ಹುಬ್ಬಳ್ಳಿ: ‘ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಿರ್ಲಕ್ಷ್ಯ ವಹಿಸಿದ್ದು, ಯೋಜನೆ ಜಾರಿಗೆ ಆಗ್ರಹಿಸಿ ನಗರದಲ್ಲಿರುವ ಅವರ ಕಚೇರಿ ಎದುರು ಜುಲೈ 31ರಿಂದ ನಿರಂತರ ಹೋರಾಟ ನಡೆಸಲಾಗುತ್ತದೆ’ ಎಂದು ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿಯ ಸಿದ್ದಣ್ಣ ತೇಜಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜು.31ರೊಳಗೆ ಸಚಿವರು ಪರಿಸರ ಇಲಾಖೆಯಿಂದ ಅನುಮತಿ ಕೊಡಿಸಿದರೆ ವಿಜಯೋತ್ಸವ ಆಚರಿಸಲಾಗುವುದು. ಇಲ್ಲದಿದ್ದರೆ, ಹೋರಾಟ ಮುಂದುವರಿಸುವುದು ಅನಿವಾರ್ಯ. ದೆಹಲಿಯಲ್ಲಿರುವ ಅವರ ಕಚೇರಿ ಅಥವಾ ರಾಷ್ಟ್ರಪತಿ ಕಚೇರಿ ಮುಂದೆಯೂ ಹೋರಾಟ ನಡೆಸಲು ನಿರ್ಧರಿಸಲಾಗಿದೆ’ ಎಂದರು.
‘ಸಚಿವ ಜೋಶಿ ಅವರು ಯೋಜನೆ ಕುರಿತಾಗಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ನಿಮಗೆ ರಾಜಕೀಯ ಶಕ್ತಿ ಕೊಟ್ಟಿದ್ದೇವೆ. ಸದ್ಯ ಅಧಿವೇಶನ ನಡೆಯುತ್ತಿದ್ದು, ಪ್ರಧಾನಿ ಅವರೊಂದಿಗೆ ಚರ್ಚಿಸಿ, ಯೋಜನೆ ಜಾರಿಗೊಳಿಸಲು ಯತ್ನಿಸಬೇಕು’ ಎಂದು ಆಗ್ರಹಿಸಿದರು.
‘1965ರಿಂದ ನಾಲ್ಕು ಜಿಲ್ಲೆಗಳ 13 ತಾಲ್ಲೂಕುಗಳ ಜನರು ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಆಶ್ವಾಸನೆಯಷ್ಟೇ ನೀಡುತ್ತಾರೆ. 2021ರಲ್ಲಿ ರಾಜ್ಯಕ್ಕೆ 13.5 ಟಿಎಂಸಿ ಅಡಿ ನೀರು ಹರಿಸಲು ನ್ಯಾಯಾಧೀಕರಣ ಮಂಡಳಿ ಅನುಮತಿ ನೀಡಿದ್ದರೂ ವಿಳಂಬ ಮಾಡಲಾಗುತ್ತಿದೆ. ಇದೀಗ ಗೋವಾ ಮುಖ್ಯಮಂತ್ರಿ, ಮತ್ತೆ ನ್ಯಾಯಾಲಯದ ಮೊರೆ ಹೋಗುವ ಹೇಳಿಕೆ ನೀಡಿದ್ದಾರೆ’ ಎಂದರು.
‘ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ವಪಕ್ಷಗಳ ಸಭೆ ಕರೆಯುವುದಾಗಿ ಹೇಳಿದ್ದಾರೆ. ಅವರು ಕರೆದರೆ, ದೆಹಲಿಗೆ ಅವರೊಂದಿಗೆ ಹೋಗುತ್ತೇವೆ. ಇಲ್ಲವೇ, ಪ್ರತ್ಯೇಕವಾಗಿ ಹೋಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ವಿವಿಧ ಸಂಘಟನೆಗಳು ನಮಗೆ ಬೆಂಬಲ ಸೂಚಿಸಿದ್ದು, ಯೋಜನೆ ಜಾರಿ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು’ ಎಂದು ಹೇಳಿದರು.
ವಿವಿಧ ಸಂಘಟನೆಗಳ ಮುಖಂಡರಾದ ಬಾಬಾಜಾನ್ ಮುಧೋಳ, ರವಿ ಕಂಬಳಿ, ಬಿ.ಎಂ. ಹಣಸಿ, ಮಾಣಿಕ್ಯ ಸಿಕ್ಕೂರ, ಹನುಮಂತಪ್ಪ ಪವಾಡಿ, ರಮೇಶ್, ಎಸ್.ವಿ. ಪಾಟೀಲ, ಶೇಖರಪ್ಪ ಬಳಿಗಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.