ADVERTISEMENT

₹2.50 ಕೋಟಿ ಅನುದಾನಕ್ಕೆ ಪ್ರಸ್ತಾವ; ಸೌಲಭ್ಯ ನಿರೀಕ್ಷೆಯಲ್ಲಿ ಸಂಗೀತ ವಿವಿ ಕೇಂದ್ರ

ವಿ.ವಿ ಕುಲಪತಿ ಪ್ರೊ,ನಾಗೇಶ ವಿ.ಬೆಟ್ಟಕೋಟೆ

ಸತೀಶ ಬಿ.
Published 17 ಡಿಸೆಂಬರ್ 2025, 8:07 IST
Last Updated 17 ಡಿಸೆಂಬರ್ 2025, 8:07 IST
ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಹುಬ್ಬಳ್ಳಿಯ ಪ್ರಾದೇಶಿಕ ಕೇಂದ್ರದ ಪ್ರವೇಶ ದ್ವಾರ
ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಹುಬ್ಬಳ್ಳಿಯ ಪ್ರಾದೇಶಿಕ ಕೇಂದ್ರದ ಪ್ರವೇಶ ದ್ವಾರ   

ಹುಬ್ಬಳ್ಳಿ: ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಹುಬ್ಬಳ್ಳಿಯ ಪ್ರಾದೇಶಿಕ ಕೇಂದ್ರದಲ್ಲಿ ತರಗತಿ ಕೊಠಡಿಗಳು ಸೇರಿ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಬೇಕಿದೆ. 

ಈ ಹಿಂದೆ ಇದ್ದ ಗಂಗೂಬಾಯಿ ಹಾನಗಲ್‌ ಭಾರತೀಯ ಶಾಸ್ತ್ರೀಯ ಸಂಗೀತ ಗುರುಕುಲವನ್ನು 2024ರ ಫೆಬ್ರುವರಿ 28ರಂದು ವಿಶ್ವವಿದ್ಯಾಲಯದಲ್ಲಿ ವಿಲೀನ ಮಾಡಲಾಗಿದೆ. ವಿಶ್ವವಿದ್ಯಾಲಯದ ಪಠ್ಯಕ್ರಮದ ಅನ್ವಯ ಈಗ ತರಗತಿಗಳು ನಡೆಯುತ್ತಿವೆ. 

ಸದ್ಯ ಭರತನಾಟ್ಯ, ನಾಟಕ, ಹಿಂದೂಸ್ತಾನಿ ಸಂಗೀತ ಹಾಡುಗಾರಿಕೆ, ತಬಲಾ ಮತ್ತು ಸರ್ಟಿಫಿಕೆಟ್‌ ಕೋರ್ಸ್‌ಗಳಲ್ಲಿ 61 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಗುರುಕುಲವಿದ್ದಾಗ ಒಬ್ಬ ಗುರುವಿನ ಬಳಿ ಆರು ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಈಗ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ.

ADVERTISEMENT

ಏಳು ಅತಿಥಿ ಉಪನ್ಯಾಸಕರು ಇದ್ದಾರೆ. ಅಲ್ಲದೆ, ಸಂದರ್ಶಕ ಪ್ರಾಧ್ಯಾಪಕರು ಸಹ ಬೋಧನೆ ಮಾಡುತ್ತಾರೆ. ಕಾಯಂ ಉಪನ್ಯಾಸಕರನ್ನು ನೇಮಕ ಮಾಡಬೇಕಿದೆ.

ವಿ.ವಿ ಯ ಏಕೈಕ ಪ್ರಾದೇಶಿಕ ಕೇಂದ್ರ ಇದಾಗಿದ್ದು, ಬೆಂಗಳೂರು, ತುಮಕೂರು, ಗದಗ, ರಾಯಚೂರು, ಉತ್ತರಕನ್ನಡ, ಉಡುಪಿ, ಕಲಬುರಗಿ ಸೇರಿಸಿ ವಿವಿಧ ಭಾಗಗಗಳ ವಿದ್ಯಾರ್ಥಿಗಳು ಇಲ್ಲಿ ಇದ್ದಾರೆ. ಈ ಹಿಂದೆ ಗುರುಕುಲವಿದ್ದಾಗ ಊಟ, ವಸತಿ ವ್ಯವಸ್ಥೆ ಇತ್ತು. ಈಗ ಇಲ್ಲಿ ಓದುವ ವಿದ್ಯಾರ್ಥಗಳು ಇತರ ಹಾಸ್ಟೆಲ್‌, ಪಿ.ಜಿಗಳಲ್ಲಿ ವಾಸ್ತವ್ಯ ಮಾಡಬೇಕಿದೆ. ಹೀಗಾಗಿ ಇಲ್ಲಿ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕಿದೆ.  

‘ಗುರು ಮನೆ’ಗಳನ್ನು ತರಗತಿ ಕೊಠಡಿಗಳಾಗಿ ಬಳಸಲಾಗುತ್ತಿದ್ದು, ಅವುಗಳನ್ನು ನವೀಕರಣ  ಮಾಡಬೇಕಿದೆ. ಅಲ್ಲದೆ, ವಿವಿಧ ಸೌಲಭ‌ಯಕ್ಕಾಗಿ ₹2.50 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎನ್ನುತ್ತಾರೆ ವಿ.ವಿಯ ಕುಲಪತಿ ಪ್ರೊ.ನಾಗೇಶ್‌ ವಿ.ಬೆಟ್ಟಕೋಟೆ.

ವಿ.ವಿಯ ₹50 ಲಕ್ಷಕ್ಕೂ ಹೆಚ್ಚು ಅನುದಾನದಲ್ಲಿ ಈಗ ಸ್ಮಾರ್ಟ್‌ ಕ್ಲಾಸ್,  ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಆವರಣ ಗೋಡೆಗಳ ಮೇಲೆ ವರ್ಲಿ ಕಲಾಕೃತಿಗಳ ರಚನೆ ಮಾಡಲಾಗಿದೆ.  ಕೊಠಡಿಗಳ ಚಾವಣಿ ದುರಸ್ತಿಯಾಗಬೇಕಿದ್ದು, ಇಲ್ಲಿ ಬಯಲು ರಂಗಮಂದಿರ ನಿರ್ಮಿಸುವಂತೆ ಬೇಡಿಕೆ ಇದೆ ಎಂದರು. 

ಒಂದು ವಿಭಾಗದ ತೆರೆಯಲು ಕನಿಷ್ಠ 10 ವಿದ್ಯಾರ್ಥಿಗಳು ಅಗತ್ಯ ಇದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ಅದಕ್ಕೆ ತಕ್ಕಂತೆ ತರಗತಿ ಕೊಠಡಿಗಳನ್ನು ಹೆಚ್ಚಿಸಬೇಕಿದ್ದು, ಅಗತ್ಯ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಸಾಹಿತ್ಯ, ಸಂಗೀತ, ನೃತ್ತ ಮತ್ತು ನಾಟಕ ಕಲೆಗಳಿಗೆ ಈ ಭಾಗವು ಬಹುದೊಡ್ಡ ಕೊಡುಗೆ ನೀಡಿದೆ. ಇಲ್ಲಿನ ಪ್ರಾದೇಶಿಕ ಕೇಂದ್ರವು ವಿಶ್ವವಿದ್ಯಾಲಯದ ಮಟ್ಟಕ್ಕೆ ಬೆಳೆಯಬೇಕು. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿ.ವಿಯ ಹುಬ್ಬಳ್ಳಿ ಪ್ರಾದೇಶಿಕ ಕೇಂದ್ರದ ಕಚೇರಿ ಮೇಲ್ವಿಚಾರಕ ಮಾರಣ್ಣ ಬಿ.ಆರ್. ತಿಳಿಸಿದರು.

ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಇಲ್ಲಿನ ಪ್ರಾದೇಶಿಕ ಕೇಂದ್ರದಲ್ಲಿ ವಿವಿಧ ಕೋರ್ಸ್‌ಗಳನ್ನು ಆರಂಭಿಸಲಾಗುವುದು. ಅದಕ್ಕೆ ತಕ್ಕಂತೆ ಇಲ್ಲಿ ಸೌಲಭ್ಯ ಕಲ್ಪಿಸಲು ಅನುದಾನ ಅಗತ್ಯ ಇದೆ.
– ನಾಗೇಶ್‌ ವಿ.ಬೆಟ್ಟಕೋಟೆ, ಕುಲಪತಿ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿ.ವಿ ಮೈಸೂರು

‘ಕೇಂದ್ರ ಸಮರ್ಪಕವಾಗಿ ನಡೆಯಲಿ’

ಗಂಗೂಬಾಯಿ ಹಾನಗಲ್‌ ಅವರ ಧಾರವಾಡದ ಮನೆ ಪಾಳು ಬಿದ್ದಿದೆ. ಸರ್ಕಾರದ ಅದನ್ನು ಸ್ಮಾರಕವಾಗಿ ರಕ್ಷಣೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದೆ. ಗುರು ಶಿಷ್ಯ ಪರಂಪರೆಯ ಗಂಗೂಬಾಯಿ ಹಾನಗಲ್‌ ಭಾರತೀಯ ಶಾಸ್ತ್ರೀಯ ಸಂಗೀತ ಗುರುಕುಲ ಈಗ ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರವಾಗಿದೆ. ಅದನ್ನಾದರೂ ಸಮರ್ಪಕವಾಗಿ ನಡೆಸಿಕೊಂಡು ಹೋಗಬೇಕು. ಅಗತ್ಯ ಸೌಲಭ್ಯ ಕಲ್ಪಿಸಲು ಅನುದಾನ ನೀಡಬೇಕು. ಅಜ್ಜಿಯ ಹೆಸರುಳಿಸುವ ಕೆಲಸ ಮಾಡಬೇಕು.
– ವೈಷ್ಣವಿ ಹಾನಗಲ್‌, ಗಂಗೂಬಾಯಿ ಹಾನಗಲ್ ಅವರ ಮೊಮ್ಮಗಳು ಮತ್ತು ವಿ.ವಿಯ ಪ್ರಾದೇಶಿಕ ಕೇಂದ್ರದ ಪ್ರಾಧ್ಯಾಪಕಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.