ADVERTISEMENT

ಹುಬ್ಬಳ್ಳಿ: ನಗರದೆಲ್ಲೆಡೆ ಮಕರ ಸಂಕ್ರಾಂತಿ ಸಂಭ್ರಮ

ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಸಿದ್ಧಾರೂಢ ಮಠಕ್ಕೆ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 5:54 IST
Last Updated 16 ಜನವರಿ 2026, 5:54 IST
ಸಂಕ್ರಾಂತಿ ಹಬ್ಬದ ಪ್ರಯುಕ್ತ ಹುಬ್ಬಳ್ಳಿಯ ಉಣಕಲ್ ಕೆರೆ ಉದ್ಯಾನದಲ್ಲಿ ಜನರು ಕುಟುಂಬ ಸದಸ್ಯರೊಂದಿಗೆ ಹಬ್ಬದೂಟ ಸವಿದರು
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಸಂಕ್ರಾಂತಿ ಹಬ್ಬದ ಪ್ರಯುಕ್ತ ಹುಬ್ಬಳ್ಳಿಯ ಉಣಕಲ್ ಕೆರೆ ಉದ್ಯಾನದಲ್ಲಿ ಜನರು ಕುಟುಂಬ ಸದಸ್ಯರೊಂದಿಗೆ ಹಬ್ಬದೂಟ ಸವಿದರು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ನಗರದಲ್ಲಿ ಸಂಕ್ರಾಂತಿ ಹಬ್ಬವನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ಮನೆಯ ಸದಸ್ಯರು, ನೆರೆಹೊರೆಯವರು ಎಳ್ಳು, ಬೆಲ್ಲ ಬೀರಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಹಬ್ಬದ ಅಂಗವಾಗಿ ನಗರದ ಇಂದಿರಾಗಾಜಿನ ಮನೆ ಉದ್ಯಾನ, ತೊಳನಕೆರೆ, ಉಣಕಲ್ ಕೆರೆ ಉದ್ಯಾನ, ನೃಪತುಂಗ ಬೆಟ್ಟ ಸೇರಿ ತಮಗಿಷ್ಟದ ಸ್ಥಳಗಳಿಗೆ ಕುಟುಂಬ ಸದಸ್ಯರು, ಬಂಧುಗಳು, ಸ್ನೇಹಿತರೊಂದಿಗೆ ತೆರಳಿ ವರ್ಷದ ಮೊದಲ ಹಬ್ಬವನ್ನು ಆಚರಿಸಿದರು.

ಸಜ್ಜಿ ರೊಟ್ಟಿ, ಎಳ್ಳು ಹಚ್ಚಿದ ರೊಟ್ಟಿ, ಖರ್ಚಿಕಾಯಿ, ಮಾದಲಿ, ಬದನೆಕಾಯಿ ಬರ್ತಾ, ಬದನೆಕಾಯಿ ಎಣಗಾಯಿ, ಶೇಂಗಾ ಚಟ್ನಿ, ಸೌತೇಕಾಯಿ, ಮೂಲಂಗಿ ಪಚಡಿ, ಜುಣಕಾ, ಕೆಂಪುಕಾರ, ಅಗಸಿಚಟ್ನಿ, ಮೊಸರು ಸೇರಿ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿಕೊಂಡು ಉದ್ಯಾನಗಳಿಗೆ ತೆರಳಿ ಹಬ್ಬದೂಟ ಸವಿದರು.

ADVERTISEMENT

ನಗರದ ಇಂದಿರಾಗಾಜಿನ ಮನೆ, ತೋಳನಕೆರೆ, ಉಣಕಲ್‌ ಕೆರೆ ಉದ್ಯಾನಗಳು ಜನರಿಂದ ಕಿಕ್ಕಿರಿದು ತುಂಬಿದ್ದವು.  

ಹಬ್ಬದ ಪ್ರಯುಕ್ತ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದ ಅಭಿಷೇಕ, ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಸಿದ್ಧಾರೂಢ ಮಠಕ್ಕೆ ಭಕ್ತರ ದಂಡು ಹರಿದು ಬಂದಿತು.

‘ಪ್ರತಿ ವರ್ಷ ಸಂಕ್ರಾಂತಿಗೆ ಇಂದಿರಾಗಾಜಿನ ಮನೆ ಉದ್ಯಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ಹಬ್ಬವನ್ನು ಆಚರಿಸಿ, ಹಬ್ಬದ ಊಟ ಸವಿಯುತ್ತೇವೆ’ ಎಂದು ಆನಂದ ನಗರದ ನಿವಾಸಿ ಜಯಶ್ರೀ ಹೇಳಿದರು.

ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಜನರು ಊಟ ಸವಿದರು

ತಮಿಳಿಗರ ಸಂಕ್ರಾಂತಿ ಸಂಭ್ರಮ

ನಗರದ ರೈಲು ನಿಲ್ದಾಣದ ಬಳಿಯ ಗೂಡ್ಸ್‌ಶೆಡ್‌ ರಸ್ತೆಯಲ್ಲಿರುವ ತಮಿಳು ಸಮಯದಾಯದರು  ಹಬ್ಬದ ಪ್ರಯುಕ್ತ ಮನೆ ಮನೆಯಿಂದ ಅಕ್ಕಿ ಸಂಗ್ರಹಿಸಿ ಸಿಹಿ ಪೊಂಗಲ್ ತಯಾರಿಸಿದರು. ‘ಸಂಕ್ರಾಂತಿಯನ್ನು ಪ್ರತಿ ವರ್ಷ ನಾಲ್ಕು ದಿನ ಆಚರಿಸುತ್ತೇವೆ. ಬುಧವಾರ ಭೋಗಿ ಆಚರಿಸಿ ಗುರುವಾರ ಪೊಂಗಲ್ ತಯಾರಿಸಲಾಗಿದೆ. ಶುಕ್ರವಾರ ಗೋಪೂಜೆ ಶನಿವಾರ ಹಿರಿಯರ ಪೂಜೆ ನಡೆಯಲಿದೆ’ ಎಂದು ಗೂಡ್ಸ್‌ಶೆಡ್ ರಸ್ತೆ ನಿವಾಸಿ ಸಮ್ಮಾನ್‌ಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.