ADVERTISEMENT

ಹುಬ್ಬಳ್ಳಿ: ಸಾವಯವ ಮಾವು, ಹಲಸು ಮೇಳ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 14:02 IST
Last Updated 7 ಜೂನ್ 2025, 14:02 IST
ಹುಬ್ಬಳ್ಳಿಯ ಜೆಸಿ ನಗರದ ಭಗಿನಿ ಮಂಡಳದಲ್ಲಿ ಸಹಜ ಸಮೃದ್ಧ–ಸಾವಯವ ಕೃಷಿಕರ ಬಳಗ ಆಯೋಜಿಸಿದ್ದ ’ಸಾವಯವ ಮಾವು ಮತ್ತು ಹಲಸು ಮೇಳ’ದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಹಲಸಿನ ರುಚಿ ಸವಿದರು. ಬಳಗದ ಪ್ರಮುಖರು ಹಾಜರಿದ್ದರು
ಹುಬ್ಬಳ್ಳಿಯ ಜೆಸಿ ನಗರದ ಭಗಿನಿ ಮಂಡಳದಲ್ಲಿ ಸಹಜ ಸಮೃದ್ಧ–ಸಾವಯವ ಕೃಷಿಕರ ಬಳಗ ಆಯೋಜಿಸಿದ್ದ ’ಸಾವಯವ ಮಾವು ಮತ್ತು ಹಲಸು ಮೇಳ’ದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಹಲಸಿನ ರುಚಿ ಸವಿದರು. ಬಳಗದ ಪ್ರಮುಖರು ಹಾಜರಿದ್ದರು   

ಹುಬ್ಬಳ್ಳಿ: ‘ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು’ ಎನ್ನುವ ಮಾತಿದೆ. ಇದಕ್ಕೆ ಪೂರಕವಾಗಿಯೇ ಇಲ್ಲಿನ ಜೆ.ಸಿ. ನಗರದ ಭಗಿನಿ ಮಂಡಳದಲ್ಲಿ ಸಹಜ ಸಮೃದ್ಧ–ಸಾವಯವ ಕೃಷಿಕರ ಬಳಗವು ರೋಟರಿ ಕ್ಲಬ್‌ ಆಫ್ ಹುಬ್ಬಳ್ಳಿ, ದೇವದಾನ್ಯ ಸಂಘಟನೆಯ ಸಹಯೋಗದಲ್ಲಿ ‘ಸಾವಯವ ಮಾವು ಮತ್ತು ಹಲಸು ಮೇಳ’ ಆಯೋಜಿಸಿದೆ. 

ಮೇಳದಲ್ಲಿ ಕೆಂಪು ಹಲಸು, ಹಳದಿ ಹಲಸು, ಸಣ್ಣ ಮತ್ತು ಉದ್ದನೆಯ ಹಲಸು, ದುಂಡು ಹಲಸು ಹೀಗೆ  20ಕ್ಕೂ ಹೆಚ್ಚು ತಳಿಯ ರುಚಿಕರವಾದ ಹಲಸಿನ ಹಣ್ಣುಗಳ ಮಾರಾಟ ಹಮ್ಮಿಕೊಳ್ಳಲಾಗಿದೆ. ಹಲಸು ಪ್ರಿಯರು ಸ್ಥಳದಲ್ಲೇ ಸಿಗುವ ಹಲಸಿನ ಹಣ್ಣು, ಹಲಸಿನ ಐಸ್‌ಕ್ರೀಮ್‌ ರುಚಿಯನ್ನೂ ಸವಿಯಬಹುದು. 

ಕೋಲಾರದ ಅಲ್ಪನ್ಸೋ, ಮಲ್ಲಿಕಾ ಮಾವು, ತೋತಾಪುರಿ ಹಾಗೂ ತುಮಕೂರಿನ ಸಿದ್ದು ಹಲಸಿನ ಹಣ್ಣಿನ ಸಸಿಗಳನ್ನೂ ಇಲ್ಲಿ ಮಾರಾಟಕ್ಕೆ ಇಡಲಾಗಿದೆ. 

ADVERTISEMENT

ಇದರೊಂದಿಗೆ ಸಾವಯವ ಕೃಷಿಕರು ರಾಗಿ, ಮೆಕ್ಕೆಜೋಳದಿಂದ ತಯಾರಿಸಿದ ಹಪ್ಪಳ, ಅಕ್ಕಿ ಸಂಡಿಗೆ ಹಾಗೂ 30 ಸಿರಿಧಾನ್ಯಗಳನ್ನು ಬಳಸಿ ತಯಾರಿಸಿದ ಹಿಟ್ಟು ಮಾರಾಟವಿದೆ. ಸಾಮೆ ಅಕ್ಕಿ, ಕೊರಲ ಅಕ್ಕಿ, ನವಣೆ, ಕಪ್ಪು ಹೆಸರು, ಹುರುಳಿ, ಹಾರಕ ಅಕ್ಕಿ, ಜವೆ ಗೋಧಿ, ಅಮೃತ ಗೋಧಿ, ತೊಗರಿ ಕಾಳು, ಹೆಸರು ಕಾಳು, ಕೆಂಪು ಅಲಸಂದೆ ಕಾಳು, ಬಿಳಿ ಅಲಸಂದೆ ಕಾಳು, ಕಪ್ಪು ಕಡಲೆ ಕಾಳು, ಮಡಿಕೆ ಕಾಳು, ಅಗಸೆ, ಕೆಂಪಕ್ಕಿ ಅವಲಕ್ಕಿ, ಸಜ್ಜೆ ಅವಲಕ್ಕಿ, ಹುರುಳಿ ಅವಲಕ್ಕಿ, ಹುಣಸೆಹಣ್ಣು ಮೇಳದಲ್ಲಿ ದೊರೆಯಲಿವೆ. 

ಕೆಲ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿದ ಜೋಳದ ರೊಟ್ಟಿ, ಕಾಯಿ ಹೋಳಿಗೆಯ ರುಚಿಯನ್ನೂ ಸವಿಯಬಹುದು. ಕೀಲುನೋವು, ಮೊಣಕಾಲು ನೋವು, ಬೆನ್ನು ನೋವಿಗೆ ಸಂಬಂಧಿಸಿದ ತೈಲ, ಹಲ್ಲು ನೋವು ನಿವರಣೆಯ ಪೌಂಡರ್‌, ಸೆಣಬಿನಿಂದ ತಯಾರಿಸಿದ ಆಕರ್ಷಕ ಬ್ಯಾಗ್‌ಗಳು ಇಲ್ಲಿವೆ. 

ಇವುಗಳೊಂದಿಗೆ ಪಾಲಕ್‌, ದಂಟು ಸೇರಿದಂತೆ ವಿವಿಧ ಸೊಪ್ಪಿನ ಬೀಜಗಳು, ಹಳದಿ ಗೆಣಸು, ಜವಾರಿ ಶುಂಠಿ, ಚೈನಿಸ್‌ ಆಲೂಗಡ್ಡೆ, ಬಿಳಿ ಸಿಹಿ ಗೆಣಸು, ಹುರಿದ ಕಡಲೆ, ಶೇಂಗಾ ಮಾರಾಟವೂ ಇದೆ. 

ಸೋರೆಕಾಯಿಯಿಂದ ತಯಾರಿಸಿದ ಕಲಾಕೃತಿಗಳನ್ನೂ ಕಾಣಬಹುದು. ಈ ಕಲಾಕೃತಿಗಳಲ್ಲಿ ವಿದ್ಯುತ್ ಬಲ್ಬ್‌ಗಳನ್ನು ಅಳವಡಿಸಿ, ಟೇಬಲ್‌ ಲ್ಯಾಂಪ್‌ ರೀತಿಯಲ್ಲಿ ಬಳಸಿದರೆ ನೋಡಲು ಆಕರ್ಷಕವಾಗಿರುತ್ತದೆ ಎನ್ನುತ್ತಾರೆ ಕಲಾಕೃತಿಗಳ ಮಾರಾಟಗಾರರು. 

ಮೇಳವು ಜೂನ್‌ 7ರಂದು ಆರಂಭವಾಗಿದ್ದು, ಜೂನ್‌ 8ರ ಸಂಜೆ 7ರ ತನಕ ನಡೆಯಲಿದೆ. 8ರಂದು ಬೆಳಿಗ್ಗೆ 11.30ಕ್ಕೆ ಮಕ್ಕಳಿಗಾಗಿಯೇ ಹಲಸು ಹಾಗೂ ಮಾವಿನ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಮಧ್ಯಾಹ್ನ 1.30ಕ್ಕೆ ಹಿರಿಯರಿಗಾಗಿ ಹಲಸಿನ ಹಣ್ಣು ಎತ್ತುವ ಮತ್ತು ಹಲಸಿನ ಹಣ್ಣಿನ ತೂಕ ಊಹಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.  

ಬೆಳೆಗೆ ಸಿಗದ ಉತ್ತಮ ಬೆಲೆ ರೈತರಿಗೆ ಸಂಕಷ್ಟ: ಹೊರಟ್ಟಿ

‘ಅಕಾಲಿಕ ಮಳೆ ಕೃಷಿ ಕಾರ್ಮಿಕರ ಕೊರತೆ ಹಾಗೂ ಬೆಳೆಗೆ ಸರಿಯಾದ ಬೆಲೆ ಸಿಗದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ’ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

‘ಸಾವಯವ ಮಾವು ಮತ್ತು ಹಲಸು ಮೇಳ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಜನರಿಗೆ ಉಚಿತವಾಗಿ ಅಕ್ಕಿ ಸಿಗುತ್ತಿದೆ. ರಾಜ್ಯ ಸರ್ಕಾರವು ಮಹಿಳೆಯರಿಗೆ ಉಚಿತವಾಗಿ ಹಣವನ್ನೂ ನೀಡುತ್ತಿದೆ. ಹೀಗಾಗಿ ಯಾರೂ ಕೃಷಿ ಕೆಲಸಕ್ಕೆ ಬರುತ್ತಿಲ್ಲ. ಸರ್ಕಾರವು ರೈತರಿಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು’ ಎಂದರು.

  ‘ಸಾವಯವ ಕೃಷಿ ಪದ್ಧತಿ ಅನುಸರಿಸಬೇಕು. ಆಹಾರದಲ್ಲಿ ಸಿರಿಧಾನ್ಯಗಳ ಬಳಕೆ ಮಾಡಬೇಕು. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಸಬೇಕಿದೆ’ ಎಂದು ಹೇಳಿದರು.  ‘ನಮ್ಮ ತೋಟದಲ್ಲಿಯೂ ಹಲಸು ಮಾವಿನ ಮರಗಳಿವೆ. ಹಲಸು ಹಾಗೂ ಮಾವು ಮಾರಾಟಕ್ಕೆ ಸೂಕ್ತ ವೇದಿಕೆ ಸಿಗುತ್ತಿಲ್ಲ. ಸಿಕ್ಕಷ್ಟು ಬೆಲೆಗೆ ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದೇವೆ. ಹಲಸಿಗೆ ಮಾರುಕಟ್ಟೆಯದ್ದೇ ಸಮಸ್ಯೆ’ ಎಂದೂ ಹೇಳಿದರು.  

ಹುಬ್ಬಳ್ಳಿ ರೋಟರಿ ಕ್ಲಬ್‌ ಅಧ್ಯಕ್ಷ ಬಾಪೂಗೌಡ ಎಸ್‌. ಬಿರಾದಾರ ಮಾತನಾಡಿ ‘ಕೃಷಿ ಆಧಾರಿತ ಮೇಳಗಳನ್ನು ಹೆಚ್ಚು ಆಯೋಜಿಸಬೇಕಿದೆ. ಮಕ್ಕಳಿಗೆ ಮಣ್ಣು ನೀರು ಪರಿಸರ ಸಂರಕ್ಷಣೆ ಹಾಗೂ ಕೃಷಿ ತೋಟಗಾರಿಕೆ ಬೆಳೆಗಳ ಬಗ್ಗೆ ತಿಳಿವಳಿಕೆ ಮೂಡಿಸಬೇಕಿದೆ’ ಎಂದರು.

  ಮೈಸೂರಿನ ಸಹಜ ಸಮೃದ್ಧ ಮುಖ್ಯಸ್ಥ ಜಿ. ಕೃಷ್ಣಪ್ರಸಾದ್ ಮಾತನಾಡಿ ‘ಹಲಸು ಬಯಲು ಸೀಮೆಯ ಕಲ್ಪವೃಕ್ಷ. ಆರೋಗ್ಯ ವೃದ್ಧಿ ಹಾಗೂ ಜೀರ್ಣಕ್ರಿಯೆಗೆ ಉಪಯುಕ್ತ. ತುಮಕೂರಿನ ಸಿದ್ಧ ಹಲಸು ಬಂದ ನಂತರ ವಿವಿಧ ತಳಿಯ ಹಲಸಿನ ಹಣ್ಣುಗಳಿಗೆ ಬೇಡಿಕೆ ಹೆಚ್ಚಾ‌ಯಿತು. ರೈತರು ಜಮೀನಿನ ಬದುವಿನಲ್ಲಿ ಹಲಸು ಬೆಳೆಯಬೇಕು. ಹಲಸು ಬೆಳೆಯುವ ರೈತರಿಗೆ ಅಗತ್ಯ ಸಹಕಾರ ಸೂಕ್ತ ಮಾರುಕಟ್ಟೆಯನ್ನು ಸರ್ಕಾರ ಒದಗಿಸಬೇಕು’ ಎಂದರು.

  ‘ಹುಬ್ಬಳ್ಳಿಯಲ್ಲಿ ಸಾವಯವ ಸಂತೆ ಮಾಡಬೇಕಿದೆ. ಇದರಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ’ ಎಂದರು.  ಮೈಸೂರಿನ ಕೃಷಿಕಲಾ ಮುಖ್ಯಸ್ಥೆ ಸೀಮಾ ಪ್ರಸಾದ್ ‘ಹಲಸು ಗೆಡ್ಡೆ–ಗೆಣಸು ಹಾಗೂ ಸಿರಿಧಾನ್ಯಗಳ ಬಳಕೆ ಮಹತ್ವದ ಬಗ್ಗೆ ಇನ್ನೂ ಹೆಚ್ಚು ಜಾಗೃತಿ ಮೂಡಿಸಬೇಕಿದೆ’ ಎಂದರು.  ಎ.ವಿ.ಸಂಕನೂರ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.