ADVERTISEMENT

ಚಪ್ಪಾಳೆ ತಟ್ಟಿ ಬೀಳ್ಕೊಟ್ಟ ಅಧಿಕಾರಿಗಳು

ಗೂಡು ಸೇರುವ ತವಕದಲ್ಲಿ ರೈಲು ಏರಿದ ವಲಸೆ ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 21 ಮೇ 2020, 16:04 IST
Last Updated 21 ಮೇ 2020, 16:04 IST
ಹುಬ್ಬಳ್ಳಿಯಿಂದ ಉತ್ತರ ಪ್ರದೇಶ ಲಕ್ನೋಗೆ ಹೊರಟ ಶ್ರಮಿಕ್ ವಿಶೇಷ ರೈಲಿಗೆ ಗುರುವಾರ ಕಾರ್ಮಿಕ ಕುಟುಂಬದವರು ಪ್ರಯಾಣ ಬೆಳೆಸಿದರು
ಹುಬ್ಬಳ್ಳಿಯಿಂದ ಉತ್ತರ ಪ್ರದೇಶ ಲಕ್ನೋಗೆ ಹೊರಟ ಶ್ರಮಿಕ್ ವಿಶೇಷ ರೈಲಿಗೆ ಗುರುವಾರ ಕಾರ್ಮಿಕ ಕುಟುಂಬದವರು ಪ್ರಯಾಣ ಬೆಳೆಸಿದರು   

ಹುಬ್ಬಳ್ಳಿ: ಲಾಕ್‌ಡೌನ್‌ ಕಾರಣದಿಂದ ವಿವಿಧ ಜಿಲ್ಲೆಗಳಲ್ಲಿ ಬಂದಿಯಾಗಿದ್ದ ಹೊರ ರಾಜ್ಯಗಳ ವಲಸೆ ಕಾರ್ಮಿಕರಿಗೆ ಗೂಡು ಸೇರಿಕೊಳ್ಳುವ ಹಂಬಲ. ಇದಕ್ಕಾಗಿ ನಗರದ ರೈಲು ನಿಲ್ದಾಣದಲ್ಲಿ ಗುರುವಾರ ರೈಲುಗಳತ್ತ ಓಡೋಡಿ ಹೋಗಿ ತಮ್ಮ ಸೀಟುಗಳಲ್ಲಿ ಕುಳಿತುಕೊಂಡ ಚಿತ್ರಣ ಕಂಡುಬಂತು.

ಕಾರ್ಮಿಕರು ನಿಲ್ದಾಣ ಪ್ರವೇಶಿಸುತ್ತಿದ್ದಂತೆ ನಿಲ್ದಾಣದ ಭದ್ರತಾ ಸಿಬ್ಬಂದಿ ಸ್ಯಾನಿಟೈಸರ್‌ ಹಚ್ಚಿ, ಥರ್ಮಲ್‌ ಸ್ಕ್ಯಾನಿಂಗ್‌ ಪರೀಕ್ಷೆಗೆ ಒಳಪಡಿಸಿದರು. ಕಾರ್ಮಿಕರು ತಮ್ಮೂರಿಗೆ ತೆರಳಲು ಬರುತ್ತಿದ್ದ ರೈಲುಗಳತ್ತಲೇ ಚಿತ್ತ ನೆಟ್ಟಿದ್ದರು. ರೈಲು ಬಂದ ಮೇಲಂತೂ ವಲಸೆ ಕಾರ್ಮಿಕರ ಸಂಭ್ರಮ ಮುಗಿಲು ಮುಟ್ಟಿತ್ತು.

ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಕೌಟುಂಬಿಕ ಕಾರ್ಯಕ್ರಮಗಳಿಗೆ ವಿವಿಧ ಜಿಲ್ಲೆಗಳಿಗೆ ಬಂದವರು ರೈಲಿನಲ್ಲಿ ತೆರಳಿದರು.

ADVERTISEMENT

ಎರಡು ತಿಂಗಳಿಂದ ಬಯಸುತ್ತಿದ್ದ ತಮ್ಮ ಆಸೆ ಈಡೇರಿದ ಹರ್ಷ ಅವರಲ್ಲಿತ್ತು. ರೈಲು ಹೊರಟಾಗಲಂತೂ ಚಿಕ್ಕಮಕ್ಕಳು, ಮಹಿಳೆಯರು ರೈಲ್ವೆ ಅಧಿಕಾರಿಗಳತ್ತ ಕೈಬಿಸಿ ತುಟಿಯಂಚಿನಲ್ಲಿ ನಗೆ ಅರಳಿಸಿದರು. ಇದಕ್ಕೆ ಪ್ರತಿಯಾಗಿ ರೈಲ್ವೆ ಸಿಬ್ಬಂದಿ ಕೈ ಬೀಸಿ, ಚಪ್ಪಾಳೆ ತಟ್ಟಿ ಮಕ್ಕಳ ಸಂಭ್ರಮ ಇಮ್ಮಡಿಗೊಳಿಸಿದರು.

ರಾಜ್ಯದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಕನಸುಗಳ ಮೂಟೆ ಹೊತ್ತಿದ್ದ ಕಾರ್ಮಿಕರಲ್ಲಿ ಊರು ಸೇರಿಕೊಳ್ಳುವ ಸಂಭ್ರಮ ಒಂದೆಡೆಯಾದರೆ, ಮುಂದಿನ ಬದುಕು ಹೇಗೆ ಎನ್ನುವ ಚಿಂತೆಯ ಗೆರೆಗಳು ಕಾಣುತ್ತಿದ್ದವು.

ಹುಬ್ಬಳ್ಳಿಯಿಂದ ಬಿಹಾರದ ದರ್ಬಾಂಗಕ್ಕೆ ಹೊರಟ ಶ್ರಮಿಕ ವಿಶೇಷ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಒಟ್ಟು 1,596 ಮತ್ತು ಹುಬ್ಬಳ್ಳಿ ಲಖನೌ ರೈಲಿನಲ್ಲಿ 1,513 ಮಂದಿ ಪ್ರಯಾಣಿಕರು ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.