ADVERTISEMENT

ಆನ್‌ಲೈನ್‌ನಲ್ಲಿ ₹1.69 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 5:00 IST
Last Updated 20 ಮಾರ್ಚ್ 2022, 5:00 IST

ಹುಬ್ಬಳ್ಳಿ: ಮೊಬೈಲ್‌ನಲ್ಲಿ ಪೇ–ಟಿಎಂ ಆ್ಯಪ್‌ ಅಳವಡಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಕೇಶ್ವಾಪುರದ ಮಹ್ಮದ್‌ ಶೇಖ್‌ ಅವರಿಗೆ ಕರೆ ಮಾಡಿ ನಂಬಿಸಿದ ವಂಚಕ, ಬ್ಯಾಂಕ್‌ ಮಾಹಿತಿ ಪಡೆದು ₹1.69 ಲಕ್ಷ ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ಮಹ್ಮದ್‌ ಅವರು ಮೊಬೈಲ್‌ನಲ್ಲಿ ಪೇ–ಟಿಎಂ ಆ್ಯಪ್‌ ಅಳವಡಿಸುವಾಗ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಗೂಗಲ್‌ನಲ್ಲಿ ದೊರೆತ ಗ್ರಾಹಕರ ಸಹಾಯವಾಣಿ ನಂಬರ್‌ಗೆ ಕರೆ ಮಾಡಿದಾಗ, ಸಿಬ್ಬಂದಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ಎನಿ ಡೆಸ್ಕ್‌ ಆ್ಯಪ್‌ ಅಳವಡಿಸಿಕೊಳ್ಳಲು ಹೇಳಿದ್ದಾನೆ. ಅದರ ಸಹಾಯದಿಂದ ನೆಟ್‌ ಬ್ಯಾಂಕಿಂಗ್‌ ಮೂಲಕ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹75 ಸಾವಿರ ವಂಚನೆ: ಕಂಪನಿಯೊಂದರ ಫ್ರಾಂಚೈಸಿ ಪಡೆಯಲು ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಮೂರುಸಾವಿರಮಠದ ಮಹೇಶ ಜಾಬಿ ಅವರಿಗೆ ಕರೆ ಮಾಡಿದ ವಂಚಕ, ₹75 ಸಾವಿರ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ADVERTISEMENT

ಮಹೇಶ ಅವರು ಕೆಲಸಕ್ಕಾಗಿ ಫೇಸ್‌ಬುಕ್‌ ಪೇಜ್‌ ಒಂದರ ಕಮೆಂಟ್‌ ಬಾಕ್ಸ್‌ಲ್ಲಿ ಮೊಬೈಲ್‌ ನಂಬರ್‌ ಹಾಕಿದ್ದರು. ಅದನ್ನು ನೋಡಿದ ವಂಚಕ ಅವರಿಗೆ ಕರೆ ಮಾಡಿ, ವಾಟ್ಸ್‌ಆ್ಯಪ್‌ನಲ್ಲಿ ದಾಖಲೆಗಳನ್ನು ಪಡೆದುಕೊಂಡಿದ್ದ. ನಂತರ ನೋಂದಣಿ ಶುಲ್ಕವೆಂದು ಹಣ ಪಾವತಿಸಿಕೊಂಡಿದ್ದ. ಪ್ರಾಂಚೈಸಿಯೂ ನೀಡದೆ, ಹಣವೂ ಮರಳಿಸದೆ ವಂಚಿಸಿದ್ದಾನೆ ಎಂದು ಸೈಬರ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳವು: ಇಲ್ಲಿನ ಅಮರಗೋಳ ಎಪಿಎಂಸಿ ಆವರಣದಲ್ಲಿನ ಆರ್‌.ಎಂ. ಜವಳಿ ಟ್ರೇಡರ್ಸ್‌ ಸಗಟು ಕಿರಾಣಿ ಅಂಗಡಿಯ ಬಾಗಿಲು ಮುರಿದು, ₹16 ಸಾವಿರ ನಗದು ಕಳವು ಮಾಡಲಾಗಿದೆ. ಅಂಗಡಿ ಮಾಲೀಕ ಮೃತ್ಯುಂಜಯ ನವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಂಚನೆ: ಮೊಬೈಲ್‌ಗೆ ಬಂದ ಲಿಂಕ್‌ ಒತ್ತಿದ ಗೋಕುಲ ರಸ್ತೆಯ ಲಕ್ಷ್ಮಿ ದಿವಟೆ ಅವರು ₹3 ಲಕ್ಷ ವಂಚನೆಗೊಳಗಾದ ಪ್ರಕರಣ ಸೈಬರ್‌ ಠಾಣೆಯಲ್ಲಿ ದಾಖಲಾಗಿದೆ. ಲಿಂಕ್ ಒತ್ತಿ ಅದರಲ್ಲಿ ಬ್ಯಾಂಕ್‌ ಮಾಹಿತಿ ತುಂಬಿದ ಮಹಿಳೆ, ನಂತರ ಎಲೆಕ್ಟ್ರಾನಿಕ್ಸ್ ವಸ್ತು, ಬಂಗಾರದ ಆಭರಣಗಳನ್ನು ಆರ್ಡರ್ ಮಾಡಿದ್ದಾರೆ. ಮಾಹಿತಿ ಪಡೆದ ವಂಚಕರು ಹಣ ವರ್ಗಾಯಿಸಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಜೀವ ಬೆದರಿಕೆ: ಸಾಲ ಮರಳಿ ಕೇಳಿದ ವ್ಯಕ್ತಿಗೆ ಬೆದರಿಕೆ ಹಾಕಲಾಗಿದೆ. ಸಾಲವಾಗಿ ಪಡೆದ ₹2.70ಲಕ್ಷಕ್ಕೆ ನೀಡಿದ್ದ ಚೆಕ್ ಅಮಾನ್ಯಗೊಂಡಿತ್ತು. ಹಣ ಮರಳಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಈ ಆದೇಶದಂತೆ ಹಣ ಕೇಳಲು ತೆರಳಿದಾಗ ವಾಸನಗೌಡ, ನಾಗರತ್ನಾ ಎಂಬುವರು ದ ವ್ಯಕ್ತಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಲ್ಲಿಕಾರ್ಜುನ ಎಂಬುವರು ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.