ADVERTISEMENT

ವಿಧಾನ ಪರಿಷತ್ ಚುನಾವಣೆ | ನಂಗೊಂದು, ನಿಂಗೊಂದು: ಬಿಜೆಪಿ, ಕಾಂಗ್ರೆಸ್‌ ಹೊಂದಾಣಿಕೆ

ಎರಡು ಸ್ಥಾನಗಳಿದ್ದರೂ ಒಬ್ಬೊಬ್ಬರನ್ನೇ ಕಣಕ್ಕಿಳಿಸಿದ ರಾಷ್ಟ್ರೀಯ ಪಕ್ಷಗಳು

ಬಸವರಾಜ ಹವಾಲ್ದಾರ
Published 3 ಡಿಸೆಂಬರ್ 2021, 19:30 IST
Last Updated 3 ಡಿಸೆಂಬರ್ 2021, 19:30 IST
ಸಲೀಂ ಅಹ್ಮದ್ ಮತ್ತು ಪ್ರದೀಪ ಶೆಟ್ಟರ್
ಸಲೀಂ ಅಹ್ಮದ್ ಮತ್ತು ಪ್ರದೀಪ ಶೆಟ್ಟರ್   

ಹುಬ್ಬಳ್ಳಿ: ಧಾರವಾಡ, ಗದಗ ಹಾಗೂ ಹಾವೇರಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ ಎರಡು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ‘ನಂಗೊಂದು, ನಿಂಗೊಂದು’ ಎನ್ನುವ ಹೊಂದಾಣಿಕೆಯ ತಂತ್ರಕ್ಕೆ ಮೊರೆ ಹೋಗಿವೆ.

ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಎರಡೂ ಸ್ಥಾನಗಳನ್ನು ಗೆದ್ದುಕೊಳ್ಳುವ ಅವಕಾಶವನ್ನು ಎರಡೂ ರಾಷ್ಟ್ರೀಯ ಪಕ್ಷಗಳು ಚುನಾವಣೆ ಫಲಿತಾಂಶಕ್ಕೆ ಮುನ್ನವೇ ಕೈಚೆಲ್ಲಿವೆ. ಕಳೆದ ಬಾರಿ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಜೆಡಿಎಸ್‌, ಈ ಬಾರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

ಮೂರು ಜಿಲ್ಲೆಗಳಲ್ಲೂ ಪ್ರಬಲವಾಗಿದ್ದೇವೆ. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಬೆಂಬಲಿಗರೇ ಗೆದ್ದಿದ್ದಾರೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ಬಹಿರಂಗ ಸಭೆಗಳಲ್ಲಿ ಹೇಳಿಕೆ ನೀಡಿದರೂ, ಎರಡನೇ ಅಭ್ಯರ್ಥಿ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳಲು ಮುಂದಾಗಿಲ್ಲ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪ್ರಬಲವಾಗಿದೆ ಎನ್ನುವ ನಾಯಕರು ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ರಿಸ್ಕ್‌ ತೆಗೆದುಕೊಳ್ಳದೇ ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದಾರೆ.

ADVERTISEMENT

ಜೆಡಿಎಸ್‌ನೊಂದಿಗೆ ಬಿಜೆಪಿಯವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ‘ಜೆಡಿಎಸ್‌ ಪಕ್ಷವು ಬಿಜೆಪಿಯ ಬಿ ಟೀಂ’ ಎನ್ನುವ ಕಾಂಗ್ರೆಸ್‌ ನಾಯಕರೂ ಎರಡನೇ ಅಭ್ಯರ್ಥಿ ಕಣಕ್ಕಿಳಿಸಿಲ್ಲ.ಇಬ್ಬರನ್ನು ಕಣಕ್ಕಿಳಿಸಿದರೆ ಸೋಲಿನ ಭಯ ಎದುರಾಗುವ ಆತಂಕ ಎರಡೂ ಪಕ್ಷಗಳಲ್ಲಿದೆ. ಹಾಗಾಗಿಯೇ, ಹೊಂದಾಣಿಕೆ ಮಂತ್ರ ಜಪಿಸಿವೆ.

ಬಿಜೆಪಿಗಿದು ಪ್ರತಿಷ್ಠೆಯ ಕ್ಷೇತ್ರ:ಈಗ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಎರಡು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ತವರು ಜಿಲ್ಲೆ ಧಾರವಾಡ ಹಾಗೂ ಅವರು ಶಾಸಕರಾಗಿರುವ ಶಿಗ್ಗಾವಿ ಕ್ಷೇತ್ರ ಇದೇ ಕ್ಷೇತ್ರದಲ್ಲಿ ಬರುತ್ತವೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.

ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್‌, ಶಾಸಕ ಜಗದೀಶ ಶೆಟ್ಟರ್‌ ಅವರ ಸಹೋದರ.ಕ್ಷೇತ್ರ ವ್ಯಾಪ್ತಿಯ 17 ಶಾಸಕರಲ್ಲಿ 13 ಶಾಸಕರು ಹಾಗೂ ಇಬ್ಬರು ಸಂಸದರು ಬಿಜೆಪಿಯವರಿದ್ದಾರೆ. ಹೀಗಾಗಿ ಪ್ರಥಮ ಪ್ರಾಶಸ್ತ್ಯದ ಹೆಚ್ಚು ಮತಗಳಲ್ಲಿಯೇ ಗೆಲುವು ಸಾಧಿಸಲು ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ. ಪರಿಷತ್ ಸದಸ್ಯರಾಗಿದ್ದಾಗ ಪ್ರದೀಪ ಶೆಟ್ಟರ್ ಅವರು ಕ್ಷೇತ್ರದಲ್ಲಿ ಸಂಚರಿಸಿ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂಬ ಅಸಮಾಧಾನ ಅಲ್ಲಲ್ಲಿ ವ್ಯಕ್ತವಾಗುತ್ತಿದೆ. ಅದನ್ನು ಶಮನಗೊಳಿಸುವ ಕಾರ್ಯವೂ ನಡೆದಿದೆ.

ಕಾಂಗ್ರೆಸ್‌ ಅಭ್ಯರ್ಥಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಬೆಂಗಳೂರು ಮೂಲದವರಾದರೂ ಎರಡು ಬಾರಿ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರಿಂದ ಪರಿಚಿತರಾಗಿದ್ದಾರೆ. ಅವರ ಗೆಲುವಿಗೆ ಕ್ಷೇತ್ರ ವ್ಯಾಪ್ತಿಯ ನಾಲ್ವರು ಶಾಸಕರು ಹಾಗೂ ಮುಖಂಡರು ಸಂಘಟಿತ ಯತ್ನ ಮಾಡುತ್ತಿದ್ದಾರೆ. ಜೊತೆಗೆ ಜೆಡಿಎಸ್‌ ಮುಖಂಡ ಎನ್‌.ಎಚ್‌. ಕೋನರಡ್ಡಿ ಅವರು ಬಹಿರಂಗವಾಗಿಯೇ ಕಾಂಗ್ರೆಸ್‌ ಬೆಂಬಲಿಸಿದ್ದಾರೆ.

ಜನತಾ ಪಕ್ಷದಿಂದ ಇಬ್ಬರು ಅಭ್ಯರ್ಥಿಗಳು ಸೇರಿದಂತೆ ಒಟ್ಟು 10 ಮಂದಿ ಕಣದಲ್ಲಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿರುವ ಹಾವೇರಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಸದ್ದು ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಬೆಂಬಲಿತ ಸದಸ್ಯರ ನೆರವಿನಿಂದ ಎಪಿಎಂಸಿ ಅಧ್ಯಕ್ಷರಾಗಿದ್ದಾರೆ. ಎರಡು ಸ್ಥಾನಗಳಿಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ತಲಾ ಒಬ್ಬರೇ ಅಭ್ಯರ್ಥಿ ಕಣಕ್ಕಿಳಿಸಿರುವುದರಿಂದ ಹೆಚ್ಚೂ–ಕಡಿಮೆ ಅವರ ಗೆಲುವಿನ ಹಾದಿ ಸುಗಮವಾಗಿದೆ.

* ಜನರ, ಜನಪ್ರತಿನಿಧಿಗಳ ನಾಡಿ ಮಿಡಿತ ಅರಿತಿದ್ದೇನೆ. ಗ್ರಾಮ ಪಂಚಾಯ್ತಿಗಳಿಗೆ ನೇರ ಅನುದಾನ ತರಲು, ವೇತನ ಹೆಚ್ಚಳಕ್ಕೆ ಹೋರಾಟ ಮಾಡಿದ್ದೇನೆ. ಪರಿಷತ್‌ ಸದಸ್ಯರ ಅನುದಾನ ಪೂರ್ಣವಾಗಿ ಬಳಸಿದ್ದೇನೆ. ಹೆಚ್ಚಿನ ಅನುದಾನ ತಂದಿದ್ದೇನೆ.

–ಪ್ರದೀಪ ಶೆಟ್ಟರ್, ಬಿಜೆಪಿ ಅಭ್ಯರ್ಥಿ

* ನಾನು ಹೊರಗಿನವನಲ್ಲ. 25 ವರ್ಷಗಳಿಂದ ಹಾವೇರಿ ಕ್ಷೇತ್ರದ ಮತದಾರ. ಅಲ್ಲಿಂದ ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದೇನೆ. ಮೂರೂ ಜಿಲ್ಲೆಯ ಎಲ್ಲ ಮುಖಂಡರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ

–ಸಲೀಂ ಅಹ್ಮದ್, ಕಾಂಗ್ರೆಸ್‌ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.