ADVERTISEMENT

ಮುಂದಿನ ವರ್ಷ ಮತ್ತಷ್ಟು ಅದ್ಧೂರಿ ಉತ್ಸವ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

‘ಅಂತರರಾಷ್ಟ್ರೀಯ ಗಾಳಿಪಟ ಉತ್ಸವ– 2020’ದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 16:36 IST
Last Updated 21 ಜನವರಿ 2020, 16:36 IST
ಹುಬ್ಬಳ್ಳಿಯಲ್ಲಿ ನಡೆದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಗಮನ ಸೆಳೆದ ವಿಭಿನ್ನ ವರ್ಣರಂಜಿತ ಗಾಳಿಪಟಗಳು
ಹುಬ್ಬಳ್ಳಿಯಲ್ಲಿ ನಡೆದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಗಮನ ಸೆಳೆದ ವಿಭಿನ್ನ ವರ್ಣರಂಜಿತ ಗಾಳಿಪಟಗಳು   

ಹುಬ್ಬಳ್ಳಿ: ‘ಅಂತರರಾಷ್ಟ್ರೀಯ ಗಾಳಿಪಟ ಉತ್ಸವನ್ನು ಮುಂದಿನ ವರ್ಷ ಮತ್ತಷ್ಟು ಅದ್ಧೂರಿಯಾಗಿ ಆಯೋಜಿಸಲಾಗುವುದು’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ತಮ್ಮ ಕ್ಷಮತಾ ಸೇವಾ ಸಂಸ್ಥೆಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿ ಆಯೋಜಿಸಿರುವ ಎರಡು ದಿನಗಳ ‘ಅಂತರರಾಷ್ಟ್ರೀಯ ಗಾಳಿಪಟ ಉತ್ಸವ’ದಲ್ಲಿ ಮಂಗಳವಾರ ಪಾಲ್ಗೊಂಡು ಮಾತನಾಡಿದ ಅವರು, ‘ಎರಡು ದಿನದ ಉತ್ಸವದಲ್ಲಿ ದೇಶ ಹಾಗೂ ವಿದೇಶಗಳ 50ಕ್ಕೂ ಹೆಚ್ಚು ಕೈಟ್ ಫ್ಲೈಯರ್ಸ್ (ಗಾಳಿಪಟ ಹಾರಿಸುವವರು) ಭಾಗವಹಿಸಿದ್ದಾರೆ’ ಎಂದರು.

‘ಗಾಳಿಪಟ ಉತ್ಸವದ ಜತೆಗೆ, ಮಹಿಳೆಯರು ಹಾಗೂ ಮಕ್ಕಳಿಗೆ ಕೆಲ ಮನರಂಜನಾ ಕ್ರೀಡೆಗಳನ್ನು ಆಯೋಜಿಸಿ ಬಹುಮಾನ ನೀಡಲಾಗಿದೆ. ಹಗಲಲ್ಲಿ ವರ್ಣರಂಜಿತ ಗಾಳಿಪಟಗಳನ್ನು ಕಣ್ತುಂಬಿಕೊಂಡವರು, ರಾತ್ರಿ ರಸಮಂಜರಿ ಹಾಗೂ ಹಾಸ್ಯ ಕಾರ್ಯಕ್ರಮಗಳನ್ನು ಸವಿದಿದ್ದಾರೆ. ಆ ಮೂಲಕ, ಮಕ್ಕಳಿಂದಿಡಿದು ಎಲ್ಲಾ ವಯಸ್ಕರು ಸಹ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ’ ಎಂದು ಹೇಳಿದರು.

ADVERTISEMENT

ವಿಭಿನ್ನ ಗಾಳಿಪಟಗಳು:

ಉತ್ಸವದ ಎರಡನೇ ದಿನ ಮತ್ತಷ್ಟು ವಿಭಿನ್ನ ಗಾಳಿಪಟಗಳು ಗಮನ ಸೆಳೆದವು. ಕೋಳಿ ಹುಂಜ, ಪಾಂಡಾ, ಅಮಿಬಾ, ಹುಲಿ ಸೇರಿದಂತೆ ಇನ್ನೂ ಹಲವು ಬಗೆಯ ಗಾಳಿಪಟಗಳ ಹಾರಾಟ ನೆರೆದಿದ್ದವರನ್ನು ಮಂತ್ರಮುಗ್ಧಗೊಳಿಸಿದವು. ಶಾಲಾ ಮಕ್ಕಳು ವ್ಯಾನ್‌ಗಳಲ್ಲಿ ಬಂದು ಉತ್ಸವವನ್ನು ವೀಕ್ಷಿಸಿ ಹೋಗುತ್ತಿದ್ದ ದೃಶ್ಯ ಕಂಡುಬಂತು.

ಉತ್ಸವಕ್ಕೆ ಬರುತ್ತಿದ್ದ ಮಂದಿಯ ಶಾಪಿಂಗ್ ಹಾಗೂ ಚಾಟ್ಸ್ ದಾಹವನ್ನು ಸ್ಥಳದಲ್ಲಿದ್ದ ಸಾಲು ಅಂಗಡಿಗಳು ತಣಿಸಿದವು.

ಎಲ್ಲರೂ ಸಂಭ್ರಮಿಸಬೇಕು:

‘ಕ್ಷಮತಾ ಸೇವಾ ಸಂಸ್ಥೆಯು ಹಿಂದೆ ಸಂಗೀತ, ಕ್ರೀಡೆಯಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಆದರೆ, ಅವುಗಳು ಸೀಮಿತ ವರ್ಗದ ಜನರನ್ನಷ್ಟೇ ಆಕರ್ಷಿಸುತ್ತಿದ್ದವು. ಹಾಗಾಗಿ, ಮಕ್ಕಳು, ಯುವಜನ, ಮಹಿಳೆಯರಿಂದಿಡಿದು ವಯೋವೃದ್ಧರೂ ಬಂದು ಸಂಭ್ರಮಿಸುವ ಕಾರ್ಯಕ್ರಮ ಆಯೋಜಿಸಬೇಕು ಎಂಬ ಉದ್ದೇಶದಿಂದ ಗಾಳಿಪಟ ಉತ್ಸವವನ್ನು ಮೂರು ವರ್ಷದ ಹಿಂದೆ ಆರಂಭಿಸಲಾಯಿತು. ವರ್ಷದಿಂದ ವರ್ಷಕ್ಕೆ ಉತ್ಸವಕ್ಕೆ ಹುಬ್ಬಳ್ಳಿ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂದು ಸಂಸ್ಥೆಯ ಸಂಚಾಲಕ ಹಾಗೂ ಸಚಿವ ಪ್ರಹ್ಲಾದ ಜೋಶಿ ಅವರ ಅಣ್ಣ ಗೋವಿಂದ ಜೋಶಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಎರಡು ದಿನಗಳ ಉತ್ಸವಕ್ಕಾಗಿ ನೂರಕ್ಕೂ ಹೆಚ್ಚು ಸ್ವಯಂಸೇವಕರು ಬಿಡುವಿಲ್ಲದೆ ಕೆಲಸ ಮಾಡಿದ್ದಾರೆ. ಶಾಲೆಗಳಿಂದ ಬಂದ ಮಕ್ಕಳಿಗೆ ಬ್ರೆಡ್, ಬಿಸ್ಕತ್ ಹಾಗೂ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಉತ್ಸವಕ್ಕೆ ಎಲ್ಲರೂ ಬಂದು ಖುಷಿಪಟ್ಟಿರುವುದು ತೃಪ್ತಿ ತಂದಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.