ADVERTISEMENT

ಎಪಿಎಂಸಿ ನಿವೇಶನಗಳಿಗೆ ಅಂತಿಮ ಕ್ರಯಪತ್ರ ಶೀಘ್ರ: ಸೋಮಶೇಖರ್‌

ಬೆಂಗಳೂರಿನಲ್ಲಿ ಸಭೆ ಕರೆದು ತೀರ್ಮಾನಿಸುವ ಭರವಸೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 13:46 IST
Last Updated 20 ಜೂನ್ 2020, 13:46 IST
ಎಪಿಎಂಸಿ ಆವರಣದ ಭಾನುವಾರ ಸಂತೆ ಸಂಕೀರ್ಣದಲ್ಲಿ ಆರಂಭವಾಗಿರುವ ರೈತ ಸಂತೆಯಲ್ಲಿ ಸಚಿವರಾದ ಎಸ್‌.ಟಿ.ಸೋಮಶೇಖರ ಹಾಗೂ ಜಗದೀಶ ಶೆಟ್ಟರ್‌ ಅವರು ರೈತರಿಂದ ಈರುಳ್ಳಿ ಖರೀದಿಸಿದರು
ಎಪಿಎಂಸಿ ಆವರಣದ ಭಾನುವಾರ ಸಂತೆ ಸಂಕೀರ್ಣದಲ್ಲಿ ಆರಂಭವಾಗಿರುವ ರೈತ ಸಂತೆಯಲ್ಲಿ ಸಚಿವರಾದ ಎಸ್‌.ಟಿ.ಸೋಮಶೇಖರ ಹಾಗೂ ಜಗದೀಶ ಶೆಟ್ಟರ್‌ ಅವರು ರೈತರಿಂದ ಈರುಳ್ಳಿ ಖರೀದಿಸಿದರು   

ಹುಬ್ಬಳ್ಳಿ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವರ್ತಕರಿಗೆ ಹಂಚಿರುವ ಗೋದಾಮು ಹಾಗೂ ನಿವೇಶನಗಳಿಗೆ ಅಂತಿಮ ಕ್ರಯಪತ್ರ ವಿತರಣೆ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಬಾಕಿ ಉಳಿಸಿಕೊಂಡಿರುವ ಹಳೆಯ ಆಸ್ತಿಕರವನ್ನು ಮನ್ನಾ ಮಾಡುವ ಸಂಬಂಧ ಶೀಘ್ರವೇ ಬೆಂಗಳೂರಿನಲ್ಲಿ ಸಭೆ ಕರೆದು ಚರ್ಚಿಸಲಾಗುವುದು ಎಂದು ಮಾರುಕಟ್ಟೆ ಮತ್ತು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ ಹೇಳಿದರು.

ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ವ್ಯಾಪಾರಿಗಳ ಸಂಘದ ವತಿಯಿಂದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದರು. ರಾಜ್ಯದ ಎಲ್ಲ ಮಹಾನಗರ ಪಾಲಿಕೆ, ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ವರ್ತಕರು 2008ಕ್ಕೂ ಹಿಂದಿನ ಆಸ್ತಿ ತೆರಿಗೆ ಪಾವತಿಸಿಲ್ಲ. ಬಾಕಿ ಆಸ್ತಿ ತೆರಿಗೆಯ ಪ್ರಸ್ತಾವ ನಗರಾಭಿವೃದ್ಧಿ ಇಲಾಖೆ ಪರಿಶೀಲನೆಯಲ್ಲಿದೆ. ಸ್ಥಳೀಯ ಆಡಳಿತ, ಎಪಿಎಂಸಿ ಹಾಗೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಶೀಘ್ರವೇ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡಲಾಗುವುದು. ಗುರುವಾರದ ಸಂಪುಟ ಸಭೆಯಲ್ಲೂ ಈ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ, ಎಪಿಎಂಸಿ ತಿದ್ದುಪಡಿಗೆ ತಂದಿರುವ ಸುಗ್ರೀವಾಜ್ಞೆಯಿಂದ ವ್ಯಾಪಾರಸ್ಥರು ಹಾಗೂ ರೈತರಿಗೆ ಯಾವುದೇ ತೊಂದರೆಯಿಲ್ಲ. ಸುಗ್ರೀವಾಜ್ಞೆಯು ರೈತರ ಹಿತಾಸಕ್ತಿ ರಕ್ಷಿಸಲಿದೆ ಎಂದರು.

ADVERTISEMENT

ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವರಾಜ ಯಕಲಾಶಪುರ, ಹಿರಿಯ ಮುಖಂಡ ಶಂಕರಣ್ಣ ಮುನವಳ್ಳಿ ಅವರು ಸಚಿವಧ್ವಯರಿಗೆ ಬೇಡಿಕೆಗಳ ಮನವಿ ಸಲ್ಲಿಸಿದರು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ ಮಹೇಂದ್ರ ಲದ್ದಡ, ಎಪಿಎಂಸಿ ಅಧ್ಯಕ್ಷ ರಾಮಚಂದ್ರ ಜಾಧವ್‌ ಇತರರು ಭಾಗವಹಿಸಿದ್ದರು.

ಇದಕ್ಕೂ ಮುನ್ನ ಸಹಕಾರ ಸಚಿವರು ಭಾನುವಾರ ಮಾರುಕಟ್ಟೆ ಸಂಕೀರ್ಣದಲ್ಲಿ ರೈತರ ಸಂತೆಗೆ ಚಾಲನೆ ನೀಡಿದರು.

ಆರ್‌ಎಸ್‌ಎಸ್‌ ಕಚೇರಿಗೆ ಭೇಟಿ:

ನಗರದ ಗೋಕುಲ ರಸ್ತೆಯಲ್ಲಿರುವ ಕೇಶವಕುಂಜಕ್ಕೆ ಸಚಿವಬ ಎಸ್‌.ಟಿ.ಸೋಮಶೇಖರ್‌ ಭೇಟಿ ನೀಡಿ, ಸಂಘದ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದರು.

ಪ್ರಮುಖರಾದ ಕೃಷ್ಣಮೂರ್ತಿ, ಸುರೇಶರಾವ್‌, ವೀರೇಶ್‌ ಇತರರು ಇದ್ದರು. ಸಮಾಲೋಚನೆ ಬಳಿಕ ಮಾತನಾಡಿದ ಸಂಘದ ಪ್ರಮುಖ ಸು.ರಾಮಣ್ಣ ಅವರು, ಸಹಕಾರಿ ಸಚಿವರಾದ ಸೋಮಶೇಖರ್‌ ಅವರು ಬೆಂಗಳೂರಿನ ಚನ್ನೇನಹಳ್ಳಿಯಲ್ಲಿರುವ ಸಂಘದ ಜನಸೇವಾ ವಿದ್ಯಾಕೇಂದ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅವರು ಭೇಟಿ ನೀಡುವ ಪ್ರತಿ ಜಿಲ್ಲೆಯಲ್ಲೂ ಸಂಘದ ಕಚೇರಿಗೆ ಭೇಟಿ ನೀಡುತ್ತಾರೆ. ಅಂತೆಯೇ ಇಲ್ಲಿಗೂ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.