ADVERTISEMENT

ಮಹದಾಯಿ; ಕಾಮಗಾರಿ ಆರಂಭಿಸದಿದ್ದರೆ ತಕ್ಕ ಪಾಠ

ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ರೈತ ಮುಖಂಡರಿಂದ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 16:10 IST
Last Updated 26 ಫೆಬ್ರುವರಿ 2024, 16:10 IST
ಹುಬ್ಬಳ್ಳಿಯಲ್ಲಿ ಮಲಪ್ರಭಾ, ಮಹದಾಯಿ, ಕಳಸಾ–ಬಂಡೂರಿ ರೈತ ಹೋರಾಟ ಒಕ್ಕೂಟ ಸಮಿತಿ ಸದಸ್ಯರು ಮಹದಾಯಿ ಯೋಜನೆ ಅನುಷ್ಠಾನದ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಚರ್ಚಿಸಿದರು 
ಹುಬ್ಬಳ್ಳಿಯಲ್ಲಿ ಮಲಪ್ರಭಾ, ಮಹದಾಯಿ, ಕಳಸಾ–ಬಂಡೂರಿ ರೈತ ಹೋರಾಟ ಒಕ್ಕೂಟ ಸಮಿತಿ ಸದಸ್ಯರು ಮಹದಾಯಿ ಯೋಜನೆ ಅನುಷ್ಠಾನದ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಚರ್ಚಿಸಿದರು    

ಹುಬ್ಬಳ್ಳಿ: ಲೋಕಸಭಾ ಚುನಾವಣೆ ಒಳಗೆ ಮಹದಾಯಿ, ಕಳಸಾ ಬಂಡೂರಿ ಯೋಜನೆಯ ಕಾಮಗಾರಿ    ಆರಂಭಿಸದಿದ್ದರೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಮಲಪ್ರಭಾ, ಮಹದಾಯಿ, ಕಳಸಾ–ಬಂಡೂರಿ ರೈತ ಹೋರಾಟ ಒಕ್ಕೂಟ ಸಮಿತಿ ಸದಸ್ಯರು ಎಚ್ಚರಿಸಿದರು.

ನಗರದ ಮಯೂರಿ ಗಾರ್ಡನ್‌ನಲ್ಲಿರುವ ಜೋಶಿ ಅವರ ನಿವಾಸದ ಬಳಿ ಸೋಮವಾರ ಸೇರಿದ ಒಕ್ಕೂಟದ ಸದಸ್ಯರು, ‘ಯೋಜನೆ ಅನುಷ್ಠಾನವಾಗದಿರುವ ಬಗ್ಗೆ ನೀವು ಮತ್ತು ನವಲಗುಂದ ಶಾಸಕ ಎನ್‌.ಎಚ್‌.ಕೋನರಡ್ಡಿ ಅವರು ಉತ್ತರ ನೀಡಬೇಕು. ಇಲ್ಲದಿದ್ದರೆ ಕಾರು ಮುಂದೆ ಹೋಗಲು ಬಿಡುವುದಿಲ್ಲ’ ಎಂದು ಪಟ್ಟು ಹಿಡಿದರು.

‘ಯೋಜನೆ ಅನುಷ್ಠಾನಗೊಳಿಸುತ್ತೇವೆ’ ಎಂದು ಜೋಶಿ ಅವರು ಹೇಳಿದಾಗ, ‘ಹಲವು ವರ್ಷಗಳಿಂದ ಇದನ್ನೇ ಹೇಳುತ್ತಿದ್ದೀರಿ. ಅನುಷ್ಠಾನ ಮಾತ್ರ ಆಗುತ್ತಿಲ್ಲ. ನಿಮ್ಮ ಯೋಜನೆಗಳೆಲ್ಲವೂ ಕನ್ನಡಿಯೊಳಗಿನ ಗಂಟಿನಂತೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ದಶಕದಿಂದ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಹೋರಾಟ ಮಾಡಲಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ವಿಷಯದಲ್ಲಿ ರಾಜಕೀಯ ಮಾಡುವುದು ಬಿಡಬೇಕು’ ಎಂದರು.

‘ಹೆಸರು ಬೆಳೆಗೆ ಶೀಘ್ರ ವಿಮೆ ಬಿಡುಗಡೆ ಮಾಡಬೇಕು. ಬರ ಪರಿಹಾರ ನೀಡುವ ಜತೆಗೆ, ರೈತರ ಸಾಲ ಮನ್ನಾ ಮಾಡಬೇಕು. ರೈತರು ಜಮೀನಿಗೆ ಹೋಗಲು ಚಕ್ಕಡಿ ರಸ್ತೆ ನಿರ್ಮಾಣ, ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.

ರೈತ ಮುಖಂಡ ಸುಭಾಷ್‌ಗೌಡ ಪಾಟೀಲ ಮಾತನಾಡಿ, ‘ಮಹದಾಯಿ ಯೋಜನೆ ಕಾಮಗಾರಿಯನ್ನು ಜನವರಿ ಒಳಗಾಗಿ ಆರಂಭಿಸಲಾಗುವುದು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭರವಸೆ ನೀಡಿದ್ದರು. ಈವರೆಗೂ ಕಾಮಗಾರಿ ಆರಂಭವಾಗಿಲ್ಲ’ ಎಂದರು.

‘ಚುನಾವಣೆಗೂ ಮುನ್ನ ಯೋಜನೆ ಅನುಷ್ಠಾನಕ್ಕಿರುವ ಎಲ್ಲ ಅಡೆತಡೆಗಳನ್ನು ನಿವಾರಿಸಿ, ಕಾಮಗಾರಿಗೆ ಅನುಮತಿ ಕೊಡಿಸಬೇಕು. ಶೀಘ್ರ ಕಾಮಗಾರಿ ಆರಂಭಿಸಬೇಕು. ಇಲ್ಲದಿದ್ದರೆ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ  ಅವರ ವಾಹನಗಳಿಗೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಸಿದರು.

ರೈತ ಮುಖಂಡರಾದ ಮಲ್ಲೇಶ್ ಉಪ್ಪಾರ, ಬಸನಗೌಡ ಹುಣಸಿಕಟ್ಟೆ, ಎಲ್ಲಪ್ಪ ದಾದಿಬಾಯಿ, ಗೋವಿಂದರೆಡ್ಡಿ ಮೊರಬದ, ರವಿ ತೋಟದ್, ಮುರಗೇಪ್ಪ್ ಪಲ್ಲೆದ್, ಸಾಯಿಬಾಬ ಆನೆಗುಂದಿ, ಶಿವಣ್ಣ ಹುಬಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.