ADVERTISEMENT

ಬರೋಬ್ಬರಿ ನಾಲ್ಕು ವರ್ಷಗಳ ನಂತರ ಧಾರವಾಡಕ್ಕೆ ಕಾಲಿಟ್ಟ ಶಾಸಕ ವಿನಯ್ ಕುಲಕರ್ಣಿ!

ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿನಯ ಕುಲಕರ್ಣಿ ಹೈಕೋರ್ಟ್‌ ಅನುಮತಿ ಮೇರೆಗೆ ಮಂಗಳವಾರ ಧಾರವಾಡಕ್ಕೆ ಪ್ರವೇಶಿಸಿ ಮತದಾನ

​ಪ್ರಜಾವಾಣಿ ವಾರ್ತೆ
Published 7 ಮೇ 2024, 13:52 IST
Last Updated 7 ಮೇ 2024, 13:52 IST
<div class="paragraphs"><p>ಶಾಸಕ ವಿನಯ್ ಕುಲಕರ್ಣಿ</p></div>

ಶಾಸಕ ವಿನಯ್ ಕುಲಕರ್ಣಿ

   

ಧಾರವಾಡ: ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿನಯ ಕುಲಕರ್ಣಿ ಹೈಕೋರ್ಟ್‌ ಅನುಮತಿ ಮೇರೆಗೆ ಮಂಗಳವಾರ ಧಾರವಾಡಕ್ಕೆ ಪ್ರವೇಶಿಸಿ ಮತ ಚಲಾಯಿಸಿದರು.

ನಗರದ ಸಪ್ತಾಪುರದ ಶಾರದಾ ಪದವಿಪೂರ್ವ ವಿದ್ಯಾಲಯದ ಮತಗಟ್ಟೆ 75ರಲ್ಲಿ ಅವರು ಮತ ಚಲಾಯಿಸಿದರು. ಸಂಜೆ 5.40ರ ಹೊತ್ತಿಗೆ ಬಂದು ಮತ ಹಾಕಿದರು. ಮತ ಚಲಾಯಿಸಿದ ನಂತರ ವಾಪಸ್‌ ತೆರಳಿದರು. ಪತ್ನಿ ಶಿವಲೀಲಾ ಮತ್ತು ಪುತ್ರ ವೈಶಾಲಿ ಮತದಾನ ಕೇಂದ್ರಕ್ಕೆ ಬಂದಿದ್ಚರು.

ADVERTISEMENT

ಶಾರದಾ ವಿದ್ಯಾಲಯದ ಮುಂಭಾಗದ ರಸ್ತೆಯಲ್ಲಿ ವಿನಯ ಕುಲಕರ್ಣಿ ಅಭಿಮಾನಿಗಳು ಜಮಾಯಿಸಿದ್ದರು. ಹಲವರು ವಿನಯ ಅವರಿಗೆ ಹೂವಿನ ಹಾರ ಹಾಕಿದರು. ಜೈಕಾರ ಕೂಗಿದರು.

ಶಾರದಾ ವಿದ್ಯಾಲಯದ ಆವರಣ ಪ್ರವೇಶ ದ್ವಾರದಲ್ಲಿ ಪೊಲೀಸ್‌ ಭದ್ರತೆ ನಿಯೋಜಿಸಲಾಗಿತ್ತು. ಅಭಿಮಾನಿಗಳು ಮತದಾನ ಕೇಂದ್ರ ಆವರಣಕ್ಕೆ ಭಾಗಕ್ಕೆ ಪ್ರವೇಶಿಸದಂತೆ ಪೊಲಿಸರು ನಿಗಾ ವಹಿಸಿದ್ದರು. ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ರೇಣುಕಾ ಸುಕುಮಾರ ಸ್ಥಳದಲ್ಲಿಇದ್ದರು.

ಶಾಸಕ ವಿನಯ ಕುಲಕರ್ಣಿ ಅವರು ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣದ ಆರೋಪ ಎದುರಿಸುತ್ತಿದ್ದಾರೆ. ವಿನಯ ಅವರಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಇದೆ.

‘ಮತದಾನಕ್ಕೆ ಅವಕಾಶ–ಸಂತಸ’

‘ಹೈಕೋರ್ಟ್‌ ನನಗೆ ಮತದಾನದ ಹಕ್ಕು ಚಲಾಯಿಸಲು ಅವಕಾಶ ನೀಡಿದ್ದಕ್ಕೆ ಮತ್ತು ನಾಲ್ಕು ವರ್ಷಗಳ ನಂತರ ಧಾರವಾಡಕ್ಕೆ ಬಂದಿದ್ದು ಸಂತೋಷವಾಗಿದೆ’ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.

ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘2023ರ ವಿಧಾನಸಭೆ ಚುನಾವಣೆಯಲ್ಲಿ ಧಾರವಾಡಕ್ಕೆ ಬಂದು ನನ್ನ ನಾಮಪತ್ರ ಸಲ್ಲಿಸಲೂ, ಮತ ಚಲಾಯಿಸಲು ಅವಕಾಶ ಸಿಕ್ಕಿರಲಿಲ್ಲ. ಈ ಚುನಾವಣೆಯಲ್ಲಿ ಮತ ಚಲಾವಣೆಗೆ ಅವಕಾಶ ಸಿಕ್ಕಿದೆ. 25 ವರ್ಷದಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ನಮ್ಮ ಭಾಗದ ಜನರು ನನ್ನ ಮೇಲೆ ವಿಶ್ವಾಸ ಇಟ್ಟಿದ್ಧಾರೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕೋರ್ಟ್‌ ಯಾವುದೇ ಷರತ್ತು ವಿಧಿಸಿಲ್ಲ. ಮತ ಹಾಕಿ ವಾಪಸಾಗುವಂತೆ ಆದೇಶಿಸಿದೆ’ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.