
ಈರುಳ್ಳಿ
ಹುಬ್ಬಳ್ಳಿ: ಇಲ್ಲಿನ ಅಮರಗೋಳದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೋಮವಾರ ದಲ್ಲಾಳಿಗಳು ಈರುಳ್ಳಿ ದರವನ್ನು ಏಕಾಏಕಿ ಇಳಿಕೆ ಮಾಡಿದ್ದನ್ನು ಖಂಡಿಸಿ, ವಿವಿಧ ಜಿಲ್ಲೆಗಳಿಂದ ಬಂದ ರೈತರು ದಿಢೀರ್ ಪ್ರತಿಭಟನೆ ನಡೆಸಿದರು.
ಸರ್ಕಾರ ಹಾಗೂ ದಲ್ಲಾಳಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸೂಕ್ತ ದರ ನಿಗದಿಪಡಿಸಿ ಹರಾಜು ಕರೆಯಬೇಕೆಂದು ಒತ್ತಾಯಿಸಿದರು.
ಬೆಳಿಗ್ಗೆ 10ರಿಂದ ಈರುಳ್ಳಿ ಹರಾಜು ಪ್ರಕ್ರಿಯೆ ಆರಂಭವಾಯಿತು. ಮಧ್ಯಾಹ್ನ 1ರ ವೇಳೆ ದಲ್ಲಾಳಿಗಳು ಏಕಾಏಕಿ ಕ್ವಿಂಟಲ್‌ಗೆ ₹50 ನಿಗದಿಪಡಿಸಿ ಹರಾಜು ಕರೆಯಲು ಆರಂಭಿಸಿದರು. ಇದರಿಂದ ಆಕ್ರೋಶಗೊಂಡ ಬೆಳಗಾವಿ, ಗದಗ, ಹಾವೇರಿ, ವಿಜಯಪುರ ಜಿಲ್ಲೆಗಳಿಂದ ಬಂದಿದ್ದ ರೈತರು, ‘ಇಷ್ಟು ಕಡಿಮೆ ದರಕ್ಕೆ ವಾಹನದ ಬಾಡಿಗೆ ಸಹ ನೀಡಲು ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಉಳ್ಳಾಗಡ್ಡಿಗೆ ₹40 ರಿಂದ ₹50 ಇದೆ. ಇಲ್ಲಿ, ಕ್ವಿಂಟಲ್‌ಗೆ ₹50ಗೆ ಹರಾಜು ಮಾಡುತ್ತಿರುವುದು ಅನ್ಯಾಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ನಾಲ್ಕು ಐದು ತಿಂಗಳು ಕಷ್ಟಪಟ್ಟು, ಲಕ್ಷಾಂತರ ರೂಪಾಯಿ ಸಾಲ ಮಾಡಿ ಉಳ್ಳಾಗಡ್ಡಿ ಬೆಳೆಯುತ್ತೇವೆ. ಹುಬ್ಬಳ್ಳಿ ಎಪಿಎಂಸಿಯಲ್ಲಿ ಯೋಗ್ಯ ಬೆಲೆ ಸಿಗುತ್ತದೆ ಎಂದು ನೂರು, ಇನ್ನೂರು ಕಿ.ಮೀ ದೂರದಿಂದ ಬಾಡಿಗೆ ವಾಹನದಲ್ಲಿ ತರುತ್ತೇವೆ. ರೈತರಿಗಾಗುತ್ತಿರುವ ಅನ್ಯಾಯ ಸರ್ಕಾರಕ್ಕೆ ಗೊತ್ತಿದ್ದರೂ ಜಾಣಕುರುಡು ಪ್ರದರ್ಶಿಸುತ್ತಿದೆ. ಉತ್ತಮ ಗುಣಮಟ್ಟದ ಉಳ್ಳಾಗಡ್ಡಿ ಕ್ವಿಂಟಲ್‌ಗೆ ಕೇವಲ ₹200ಕ್ಕೆ ಹರಾಜಾಗುತ್ತಿದೆ’ ಎಂದು ಲೋಕಾಪುರದ ರೈತ ನಾರಾಯಣಗೌಡ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
‘ಸಾಮಾನ್ಯ ಉಳ್ಳಾಗಡ್ಡಿ ದರವನ್ನು ಕ್ವಿಂಟಲ್‌ಗೆ ₹50 ರಿಂದ ₹200ರವರೆಗೆ ಹಾಗೂ ಮಹಾರಾಷ್ಟ್ರದ ಉಳ್ಳಾಗಡ್ಡಿಗೆ ₹1,500 ರಿಂದ ₹2,200ರವರೆಗೆ ದರ ನಿಗದಿಪಡಿಸಿ ಹರಾಜು ಮಾಡಲಾಗುತ್ತಿದೆ. ಇದನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದರು’ ಎಂದು ಈರುಳ್ಳಿ, ಆಲೂಗಡ್ಡೆ ವರ್ತಕರ ಸಂಘದ ಅಧ್ಯಕ್ಷ ಸಲೀಂ ಬ್ಯಾಹಟ್ಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.