ಧಾರವಾಡ: ಹಿಂದೂ–ಮುಸ್ಲಿಮರ ಭಾವೈಕ್ಯದ ಮೊಹರಂ ಅನ್ನು ಜಿಲ್ಲೆಯಾದ್ಯಂತ ಭಾನುವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ನಗರದ ಹೊಸಯಲ್ಲಾಪುರ, ಟಿಪ್ಪು ವೃತ್ತ, ಬೊಸಪ್ಪ ಚೌಕ್, ಹೆಬ್ಬಳ್ಳಿ ಅಗಸಿ, ಮಾಳಾಪುರ, ಮದಿಹಾಳ, ಜಿಲ್ಲಾಸ್ಪತ್ರೆ ದರ್ಗಾ ಮೊದಲಾದೆಡೆ ಪಂಜಾಗಳನ್ನು ಕೂರಿಸಲಾಗಿತ್ತು. ಡೋಲಿ, ಪಂಜಾಗಳನ್ನು ಹೊತ್ತ ಭಕ್ತರು ಕೊಂಡ ಹಾಯ್ದರು. ಒಣ ಕೊಬ್ಬರಿ, ಖಾರೀಕು ಅರ್ಪಿಸಿದರು. ಪಂಜಾಗಳ ಮೆರವಣಿಗೆ ನಡೆಯಿತು.
ಹೊಸಯಲ್ಲಾಪುರದಲ್ಲಿ ಇರಾನಿ ಮುಸ್ಲಿಮರು ದೇಹ ದಂಡಿಸಿದರು. ‘ಯಾ ಹಸೇನ್... ಯಾ ಹುಸೇನ್...’ ಎಂದು ರಕ್ತ ಬರುವವರೆಗೂ ಹೊಡೆದುಕೊಂಡು ಭಕ್ತಿ ಸಮರ್ಪಿಸಿದರು. ಜನ್ನತ್ ನಗರದ ಮಸೀದಿಯಿಂದ ಆರಂಭವಾದ ಪಂಜಾಗಳ ಮೆರವಣಿಗೆ ಧಾರವಾಡ ಟೋಲ್ ನಾಕಾ ಮಾರ್ಗವಾಗಿ ಹಾದು ಹೊಸ ಯಲ್ಲಾಪುರದ ನುಚ್ಚಂಬ್ಲಿ ಬಾವಿವರೆಗೆ ಸಾಗಿತು. ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮನಸೆಳೆದ ದೇವರ ಮೆರವಣಿಗೆ
ಹುಬ್ಬಳ್ಳಿ: ಮೊಹರಂ ಅಂಗವಾಗಿ ಹತ್ತು ದಿನಗಳ ಹಿಂದೆ ಪ್ರತಿಷ್ಠಾಪಿಸಲಾಗಿದ್ದ ಪಂಜಾಗಳ ಮೆರವಣಿಗೆ ಭಕ್ತರ ಸಮ್ಮುಖದಲ್ಲಿ ಬೀದಿ ಬೀದಿಗಳಲ್ಲಿ ನಡೆಯಿತು.
ಹಳೇ ಹುಬ್ಬಳ್ಳಿ, ಗಣೇಶ ಪೇಟೆ ಸೇರಿದಂತೆ ವಿವಿಧ ದರ್ಗಾಗಳಿಂದ ಹೊರಟ ಪಂಜಾಗಳ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು.ಹಿಂದೂ–ಮುಸ್ಲಿಂ ಭೇದವಿಲ್ಲದೆ ಪಂಜಾ ದೇವರಿಗೆ ಹರಕೆ ಹೊತ್ತ ಭಕ್ತರು ಒಣ ಕೊಬ್ಬರಿ, ಖಾರೀಕು, ಬೆಲ್ಲ ಸಮರ್ಪಿಸಿದರು. ಕೆಲವರು ಕೆಂಡ ಹಾಯ್ದು ಹರಕೆ ತೀರಿಸಿದರು. ಮಸೀದಿಗಳಲ್ಲಿ ಪ್ರಾರ್ಥನೆ ನೆರವೇರಿಸಲಾಯಿತು.
ನಗರದ ಉಣಕಲ್‌ನ ಸಂತೆ ಬಯಲು ಕಾಶೀಮ್ ದುಲ್ಹಾ ದರ್ಗಾ ಯಂಗ್ ಕಮಿಟಿ ವತಿಯಿಂದ ನಡೆದ ಆಚರಣೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಉಮೇಶಗೌಡ ಕೌಜಗೇರಿ, ಪ್ರಮುಖ ಚನ್ನು ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.