶಾಲಾ ಕಟ್ಟಡ ನಿರ್ಮಾಣಕ್ಕೆ ಒಂದು ಎಕರೆ ಜಾಗ ದಾನ ನೀಡಿದ್ದಾರೆ. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ (ಆರ್‌ಎಂಎಸ್‌ಎ) ₹1.35 ಕೋಟಿ ಅನುದಾನದಲ್ಲಿ ಗರಗ ಮಾರ್ಗದಲ್ಲಿ ಕಟ್ಟಡ ನಿರ್ಮಿಸಿ ಒಂದು ವರ್ಷವಾಗಿದೆ. ಈವರೆಗೆ ಅದನ್ನು ಉದ್ಘಾಟಿಸಿಲ್ಲ. ‘ಹೊಸ ಕಟ್ಟಡದಲ್ಲಿ ರ‍್ಯಾಂಪ್ ಕಾಂಪೌಂಡ್ ನಿರ್ಮಾಣ ಕಾಮಗಾರಿ ನೀರಿನ ವ್ಯವಸ್ಥೆ ಕಲ್ಪಿಸುವುದು ಮಾತ್ರ ಬಾಕಿ ಇದೆ. ಇಷ್ಟು ವ್ಯವಸ್ಥೆ ಕಲ್ಪಿಸಿ ಪ್ರೌಢಶಾಲೆಯನ್ನು ಸ್ಥಳಾಂತರಿಸಿದರೆ ಅನುಕೂಲವಾಗುತ್ತದೆ’ ಎಂದು ಪ್ರೌಢಶಾಲೆಯ ಪ್ರಭಾರ ಮುಖ್ಯಶಿಕ್ಷಕ ಎಸ್.ಎನ್.ಹಡಪದ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.