ಧಾರವಾಡ: ಹುಬ್ಬಳ್ಳಿ ತಾಲ್ಲೂಕಿನ ಗಾಮನಗಟ್ಟಿಯ ಈಶ್ವರಪ್ಪ ಮಾಳಣ್ಣವರ ಅವರು ಸಾವಯವ ಮತ್ತು ಸಮಗ್ರ ಕೃಷಿ ಪದ್ಧತಿಯಡಿ ಯಶಸ್ಸು ಕಂಡಿದ್ದಾರೆ. ಸಿರಿಧಾನ್ಯ, ಸಾವಯವ ಕೃಷಿ ಉತ್ಪನ್ನಗಳನ್ನು ಹೊರ ರಾಜ್ಯ, ಜಿಲ್ಲೆಗಳಿಗೆ ಪೂರೈಸುತ್ತಾರೆ.
ಸಾವಯವ ಮತ್ತು ಸಮಗ್ರ ಕೃಷಿ ಪದ್ಧತಿಯಲ್ಲಿ ಬೆಳೆದಿರುವ ವಿವಿಧ ಬೆಳೆಗಳನ್ನು ಕೃಷಿ ಮೇಳದ ‘ಪೌಷ್ಟಿಕ ಆಹಾರ ಭದ್ರತೆಗೆ ಮಣ್ಣಿನ ಆರೋಗ್ಯ ಮತ್ತು ಸಾಂಪ್ರದಾಯಿಕ ತಳಿಗಳು ಅವಿಷ್ಕಾರಿ ಮತ್ತು ಸಾಧಕ ರೈತರು’ ಮಳಿಗೆಯಲ್ಲಿ ಪ್ರದರ್ಶಿಸಿದ್ದಾರೆ. ಹಲವು ರೈತರು ಮಳಿಗೆಯಲ್ಲಿ ಮಾಹಿತಿ ಪಡೆದರು.
ಎರಡು ದಶಕಗಳಿಂದ ಈ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಧಾರವಾಡ–ಹಾವೇರಿ–ಗದಗ ಸಾವಯವ ಒಕ್ಕೂಟದ ಉಪಾಧ್ಯಕ್ಷರು ಆಗಿದ್ದಾರೆ. ಸಾವಯವ ಮತ್ತು ಸಮಗ್ರ ಕೃಷಿ ಪದ್ಧತಿಯಲ್ಲಿನ ಅವರ ಯಶಸ್ಸು ಗುರುತಿಸಿ ಕೃಷಿ ಮೇಳದಲ್ಲಿ ಸನ್ಮಾನಿಸಲಾಗಿದೆ.
‘ತಿಪ್ಪೆ ಗೊಬ್ಬರ, ಎರೆಹುಳು ಗೊಬ್ಬರ, ಜೀವಾಮೃತ ಬಳಸಿ ಸಾವಯವ ಕೃಷಿ ಮಾಡುತ್ತೇವೆ. ಸಮಗ್ರ ಕೃಷಿ ಪದ್ಧತಿಯಡಿ ಹಣ್ಣು, ತರಕಾರಿ, ಧಾನ್ಯ ಬೆಳೆಯುತ್ತೇವೆ. ಹಲಸು, ಮಾವು, ಬಾಳೆ, ನೇರಳೆ, ಹುರುಳಿಕಾಯಿ, ಮೂಲಂಗಿ, ಪಾಲಕ್, ಸೊಪ್ಪು, ಶೇಂಗಾ, ಹೆಸರು, ಉದ್ದು, ಸಿರಿಧಾನ್ಯಗಳನ್ನು ಬೆಳೆಯುತ್ತವೆ. ಸಾವಯವ ಮತ್ತು ಸಮಗ್ರ ಕೃಷಿ ಪದ್ಧತಿಯಲ್ಲಿ ಖರ್ಚು ಕಡಿಮೆ’ ಎಂದು ಈಶ್ವರಪ್ಪ ಮಾಳಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಾವಯವ ಮತ್ತು ಸಮಗ್ರ ಕೃಷಿಯಲ್ಲಿ ಮಣ್ಣಿನ ರಕ್ಷಣೆಯಾಗುತ್ತದೆ. ಎಕರೆಗೆ ₹ 40 ಸಾವಿರವರಗೆ ಲಾಭ ಗಳಿಸಬಹುದು. ಲಾಭವು ಬೆಳೆ, ಇಳುವರಿ ಆಧರಿಸಿರುತ್ತದೆ. ಸಾವಯವ ಕೃಷಿ ಉತ್ಪನ್ನಗಳ ಮತ್ತು ಸಿರಿಧಾನ್ಯಗಳ ಬಳಕೆ ಹೆಚ್ಚುತ್ತಿದೆ.ಧಾರವಾಡ–ಹಾವೇರಿ–ಗದಗ ಸಾವಯವ ಒಕ್ಕೂಟದಲ್ಲಿ 400 ಸದಸ್ಯರು ಇದ್ದೇವೆ. ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೂ ಕಳಿಸುತ್ತೇವೆ’ ಎಂದರು.
ಒಂದು ಎಕರೆ ಜಮೀನು ಇದೆ. ಸಾವಯವ ಮತ್ತು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದೇವೆ. ಆದಾಯವು ಚೆನ್ನಾಗಿದೆ ಜಮೀನಿನ ಮಣ್ಣಿನ ರಕ್ಷಣೆಗೂ ಅನುಕೂಲವಾಗಿದೆ. ಧಾರವಾಡ–ಹಾವೇರಿ–ಗದಗ ಸಾವಯವ ಒಕ್ಕೂಟದಲ್ಲಿದ್ದೇನೆ.ರಾಮಣ್ಣ ನಂದನವಾಡಿ ಸಾವಯವ ರೈತ ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.