ADVERTISEMENT

ವಾಯವ್ಯ ಸಾರಿಗೆ ಸಂಸ್ಥೆ: ಚಾಲಕ, ನಿರ್ವಾಹಕ ನೌಕರಿಗೆ ಸೇರಲು ಹಿಂದೇಟು

ಬಿ.ಜೆ.ಧನ್ಯಪ್ರಸಾದ್
Published 28 ಏಪ್ರಿಲ್ 2025, 4:37 IST
Last Updated 28 ಏಪ್ರಿಲ್ 2025, 4:37 IST
   

ಧಾರವಾಡ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (ಎನ್‌ಡಬ್ಲ್ಯುಕೆರ್‌ಟಿಸಿ) ಅನುಕಂಪದ ಆಧಾರದ ನೇಮಕಾತಿಯಲ್ಲಿ ನಿರ್ವಾಹಕ ಮತ್ತು ಚಾಲಕ ನೌಕರಿಗೆ ಸೇರಲು ಬಹುತೇಕರು ಒಪ್ಪುತ್ತಿಲ್ಲ. ಭದ್ರತಾ ಸಿಬ್ಬಂದಿ (ಸೆಕ್ಯುರಿಟಿ ಗಾರ್ಡ್‌), ಕಿರಿಯ ಸಹಾಯಕ (ಜೂನಿಯರ್‌ ಅಸಿಸ್ಟೆಂಟ್‌) ಹುದ್ದೆಗಳಿಗೆ ಬೇಡಿಕೆ ಇಟ್ಟಿದ್ದಾರೆ.

ಎನ್‌ಡಬ್ಲ್ಯುಕೆರ್‌ಟಿಸಿ ವ್ಯಾಪ್ತಿಯಲ್ಲಿ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿವೆ. ಅರ್ಜಿದಾರರು ಬೇಡಿದ ಹುದ್ದೆಗಳು ಖಾಲಿ ಇಲ್ಲದ್ದಕ್ಕೆ ಅನುಕಂಪ ಆಧಾರ ನೇಮಕಾತಿಯ (ಸರ್ಕಾರಿ ನೌಕರ ಮೃತಪಟ್ಟರೆ, ಅವಲಂಬಿತರೊಬ್ಬರನ್ನು ನೌಕರಿಗೆ ನೇಮಿಸಿಕೊಳ್ಳುವುದು) 800 ಅರ್ಜಿಗಳು ಬಾಕಿ ಇವೆ.

ವೃತ್ತಿ ತರಬೇತಿ, ಭಾರಿ ವಾಹನ ಚಾಲನಾ ಪರವಾನಗಿ (ಎಚ್‌ವಿಡಿಎಲ್‌) ಕೊಡಿಸುವುದಾಗಿ ಸಂಸ್ಥೆಯವರೇ ಹೇಳಿದರೂ ಬಹಳಷ್ಟು ಅರ್ಜಿದಾರರು ಚಾಲಕ, ನಿರ್ವಾಹಕರಾಗಲು ಒಪ್ಪಿಲ್ಲ. ಬೇಡಿದ ಹುದ್ದೆಯ ನಿರೀಕ್ಷೆಯಲ್ಲೇ ಇದ್ದಾರೆ.

ADVERTISEMENT

‘ಅನುಕಂಪದ ಆಧಾರದ ನೇಮಕಾತಿಯಲ್ಲಿ ನೌಕರಿಗೆ ಅರ್ಜಿ ಸಲ್ಲಿಸಿದ್ದೆ. ಭದ್ರತಾ ಸಿಬ್ಬಂದಿ ಹುದ್ದೆ ‌ಖಾಲಿ ಇಲ್ಲ ಎಂದು ಎನ್‌ಡಬ್ಲ್ಯುಕೆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಹೇಳಿದರು. ಸರ್ಕಾರಿ ಕೆಲಸ ಸಿಗುವುದು ಕಷ್ಟ, ಕಂಡಕ್ಟರ್‌ ಕೆಲಸವಿದೆ. ಅದನ್ನೇ ಮಾಡುವಂತೆ ಸಚಿವ ಸಂತೋಷ್‌ ಲಾಡ್‌ ಜನತಾದರ್ಶನದಲ್ಲಿ ಹೇಳಿದರು. ಆ ಕೆಲಸ ಒಪ್ಪದೇ ಬೇರೆ ವಿಧಿಯಿಲ್ಲ’ ಎಂದು ಅನುಕಂಪ ಆಧಾರದ ನೌಕರಿಗೆ ಅರ್ಜಿ ಸಲ್ಲಿಸಿದ ವ್ಯಕ್ತಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಚೇರಿಯಲ್ಲಿ ಕಾರ್ಯನಿರ್ವಹಿಸುವ (ಬೆಳಿಗ್ಗೆ 10 ರಿಂದ ಸಂಜೆ 5ರವರೆಗಿನ ಕೆಲಸ) ನೌಕರಿ ಅಪೇಕ್ಷಿಸುವವರು ಹೆಚ್ಚು. ಹೆಚ್ಚು ಸವಾಲು, ಕಷ್ಟ ಇಲ್ಲದಿರುವ ಕೆಲಸ ಬಯಸುತ್ತಾರೆ. ಚಾಲಕ, ನಿರ್ವಾಹಕ ನೌಕರಿಯಲ್ಲಿ ಹೆಚ್ಚು ಜವಾಬ್ದಾರಿ ಇರುತ್ತದೆ. ಅದಕ್ಕೆ ಭದ್ರತಾ ಸಿಬ್ಬಂದಿ, ಕಿರಿಯ ಸಹಾಯಕ ಉದ್ಯೋಗಕ್ಕೆ ಸೇರಲು ಹೆಚ್ಚು ಆಸಕ್ತಿ ಹೊಂದಿದ್ದಾರೆ’ ಎಂದು ಸಾರಿಗೆ ಸಂಸ್ಥೆಯ ಸಿಬ್ಬಂದಿಯೊಬ್ಬರು ತಿಳಿಸಿದರು.

ಚಾಲಕ ನಿರ್ವಾಹಕ ನೌಕರಿಗೆ ಬಹಳಷ್ಟು ಮಂದಿ ಬೇಡ ಎನ್ನುತ್ತಾರೆ. ಭದ್ರತಾ ಸಿಬ್ಬಂದಿ ಕಿರಿಯ ಸಹಾಯಕ ನೌಕರಿಗಾಗಿ ಹಲವರು 10 ವರ್ಷಗಳಿಂದ ಕಾಯುತ್ತಿದ್ದಾರೆ. 800 ಅರ್ಜಿಗಳು ಬಾಕಿ ಇವೆ.
ಪ್ರಿಯಾಂಗಾ ಎಂ. ವ್ಯವಸ್ಥಾಪಕ ನಿರ್ದೇಶಕಿ ವಾಯವ್ಯ ಸಾರಿಗೆ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.