ADVERTISEMENT

ಕಾಂಗ್ರೆಸ್ ಮುಖಂಡರದ್ದು ಪಾಕಿಸ್ತಾನದ ಭಾಷೆ: ಶಾಸಕ ಮಂಜುನಾಥ ವಿರುದ್ಧ ಸಚಿವ ಜೋಶಿ

​ಪ್ರಜಾವಾಣಿ ವಾರ್ತೆ
Published 16 ಮೇ 2025, 7:42 IST
Last Updated 16 ಮೇ 2025, 7:42 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: 'ಭಾರತದವರು ನಮಗೆ ಹೊಡೆದರು ಅಂತ ಪಾಕಿಸ್ತಾನ ಅಮೆರಿಕಾದ ಕಾಲಿಗೆ ಬಿದ್ದಿದೆ. ಅದರೆ, ಭಾರತದಲ್ಲಿಯೇ ಇದ್ದವರು ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆಯೇ ಅವಹೇಳನ ಮಾಡುತ್ತಿದ್ದಾರೆ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

'ಆಪರೇಷನ್ ಸಿಂಧೂರ ಹೆಸರಲ್ಲಿ ಕೇವಲ ನಾಲ್ಕು-ಐದು ವಿಮಾನ ಕಳುಹಿಸಿ ಭಾರತ ಸುಮ್ಮನಾಗಿದೆ' ಎನ್ನುವ ಶಾಸಕ ಕೊತ್ತೂರು ಮಂಜುನಾಥ ಅವರು ಹೇಳಿಕೆಗೆ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 'ಮಂಜುನಾಥ ಅವರು ಪಾಕಿಸ್ತಾನದವರು ಅಡುವ ಭಾಷೆ ಆಡಿದ್ದಾರೆ‌. ಕಾಂಗ್ರೆಸ್ ನಾಯಕರು ಯಾವಾಗಲೂ ಆ ದೇಶದವರಂತೆಯೇ ಮಾಡುತ್ತಾರೆ' ಎಂದು ಕಿಡಿಕಾರಿದರು.

'ಪಾಕಿಸ್ತಾನದವರು ಭಾರತವನ್ನು ಹಿಂದೂ ಟೆರರ್ ಅಂದರೆ, ಇಲ್ಲಿನ ಕಾಂಗ್ರೆಸ್ ನಾಯಕರು ಸಹ ಅದನ್ನೇ ಹೇಳುತ್ತಾರೆ. ಆರ್ಟಿಕಲ್ 370 ವಿಶೇಷ ಸ್ಥಾನಮಾನ ರದ್ದು ಮಾಡಿದ ಸಂದರ್ಭ ಪಾಕಿಸ್ತಾನ ಬ್ಲ್ಯಾಕ್ ಡೇ ಎಂದಿತ್ತು, ಇಲ್ಲಿ ಕಾಂಗ್ರೆಸ್ ಸಹ ಅದನ್ನೇ ಹೇಳಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ನಾವು ಪಾಕಿಸ್ತಾನವನ್ನು ಏಕಾಂಗಿ ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ದೇಶದ ಮುಖಂಡರ ಇಂಥ ಹೇಳಿಕೆಗಳು, ಅವರಿಗೆ ಸಹಾಯವಾಗುತ್ತದೆ' ಎಂದು ಅಭಿಪ್ರಾಯಪಟ್ಟರು.

ADVERTISEMENT

'ಪಾಕಿಸ್ತಾನದ ಜನ ವಸತಿ ಪ್ರದೇಶದಲ್ಲಿ ಇರುವ ಉಗ್ರನ ಒಂದೇ ಒಂದು ಮನೆಯನ್ನು ಭಾರತೀಯ ಸೈನ್ಯ ಹೊಡೆದುರುಳಿಸಿದೆ. ಭಾರತದ ಗುಪ್ತಚರ ಇಲಾಖೆ, ತಂತ್ರಜ್ಞಾನ, ಸೇನೆ ಮತ್ತು ವಾಯುಪಡೆ ಎಷ್ಟೊಂದು ಬಲವಾಗಿದೆ ಎನ್ನಲು ಇದು ನಿದರ್ಶನ. ಹೀಗಿದ್ದಾಗ, ಅಸಂಬದ್ಧ ಹೇಳಿಕೆಗಳು ದೇಶದ ಜನತೆಗೆ ಮಾಡುವ ಅನುಮಾನವಾಗಿದೆ. ಕೊನೆಗೆ, ಅವರು ಸೈನ್ಯದ ಮೇಲೆಯೇ ನಂಬಿಕೆಯಿಲ್ಲ ಎಂದು ಹೇಳಿದರೂ ಅಚ್ಚರಿಯಿಲ್ಲ' ಎಂದು ಕುಟುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.