
ಹುಬ್ಬಳ್ಳಿ: ತಾಲ್ಲೂಕಿನ ಇನಾಂ ವೀರಾಪುರ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್ ಅವರು, ದೌರ್ಜನ್ಯಕ್ಕೆ ಒಳಗಾದ ದೊಡಮನಿ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದರು.
ಮರ್ಯಾದೆಗೇಡು ಹತ್ಯೆಯಾದ ಮಾನ್ಯಾ ಅವರ ಪತಿ ವಿವೇಕಾನಂದ ದೊಡಮನಿ ಅವರಿಂದ ಪ್ರಕರಣದ ಮಾಹಿತಿ ಪಡೆದರು. ಕುಟುಂಬದ ಸದಸ್ಯರ ಜೊತೆಯೂ ಚರ್ಚಿಸಿ, ಏಳು–ಎಂಟು ತಿಂಗಳಿನಿಂದ ನಡೆಯುತ್ತಿದ್ದ ಘಟನೆಗಳ ಮಾಹಿತಿ ಸಂಗ್ರಹಿಸಿದರು.
ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ದಿವ್ಯಪ್ರಭು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರಿಂದ ಈವರೆಗೆ ಕೈಗೊಂಡಿರುವ ಕಾನೂನು ಕ್ರಮ, ಪ್ರಕರಣದ ತನಿಖಾ ಪ್ರಗತಿ ಹಾಗೂ ಸರ್ಕಾರ ನೀಡಿರುವ ಪರಿಹಾರದ ಕುರಿತು ವಿವರ ಪಡೆದರು. ಪ್ರಕರಣದ ಸತ್ಯಾಸತ್ಯತೆ ತಿಳಿಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬದಿಂದ ಮಾಹಿತಿ ಪಡೆದಿದ್ದೇವೆ. ಅವರ ಬೇಡಿಕೆಗಳನ್ನು ಆಲಿಸಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದರು.
‘ಪ್ರಕರಣ ನಡೆದ ಕುರಿತು ಮಾಧ್ಯಮಗಳ ವರದಿ ಆಧರಿಸಿ ಆಯೋಗ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಆಯೋಗದ ನ್ಯಾಯಾಂಗ ಸದಸ್ಯರು ಸಹ ಮಾಹಿತಿ ಪಡೆದಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಆ ಕುರಿತು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವ ಕುರಿತು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು’ ಎಂದು ಹೇಳಿದರು.
ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ.ವಂಟಿಗೊಡಿ, ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪಂಚಾಯ್ತಿ ಸಿಇಒ ಭುವನೇಶ ಪಾಟೀಲ, ಎಸ್‌ಪಿ ಗುಂಜನ್ ಆರ್ಯ, ಡಿವೈಎಸ್ಪಿ ವಿನೋದ ಮುಕ್ತೇದಾರ, ತಹಶೀಲ್ದಾರ್ ಜಿ.ಆರ್.ಮಜ್ಜಗಿ, ಇನ್‌ಸ್ಪೆಕ್ಟರ್ ಮುರಗೇಶ ಚನ್ನಣ್ಣನವರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭಾ ಇದ್ದರು.
ಸೌಮ್ಯಾ ರೆಡ್ಡಿ ಭೇಟಿ: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಅವರು ಮರ್ಯಾದೆಗೇಡು ಹತ್ಯೆ ನಡೆದ ಇನಾಂ ವೀರಾಪುರಕ್ಕೆ ಭೇಟಿ ನೀಡಿ, ಸಂತ್ರಸ್ತ ಕುಟುಂಬದವರಿಂದ ಮಾಹಿತಿ ಪಡೆದರು. ನಂತರ ವಿವೇಕಾನಂದ ಆಸ್ಪತ್ರೆಯಲ್ಲಿ ಮಾನ್ಯಾ ಅವರ ಅತ್ತೆ ರೇಣವ್ವ ದೊಡ್ಡಮನಿ ಅವರ ಆರೋಗ್ಯ ವಿಚಾರಿಸಿದರು.
ನಂತರ ಮಾತನಾಡಿದ ಅವರು, ಆರು ತಿಂಗಳ ಗರ್ಭಿಣಿಯನ್ನು ಅವರ ತಂದೆಯೇ ಕೊಲೆ ಮಾಡಿರುವ ಅಮಾನವೀಯ ಕೃತ್ಯ. ತಪ್ಪಿತಸ್ಥರಿಗೆ ಶಿಕ್ಷೆಯಾಗುವ ನಿಟ್ಟಿನಲ್ಲಿ ತ್ವರಿತಗತಿ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ ಎಂದರು.
‘ಇಂದಿನ ಆಧುನಿಕ ಯುಗದಲ್ಲಿಯೂ ಜಾತಿ, ಧರ್ಮದ ಕಾರಣಕ್ಕೆ ಕೊಲೆ ಮಾಡುವುದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ. ಜಾತಿಯ ವಿಷಯ ಬೀಜ ಬಿತ್ತುವ ಮನಸ್ಥಿತಿ ತೊಲಗಬೇಕು’ ಎಂದು ಹೇಳಿದರು.
‘ಊರು ಬಿಡದಂತೆ ಅಧ್ಯಕ್ಷರು ಸಲಹೆ’
‘ಮಾನ್ಯಾ ಕೊಲೆ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಕುಟುಂಬದ ಸದಸ್ಯರಿಗೆ ಮೂಲಸ್ಥಾನ ಬಿಡದಿರಲು ಸಲಹೆ ನೀಡಿದ್ದಾರೆ’ ಎಂದು ದಲಿತ ವಿಮೋಚನಾ ಸಮಿತಿಯ ಶ್ರೀಧರ ಕಂದಗಲ್ ತಿಳಿಸಿದ್ದಾರೆ. ‘ಹುಬ್ಬಳ್ಳಿ ಶಹರ ಪ್ರದೇಶದಲ್ಲಿ ಮನೆ ನೀಡಿದರೆ ಅದನ್ನು ಪಡೆಯಿರಿ. ಆದರೆ ಇಲ್ಲಿಂದ ಅಲ್ಲಿಗೆ ಹೋಗಿ ನೆಲೆಸಿದರೆ ಸರ್ಕಾರಕ್ಕೆ ಮುಜುಗರವಾಗುತ್ತದೆ. ಜಿಲ್ಲಾಡಳಿತ ಹಾಗೂ ಸರ್ಕಾರ ನಿಮ್ಮ ಜೊತೆಯಿದ್ದು ಹೇಳಿದಷ್ಟು ದಿನ ಪೊಲೀಸ್ ಭದ್ರತೆ ನೀಡಲಿವೆ. ಧೈರ್ಯದಿಂದ ಊರಲ್ಲಿ ಜೀವನ ನಡೆಸಬೇಕು’ ಎಂದು ಹೇಳಿರುವುದಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.