
ಹುಬ್ಬಳ್ಳಿ: ‘ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಪಡೆದವರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ದೇಶವನ್ನು ಪ್ರಪಂಚದಲ್ಲೇ ಮೊದಲನೇ ಸ್ಥಾನ ಆಗಿಸಲು ಶ್ರಮಿಸಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಲಹೆ ನೀಡಿದರು.
ನಗರದ ಬಿವಿಬಿ ಕಾಲೇಜು ಆವರಣದಲ್ಲಿರುವ ಬಿ.ಟೆಕ್. ಸಭಾಂಗಣದಲ್ಲಿ ಭಾರತೀಯ ಅಂಚೆ ಇಲಾಖೆಯು ವಿವಿಧ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಉದ್ಯೋಗಮೇಳದಲ್ಲಿ ಮಾತನಾಡಿದರು.
‘ನಾವು ಅನುಭವಿಸಿದ ತೊಂದರೆ ಇತರರಿಗೆ ಬರಬಾರದು ಎಂಬ ಮನಸ್ಥಿತಿ ಸರ್ಕಾರಿ ನೌಕರರಲ್ಲಿ ಇರಬೇಕು. ಭ್ರಷ್ಟಾಚಾರ ರಹಿತ ವ್ಯವಸ್ಥೆಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಸರ್ಕಾರಿ ಕೆಲಸವನ್ನು ದೇವರ ಕೆಲಸವೆಂದು ಭಾವಿಸಿ, ಜನರಿಗೆ ಸೇವೆ ಸಲ್ಲಿಸುವ ಸಂಕಲ್ಪ ಮಾಡಬೇಕು’ ಎಂದರು.
‘ಬಹುತೇಕರು ವಯೋಮಿತಿ ಮುಗಿಯುವವರೆಗೆ ಸರ್ಕಾರಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಮಕ್ಕಳನ್ನು ಉದ್ಯಮಿಗಳನ್ನಾಗಿಸುವುದು ಪೋಷಕರ ಜವಾಬ್ದಾರಿ. 2017–18ರಿಂದ ಈವರೆಗೆ ದೇಶದಲ್ಲಿ 17.02 ಕೋಟಿಯಷ್ಟು ಉದ್ಯೋಗ ಸೃಷ್ಟಿಯಾಗಿದೆ. ಒಂಬತ್ತು ವರ್ಷದಲ್ಲಿ 6.42 ಕೋಟಿ ಮಂದಿ ಕೇಂದ್ರ ಪ್ರಯೋಜಿತ ಕೌಶಲ ತರಬೇತಿ ಪಡೆದಿದ್ದಾರೆ’ ಎಂದು ಹೇಳಿದರು.
‘ದೇಶದ 40 ಕೇಂದ್ರಗಳಲ್ಲಿ 51 ಸಾವಿರ ಜನರಿಗೆ ಇಂದು ನೇಮಕಾತಿ ಪತ್ರ ವಿತರಿಸಲಾಗಿದೆ. 2019–2024ರವರೆಗೆ ದೇಶದಲ್ಲಿ ಹೊಸದಾಗಿ ಸುಮಾರು 17 ಕೋಟಿ ನೌಕರರು ಇಪಿಎಫ್‌ಒನಲ್ಲಿ ನೋಂದಣಿ ಮಾಡಿಸಿದ್ದಾರೆ. 1.58 ಲಕ್ಷ ಸ್ಟಾರ್ಟ್‌ಅಪ್‌ಗಳು ಸ್ಥಾಪನೆಯಾಗಿದ್ದು, 1.03 ಲಕ್ಷ ಪೇಟೆಂಟ್ ವಿತರಣೆ ಆಗಿದೆ. ಮಹಿಳಾ ಉದ್ಯಮಿಗಳ ಪ್ರಮಾಣವೂ ಹೆಚ್ಚಳವಾಗಿದೆ. ಈ ಮೂಲಕ ಸ್ವಾತಂತ್ರ್ಯ ಭಾರತದಲ್ಲೇ ಇತ್ತೀಚಿನ ವರ್ಷಗಳಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆ ಆಗಿದೆ’ ಎಂದು ಪ್ರತಿಪಾದಿಸಿದರು.
ಹು–ಧಾ ಮಹಾನಗರ ಪಾಲಿಕೆ ಸದಸ್ಯೆ ರೂಪಾ ಶೆಟ್ಡಿ, ಅಂಚೆ ಇಲಾಖೆ ನಿರ್ದೇಶಕಿ ತಾರಾ ವಿ. ಇದ್ದರು.ಮಹೇಶ ಟೆಂಗಿನಕಾಯಿ ಶಾಸಕ
ಈ ಹಿಂದೆ ಸರ್ಕಾರದ ಸಣ್ಣ ನೌಕರಿಗೂ ಲಂಚ ನೀಡಬೇಕಿತ್ತು. ಆದರೆ ಈಗ ಕೇಂದ್ರ ಸರ್ಕಾರವು ಅರ್ಹತೆ ಆಧರಿಸಿ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ-ಮಹೇಶ ಟೆಂಗಿನಕಾಯಿ ಶಾಸಕ
ಜನರಿಗೆ ಉದ್ಯೋಗ ಕೊಡುವುದು ಮಾತ್ರವಲ್ಲದೆ ನೇಮಕಾತಿಯಲ್ಲಿ ಅಮೂಲಾಗ್ರ ಪರಿವರ್ತನೆ ತರಲಾಗಿದೆ. ಯಾವುದೇ ಇಲಾಖೆಯಲ್ಲಿ ಖಾಲಿಯಾದ ಹುದ್ದೆಗೆ ನಿಗದಿತ ಅವಧಿಯಲ್ಲಿ ಭರ್ತಿ ಮಾಡಿಕೊಳ್ಳಲಾಗುವುದು. -ಪ್ರಲ್ಹಾದ ಜೋಶಿ ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.