ADVERTISEMENT

ಮತಾಂತರ ನಿಷೇಧ ಕಾಯ್ದೆಯಿಂದ ನಷ್ಟವಿಲ್ಲ: ಲಿಂಗರಾಜ ಪಾಟೀಲ ಹೇಳಿಕೆ

ಬಿಜೆಪಿ ಶಿಸ್ತು ಸಮಿತಿ ರಾಜ್ಯ ಘಟಕದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 15:29 IST
Last Updated 22 ಡಿಸೆಂಬರ್ 2021, 15:29 IST
ಲಿಂಗರಾಜ ಪಾಟೀಲ
ಲಿಂಗರಾಜ ಪಾಟೀಲ   

ಹುಬ್ಬಳ್ಳಿ: ‘ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವುದರಿಂದ ಯಾವುದೇ ಧರ್ಮಕ್ಕೆ ಲಾಭವೂ ಆಗುವುದಿಲ್ಲ, ನಷ್ಟವೂ ಆಗುವುದಿಲ್ಲ’ ಎಂದು ಬಿಜೆಪಿ ಶಿಸ್ತು ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂವಿಧಾನ ದತ್ತ ಧಾರ್ಮಿಕ ಸ್ವಾತಂತ್ರ್ಯಕ್ಕೆ ಕಾಯ್ದೆಯಿಂದ ಯಾವುದೇ ಧಕ್ಕೆಯಾಗುವುದಿಲ್ಲ. ಯಾವುದೇ ಮತ ಪ್ರಚಾರಕ್ಕೂ ಅಡ್ಡಿ ಮಾಡುವುದಿಲ್ಲ’ ಎಂದರು.

‘ಬಲವಂತವಾಗಿ ಅಥವಾ ಆಮಿಷವೊಡ್ಡಿ ಬಡವರು ಹಾಗೂ ತಳ ಸಮುದಾಯಗಳ ಜನರನ್ನು ಮತಾಂತರ ಮಾಡಲಾಗುತ್ತಿದೆ. ವಿದೇಶಿ ಮಿಷನರಿಗಳು, ಸಂಘ–ಸಂಸ್ಥೆಗಳು, ಮತಾಂಧರು, ರಾಜಕೀಯ ಹಾಗೂ ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ನಡೆಯುವ ಇಂತಹ ಮತಾಂತರವನ್ನು ನಿಯಂತ್ರಿಸಲು ಕಾಯ್ದೆಯ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಮೋಸದ ಮತಾಂತರ ಮಾಡುವ ಮಿಷನರಿಗಳು ಪರಕೀಯ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತವೆ. ಇದರಲ್ಲಿ ಯಾವುದೇ ಮತೀಯ ಅಥವಾ ಧಾರ್ಮಿಕ ಸಂಗತಿಗಳು ಉಳಿದಿಲ್ಲ. ಮತಾಂತರದ ಹೆಸರಿನಲ್ಲಿ ಬೇರೆ ಧರ್ಮಗಳ ದೇವರುಗಳನ್ನು ದೂಷಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಸಮುದಾಯಗಳು ಮತ್ತು ಕುಟುಂಬಗಳ ಮಧ್ಯೆ ಒಡಕು ಮೂಡಿಸುವ ಮತಾಂತರವು, ಸರ್ಕಾರ ವಿರೋಧಿ ಚಳವಳಿಗಳು ಹಾಗೂ ಹಿಂಸಾಚಾರಗಳಿಗೂ ತನ್ನ ಕೊಡುಗೆ ನೀಡುತ್ತಿದೆ. ಹಾಗಾಗಿ, ಮತ ಪ್ರಚಾರವನ್ನು ಸಾಮಾಜಿಕ ಚಟುವಟಿಕೆಗಳಿಂದ ಬೇರ್ಪಡಿಸಿ, ಬಹಿರಂಗವಾಗಿ ನಡೆಯುವಂತೆ ಮಾಡುವ ಅಗತ್ಯವಿದೆ’ ಎಂದು ಹೇಳಿದರು.

‘ಮತಾಂತರವಾಗಲು ಬಯಸುವ ವ್ಯಕ್ತಿ, ತನ್ನ ಉದ್ದೇಶವನ್ನು ಬಹಿರಂಗಗೊಳಿಸಿ ಮತಾಂತರವಾಗುವುದಾದರೆ, ಮೋಸದ ವ್ಯವಹಾರಕ್ಕೆ ಕಡಿವಾಣ ಬೀಳುತ್ತದೆ. ಈ ನಿಟ್ಟಿನಲ್ಲಿ ಮತಾಂತರವನ್ನು ನೋಂದಾಯಿಸುವ ಕ್ರಮ ಸ್ವಾಗತಾರ್ಹ’ ಎಂದರು.

ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮುಖಂಡರಾದ ವಿದ್ಯಾನಂದ ಶೆಟ್ಟಿ, ದತ್ತಮೂರ್ತಿ ಕುಲಕರ್ಣಿ ಹಾಗೂ ರವಿ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.