ADVERTISEMENT

ಬ್ಯಾಂಕ್ ಗ್ರಾಹಕರೇ, ಎಚ್ಚರ! ಖಾತೆಯಲ್ಲಿದ್ದ ಹಣ ಮಾಯ!

ನಾಗರಾಜ್ ಬಿ.ಎನ್‌.
Published 26 ಜನವರಿ 2021, 19:30 IST
Last Updated 26 ಜನವರಿ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹುಬ್ಬಳ್ಳಿ: ಬ್ಯಾಂಕ್ ಗ್ರಾಹಕರೇ, ಎಚ್ಚರ! ನಿಮ್ಮ ಗಮನಕ್ಕೆ ಬಾರದೆ ಬ್ಯಾಂಕ್‌ ಖಾತೆಯಿಂದ ಹಣ ಡ್ರಾ ಆಗಬಹುದು!

‘ಸ್ಕಿಮ್ಮರ್‌’ ಉಪಕರಣ ಹಾಗೂ ‘ಮೈಕ್ರೊ ಕ್ಯಾಮೆರಾ’ ಬಳಸಿ ಎಟಿಎಂ ಕಾರ್ಡ್‌ಗಳ ದತ್ತಾಂಶ(ಡೇಟಾ) ಕದ್ದು ಬ್ಯಾಂಕ್‌ ಖಾತೆಗೆ ಕನ್ನ ಹಾಕುವ ವಂಚಕರ ‘ಗ್ಯಾಂಗ್‌’ ಅವಳಿ ನಗರದಲ್ಲಿ ಸಕ್ರಿಯವಾಗಿದೆ. ಎಟಿಎಂ ಯಂತ್ರಗಳಿಗೆ ಸ್ಕಿಮ್ಮರ್‌ ಅಳವಡಿಸಿ ಲಕ್ಷಾಂತರ ರೂಪಾಯಿಗಳನ್ನು ದೋಚಿರುವ ಕುರಿತು ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಇದೇ ತಿಂಗಳು‌ 10 ಪ್ರಕರಣಗಳು ದಾಖಲಾಗಿವೆ!

ಅವಳಿ ನಗರದಲ್ಲಿ ವಿವಿಧ ಬ್ಯಾಂಕ್‌ಗಳ 88 ಎಟಿಎಂ ಕೇಂದ್ರಗಳಿವೆ. ಬಹುತೇಕ ಕೇಂದ್ರಗಳಲ್ಲಿ ಭದ್ರತೆ ವ್ಯವಸ್ಥೆಯೇ ಇಲ್ಲ. 2013ರಲ್ಲಿ ಬೆಂಗಳೂರಿನ ಎಟಿಎಂ ಕೇಂದ್ರವೊಂದರಲ್ಲಿ ಯುವತಿ ಮೇಲೆ ಹಲ್ಲೆ ನಡೆದಾಗ, ಪೊಲೀಸ್‌ ಇಲಾಖೆ, ಸಾರ್ವಜನಿಕ ಸುರಕ್ಷತಾ ಮಾರ್ಗಸೂಚಿ ರೂಪಿಸಿ, ಅದನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿತ್ತು. ಎಂಟು ವರ್ಷ ಕಳೆದರೂ ಮಾರ್ಗಸೂಚಿ ಪಾಲನೆಯಾಗುತ್ತಿಲ್ಲ. ಭದ್ರತಾ ಸಿಬ್ಬಂದಿ ಇಲ್ಲ ಎನ್ನುವ ಜೊತೆಗೆ, ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಸಹ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದು ವಂಚಕರಿಗೆ ಸುಲಭವಾಗಿ ಎಟಿಎಂ ಯಂತ್ರಗಳಿಗೆ ಸ್ಕಿಮ್ಮರ್ ಉಪಕರಣ ಅಳವಡಿಸಲು ಸಹಾಯ ಮಾಡಿಕೊಟ್ಟಂತಾಗಿದೆ.

ADVERTISEMENT

ಹೀಗಿದೆ ಸ್ಕಿಮ್ಮರ್ ಕಾರ್ಯಾಚರಣೆ: ಭದ್ರತೆ ಇಲ್ಲದ ಎಟಿಎಂ ಕೇಂದ್ರಗಳೇ ಈ ಗ್ಯಾಂಗ್‌ನ ಟಾರ್ಗೆಟ್ ಆಗಿವೆ. ಇಂತಹ ಎಟಿಎಂ‌ ಕೇಂದ್ರಗಳಲ್ಲಿ ಎಟಿಎಂ ಕಾರ್ಡ್‌ ಹಾಕುವ ಸಾಧನಕ್ಕೆ ‘ಸ್ಕಿಮ್ಮರ್‌’ ಉಪಕರಣ ಅಳವಡಿಸಿ, ಪಿನ್‌ಕೋಡ್‌ ಒತ್ತುವ ಕೀಪ್ಯಾಡ್‌ ಮೇಲ್ಭಾಗದಲ್ಲಿ ಮೈಕ್ರೊ ಕ್ಯಾಮೆರಾ ಇಡುತ್ತಾರೆ. ಇದಕ್ಕೆ 16, 32, 64 ಜಿಬಿ ಸಾಮರ್ಥ್ಯದ ಪೆನ್ ಡ್ರೈವ್ ಹಾಗೂ ಬ್ಯಾಟರಿ ಜೋಡಿಸುತ್ತಾರೆ. ಎಟಿಎಂಗೆ ಗ್ರಾಹಕರು ಕಾರ್ಡ್‌ ಹಾಕಿದ ತಕ್ಷಣ ಅದರ ದತ್ತಾಂಶ ‘ಸ್ಕಿಮ್ಮರ್‌’ಗೆ ರವಾನೆಯಾಗುತ್ತದೆ. ಪಾಸವರ್ಡ್‌ನ್ನು ಪುಟ್ಟ ಕ್ಯಾಮೆರಾ ಸೆರೆಹಿಡಿಯುತ್ತದೆ. ಪೆನ್ ಡ್ರೈವ್‌ಲ್ಲಿ ಸಂಗ್ರಹವಾದ ದತ್ತಾಂಶ ಹಾಗೂ ಪಾಸವರ್ಡ್ ಸಂಗ್ರಹಿಸಿ ನಕಲಿ ಎಟಿಎಂ ಕಾರ್ಡ್‌ ಮೂಲಕ ಹಣ ಡ್ರಾ ಮಾಡಿಕೊಳ್ಳುತ್ತಾರೆ.

‘ಮೊಬೈಲ್‌ಗೆ ನಿಮ್ಮ ಬ್ಯಾಂಕ್‌ ಖಾತೆಯಿಂದ ₹95 ಸಾವಿರ ಡ್ರಾ ಮಾಡಲಾಗಿದೆ ಎಂದು ಸಂದೇಶ ಬಂದಿತು. ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಎಟಿಎಂ ಕಾರ್ಡ್‌ನಿಂದ ಹಣ ತೆಗೆಯಲಾಗಿದೆ ಎಂದರು. ಎಟಿಎಂ ನನ್ನ ಹೊರತು ಯಾರ ಬಳಿಯೂ ಇರುವುದಿಲ್ಲ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಬ್ಯಾಂಕ್ ಸಿಬ್ಬಂದಿಯಲ್ಲೂ ಉತ್ತರವಿಲ್ಲ’ ಎಂದು ಹಣ ಕಳೆದುಕೊಂಡ ವಿದ್ಯಾನಗರದ ಫೋಟೊ ಸ್ಟುಡಿಯೊ ಮಾಲೀಕ ವೆಂಕಟೇಶ ಮಿಸ್ಕಿನ್‌ ಹೇಳಿದರು.

ಸೈಬರ್ ಠಾಣೆ ಪಿಎಸ್ಐ ರಾಘವೇಂದ್ರ ಗೊರ್ಲ, ‘ಭದ್ರತಾ ಸಿಬ್ಬಂದಿ ಇಲ್ಲದಿರುವ ಎಟಿಎಂ ಕೇಂದ್ರಗಳಲ್ಲಿ ವಂಚಕರು ಸ್ಕಿಮ್ಮರ್ ಅಳವಡಿಸಿ ಹಣ ಕದಿಯುತ್ತಿದ್ದಾರೆ. ಎಟಿಎಂ ಕೇಂದ್ರಗಳ‌ ನಿರ್ವಹಣೆಯಲ್ಲಿ ಬ್ಯಾಂಕ್‌ಗಳು ನಿರ್ಲಕ್ಷ್ಯ ವಹಸಿಸುತ್ತಿರುವುದೇ ಇದಕ್ಕೆ ಕಾರಣ. ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ಭದ್ರತಾ ಸಿಬ್ಬಂದಿ ನಿಯೋಜಿಸಲು ಸೂಚಿಸಿದ್ದೇವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.