ADVERTISEMENT

ನೇಹಾ ಕೊಲೆ ಪ್ರಕರಣ; ಸಿಐಡಿ ಅಧಿಕಾರಿಗಳಿಂದ ಸ್ಥಳ ಮಹಜರು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 10:19 IST
Last Updated 24 ಏಪ್ರಿಲ್ 2024, 10:19 IST
   

ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣದ ಆರೋಪಿ ಫಯಾಜ್‌ನನ್ನು ಧಾರವಾಡ ಕೇಂದ್ರ ಕಾರಾಗೃಹದಿಂದ ವಶಕ್ಕೆ ಪಡೆದಿರುವ ಸಿಐಡಿ ಅಧಿಕಾರಿಗಳು, ಕೃತ್ಯ ನಡೆದ ಸ್ಥಳಕ್ಕೆ ಕರೆತಂದು ಮಹಜರು ಪ್ರಕ್ರಿಯೆ ಆರಂಭಿಸಿದ್ದಾರೆ.

ಎಸ್ಪಿ ವೆಂಕಟೇಶ್ ಹಾಗೂ ಡಿವೈಎಸ್ಪಿ ಮನೋಹರ ಪೈಕ್ ನೇತೃತ್ವದ ಎಂಟು ಮಂದಿಯ ತಂಡ ಪರಿಶೀಲನೆ ನಡೆಸುತ್ತಿದೆ. ಸಿಐಡಿ ಅಧಿಕಾರಿಗಳ ಜೊತೆ ಉತ್ತರ ವಲಯದ ಎಡಿಜಿಪಿ ವಿಕಾಸ ಕುಮಾರ ಅವರು ಸಹ ಸ್ಥಳದಲ್ಲಿದ್ದಾರೆ.

ಎರಡು ತಂಡಗಳಲ್ಲಿ ಸಿಐಡಿ ತನಿಖೆ: ಒಂದು ತಂಡ ಕೊಲೆ ನಡೆದ ಸ್ಥಳ ಬಿವಿಬಿ ಕಾಲೇಜು ಆವರಣದಲ್ಲಿ ಪರಿಶೀಲನೆ ನಡೆಸಿದೆ. ಇನ್ನೊಂದು ತಂಡ ಆರೋಪಿ ಊರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುನವಳ್ಳಿ ಗ್ರಾಮಕ್ಕೆ ತೆರಳಿ ಮಾಹಿತಿ ಕಲೆ ಹಾಕಿದೆ.

ADVERTISEMENT

ನೇಹಾಳನ್ನು ಕೊಲೆ ಮಾಡುವ ಉದ್ದೇಶ ಹೊಂದಿದ್ದ ಆರೋಪಿ ಫಯಾಜ್ 5 ದಿನಗಳ ಮೊದಲೇ ಚಾಕು ಖರೀದಿಸಿದ್ದ. ನೇಹಾ ಜೊತೆ ಕೆಲ ವಾರಗಳಿಂದ ಸಂಪರ್ಕ ಕಡಿತಗೊಂಡಿದ್ದರಿಂದ ಹತಾಶನಾಗಿ ದ್ವೇಷ ಸಾಧಿಸುತ್ತಿದ್ದ. ಧಾರವಾಡದಲ್ಲಿ ಚಾಕು ಖರೀದಿಸಿ ಬ್ಯಾಗ್‌ನಲ್ಲಿ ಇಟ್ಟುಕೊಂಡು ಕಾಲೇಜಿಗೆ ಬಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

'ಏಪ್ರಿಲ್ 18ರಂದು ಕಾಲೇಜಿಗೆ ಬಂದಿದ್ದ ಫಯಾಜ್ ಬೈಕ್ ಹ್ಯಾಂಡಲ್ ಲಾಕ್ ಮಾಡದೆ, ಕೃತ್ಯ ಮುಗಿಸಿ ಪರಾರಿಯಾಗಲು ಯೋಜಿಸಿದ್ದ. ಬೈಕ್ ನಿಲ್ಲಿಸಿದ್ದ ಸ್ಥಳಕ್ಕೆ ತೆರಳಲು ಸಾಧ್ಯವಾಗದಿದ್ದಾಗ ಕಾಲೇಜಿನ ಮುಖ್ಯದ್ವಾರದ ಮೂಲಕ ಪರಾರಿಯಾಗಲು ಯತ್ನಿಸಿದ್ದ. ಆ ವೇಳೆ ವಿದ್ಯಾರ್ಥಿಗಳು ಹಾಗೂ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ' ಎಂದು ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ತಿಳಿದುಬಂದಿದೆ.

ಈಗಾಗಲೇ ವಿದ್ಯಾನಗರ ಠಾಣೆ ಪೊಲೀಸರು ಶೇ 60ರಷ್ಟು ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದರು. ಸಾರ್ವಜನಿಕರ ಒತ್ತಡದ ಮೇರೆಗೆ, ಸರ್ಕಾರ ಸೋಮವಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿದೆ. ಇದೀಗ ಸಿಐಡಿ ಅಧಿಕಾರಿಗಳು, ಪ್ರಾಥಮಿಕ ಹಂತದಿಂದ ತನಿಖೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.