ADVERTISEMENT

ಮೌಲ್ಯ ಕಳೆದುಕೊಂಡ ಸುದ್ದಿ ಮಾಧ್ಯಮ

ನಾರದ ಜಯಂತಿಯಲ್ಲಿ ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಬೇಸರ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 10:03 IST
Last Updated 28 ಜುಲೈ 2019, 10:03 IST
ಆದ್ಯ ಪತ್ರಕರ್ತ ನಾರದ ಜಯಂತಿಯಲ್ಲಿ ಗಣ್ಯರಾದ ಗೋವಿಂದಪ್ಪ ಗೌಡಪ್ಪಗೋಳ, ದು.ಗು.ಲಕ್ಷ್ಮಣ, ಶ್ರೀಧರ್‌ ನಾಡಗೀರ ಅವರು ನಾರದ ಮತ್ತು ಭಾರತಾಂಬೆ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ಆದ್ಯ ಪತ್ರಕರ್ತ ನಾರದ ಜಯಂತಿಯಲ್ಲಿ ಗಣ್ಯರಾದ ಗೋವಿಂದಪ್ಪ ಗೌಡಪ್ಪಗೋಳ, ದು.ಗು.ಲಕ್ಷ್ಮಣ, ಶ್ರೀಧರ್‌ ನಾಡಗೀರ ಅವರು ನಾರದ ಮತ್ತು ಭಾರತಾಂಬೆ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು   

ಹುಬ್ಬಳ್ಳಿ: ಸುದ್ದಿ ಮಾಧ್ಯಮಗಳು ಇಂದು ಮೌಲ್ಯ ಮತ್ತು ಮಾನವೀಯತೆ ಕಳೆದುಕೊಂಡಿವೆ. ಪಂಥೀಯತೆ, ಜಾತೀಯತೆ ಪತ್ರಿಕಾರಂಗದಲ್ಲಿ ನುಸುಳಿದೆ ಎಂದು ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಕಳವಳ ವ್ಯಕ್ತಪಡಿಸಿದರು.

ಲೋಕಹಿತ ಟ್ರಸ್ಟ್‌ ವತಿಯಿಂದ ಕೆಸಿಸಿಐ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಆದ್ಯ ಪತ್ರಕರ್ತ ನಾರದ ಜಯಂತಿ ಮತ್ತು ಸನ್ಮಾನ ಸಮಾರಂಭದಲ್ಲಿ ಅವರು ಆಶಯ ಭಾಷಣ ಮಾಡಿದರು.

ಪತ್ರಿಕಾರಂಗ ಇಂದು ತ್ರಿಶಂಕು ಸ್ಥಿತಿಯಲ್ಲಿದೆ. ಹಿಂದಿನ ನಿಲುವುಗಳಿಗೂ ಇಂದಿನ ಧೋರಣೆಗಳಿಗೂ ಸಾಕಷ್ಟು ವ್ಯತ್ಯಾಸಗಳಾಗಿವೆ. ಈ ಹಿಂದೆ ಪತ್ರಿಕಾರಂಗದಲ್ಲಿ ಸಮಾಜಮುಖಿ ಚಿಂತನೆ, ವಸ್ತುನಿಷ್ಠತೆ ಮತ್ತು ವೃತ್ತಧರ್ಮಕ್ಕೆ ಬದ್ಧತೆ ಇತ್ತು. ಈ ಅಂಶಗಳು ಇಂದು ಕಾಣಿಸುತ್ತಿಲ್ಲ ಎಂದರು.

ADVERTISEMENT

ಮಾಧ್ಯಮ ಕ್ಷೇತ್ರದಲ್ಲಿ ಕೆಲವರು ಮಾಡಿರುವ ತಪ್ಪಿನಿಂದಾಗಿ ಇಂದು ಸಮಾಜದಲ್ಲಿ ಪತ್ರಕರ್ತ ಎಂದು ಹೇಳಿಕೊಳ್ಳಲು ಮುಜುಗರ ಪಡುವಂತ ಸ್ಥಿತಿ ನಿರ್ಮಾಣವಾಗಿದೆ. ರಾಜಕಾರಣಿಗಳಂತೆ ಪತ್ರಕರ್ತರೂ ಭ್ರಷ್ಟರು, ಲಂಪಟರು ಎಂಬ ಭಾವನೆ ಸಮಾಜದಲ್ಲಿ ನೆಲೆಯೂರಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪಕ್ಷಪಾತ ಧೋರಣೆ ಅನುಸರಿಸುತ್ತಾರೆ ಎಂಬ ಕಾರಣಕ್ಕೆ ಮಾಧ್ಯಮಗಳ ಬಗ್ಗೆ ಜನರಲ್ಲಿ ಸಂಶಯ ಮನೆ ಮಾಡಿದೆ. ಜಾಹೀರಾತು ಮತ್ತು ಸುದ್ದಿಗಳ ನಡುವಿನ ಗೆರೆ ಕಣ್ಣಿಗೆ ಕಾಣದಷ್ಟು ತೆಳುವಾಗಿದೆ. ನ್ಯೂಸ್‌ ಪ್ರಿಂಟ್‌ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ಸಣ್ಣ ಪತ್ರಿಕೆಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ ಎಂದರು.

ಹಿರಿಯ ಪತ್ರಕರ್ತ ನಾರಾಯಣ ಗಳಿಗಿ, ಪತ್ರಕರ್ತ ಅಜಿತ್‌ ಹನುಮಕ್ಕನವರ ಅವರನ್ನು ಸನ್ಮಾನಿಸಲಾಯಿತು.

ಲೋಕಹಿತ ಟ್ರಸ್ಟ್‌ನ ಕಾರ್ಯದರ್ಶಿ ಶ್ರೀಧರ ನಾಡಗೀರ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.