ADVERTISEMENT

ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ₹10.44 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 3:44 IST
Last Updated 27 ಡಿಸೆಂಬರ್ 2025, 3:44 IST
<div class="paragraphs"><p>ಸೈಬರ್ ವಂಚನೆ</p></div>

ಸೈಬರ್ ವಂಚನೆ

   

ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಗರದ ಹಳೇಹುಬ್ಬಳ್ಳಿಯ ವಿವೇಕ ಶ್ರೀಕಂಡೆ ಅವರಿಂದ ಬ್ಯಾಂಕ್‌ ಖಾತೆಗಳ ಮಾಹಿತಿ ಪಡೆದ ವಂಚಕರು, ಅವುಗಳಿಂದ ₹10.44 ಲಕ್ಷ ವ್ಯವಹಾರ ನಡೆಸಿರುವ ಆರೋಪದ ಕುರಿತು ಹುಬ್ಬಳ್ಳಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ವಿವೇಕ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ವಂಚಕರು, ಹಣದ ಆಮಿಷ ತೋರಿಸಿ ಅನಧಿಕೃತ ವ್ಯಾಪಾರ ಚಟುವಟಿಕೆಯಲ್ಲಿ ತೊಡಗಿಸಿದ್ದರು. ನಂತರ ಹಣ ಹೂಡಿಕೆ ನೆಪದಲ್ಲಿ ಅವರಿಂದ ಎರಡು ಬ್ಯಾಂಕ್‌ ಖಾತೆಗಳ ವಿವರ ಪಡೆದು, ಬೇರೆ ಕಡೆಯಿಂದ ಅವುಗಳಲ್ಲಿ ಹಣದ ವ್ಯವಹಾರ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

ನಕಲಿ ಖಾತೆ, ಜೀವ ಬೆದರಿಕೆ: ನಗರದ ಗೋಕುಲ ರಸ್ತೆಯ ಜೆ.ಪಿ. ನಗರದ ಜಯಶ್ರೀ ಅವರ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿನ ಫೋಟೊ ಡೌನ್‌ಲೋಡ್‌ ಮಾಡಿಕೊಂಡು ಅಶ್ಲೀಲ ಚಿತ್ರಗಳಿಗೆ ಸೇರಿಸಿ, ನಕಲಿ ಖಾತೆ ರಚಿಸಿದ್ದೂ ಅಲ್ಲದೆ, ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ ಜೀವ ಬೆದರಿಕೆ ಹಾಕಿರುವ ಕುರಿತು ಹುಬ್ಬಳ್ಳಿ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಯಶ್ರೀ ಅವರ ಫೋಟೊ ಸೇರಿಸಿ ನಕಲಿ ಖಾತೆ ತೆರೆದ ಆರೋಪಿ, ಅವರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದ. ಅವರ ವಾಟ್ಸ್‌ಆ್ಯಪ್‌ ನಂಬರ್‌ ಪಡೆದು, ಅದೇ ನಂಬರ್‌ನಿಂದ ನಕಲಿ ವಾಟ್ಸ್‌ಆ್ಯಪ್‌ ತೆರೆದು ಮೆಸೆಜ್‌ ಮಾಡಿದ್ದ. ಬ್ಲಾಕ್‌ ಮಾಡಿದ್ದಕ್ಕೆ, ಎಂಟು ವಿವಿಧ ವಾಟ್ಸ್‌ಆ್ಯಪ್‌ ನಂಬರ್‌ಗಳಿಂದ ಮೆಸೆಜ್‌ ಮಾಡಿ, ಜೀವ ಬೆದರಿಕೆಗೆ ಹಾಕಿದ್ದಾನೆ. ಅವರ ಸಂಬಂಧಿಕರ ಹಾಗೂ ಸಹೋದರರ ಫೋಟೊವನ್ನು ಅಶ್ಲೀಲ ಚಿತ್ರಗಳಿಗೆ ಸೇರಿಸಿ ಮಾನ ಹರಾಜು ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಂಚನೆ: ನಗರದ ಮೂರುಸಾವಿರ ಮಠ ಓಣಿಯ ಸುರೇಖಾ ಯಲ್ಲಾಪುರಮಠ ಅವರ ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿದ್ದ ₹4.28 ಲಕ್ಷವನ್ನು ಅವರ ಗಮನಕ್ಕೆ ಬರದೆ ವಂಚಕರು ಎಟಿಎಂ ಕೇಂದ್ರದಿಂದ ಡ್ರಾ ಮಾಡಿಕೊಂಡಿರುವ ಕುರಿತು ಕಮರಿಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರೇಖಾ ಅವರು ಫೈನಾನ್ಸ್‌ನಲ್ಲಿ 60 ಗ್ರಾಂ ಚಿನ್ನಾಭರಣ ಅಡವಿಟ್ಟು ₹5.21 ಲಕ್ಷ ಸಾಲ ಪಡೆದಿದ್ದರು. ಬಳಿಕ ಸಾಲ ತೀರಿಸಿ ಉಳಿದ ₹4.28 ಲಕ್ಷವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದರು. ಮುಕ್ತಾರ ಹೆಸರಿನ ವಂಚಕ ಆನ್‌ಲೈನ್‌ ಮೂಲಕ ಹಣ ವರ್ಗಾಯಿಸಿಕೊಂಡು ಡ್ರಾ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬೈಕ್‌ ಸವಾರ ಸಾವು: ನಗರದ ಹೊರವಲಯದ ತಾರಿಹಾಳ–ಗಾಮನಗಟ್ಟಿ ಪ್ರದೇಶದಲ್ಲಿ ಶುಕ್ರವಾರ ನಡೆದ ಲಾರಿ ಹಾಗೂ ಬೈಕ್ ಅಪಘಾತದಲ್ಲಿ ಉಣಕಲ್‌ ನಿವಾಸಿ ಬೈಕ್‌ ಸವಾರ ಪರಶುರಾಮ ರಜಪೂತ(30) ಮೃತಪಟ್ಟಿದ್ದಾರೆ. ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.