ಹುಬ್ಬಳ್ಳಿ: ಕಾಶ್ಮೀರದ ಪಹಲ್ಗಾಮ್‌ನ ದಾಳಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿ–ಧಾರವಾಡದಲ್ಲಿ ವಾಸವಿರುವ ಪಾಕಿಸ್ತಾನ ಹಾಗೂ ಕಾಶ್ಮೀರ ಪ್ರಜೆಗಳ ಮಾಹಿತಿ ಸಂಗ್ರಹಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.
ಕೇಂದ್ರ ಮತ್ತು ರಾಜ್ಯ ಗೃಹ ಇಲಾಖೆ ಸೂಚನೆ ಮೇರೆಗೆ, ನವನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿನ ವಿದೇಶಿಗರ ನೋಂದಣಿ ಕಚೇರಿಯಲ್ಲಿ, ಕಮಿಷನರ್ ಎನ್. ಶಶಿಕುಮಾರ್ ನೇತೃತ್ವದಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ.
ವಿದ್ಯಾರ್ಥಿ, ಪ್ರವಾಸಿ, ವೈದ್ಯಕೀಯ ಮತ್ತು ಉದ್ಯೋಗ ವಿಸಾದಡಿ ಬಂದಿರುವ ಪಾಕಿಸ್ತಾನ ಪ್ರಜೆಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಯಾವ ವರ್ಷ, ಯಾವ ಕಾರಣಕ್ಕೆ ಬಂದಿದ್ದು, ವಿಸಾ ಅವಧಿ ಮುಕ್ತಾಯವಾಗಿ ಎಷ್ಟು ವರ್ಷ–ದಿನ ಕಳೆದಿವೆ, ಸದ್ಯ ಅವರು ಎಲ್ಲಿದ್ದಾರೆ? ಅವರ ಚಟುವಟಿಕೆಗಳು ಏನು ಎಂಬ ಮಾಹಿತಿ ಸಂಗ್ರಹಣೆ ನಡೆದಿದೆ. ಅದಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ.
ಉದ್ಯೋಗ, ಪ್ರವಾಸ, ಶಿಕ್ಷಣ ಮತ್ತು ಇನ್ನಿತರ ಕಾರಣಗಳಿಂದ ಕಾಶ್ಮೀರದ ನಿವಾಸಿಗಳು ಹುಬ್ಬಳ್ಳಿ–ಧಾರವಾಡಕ್ಕೆ ಬಂದಿದ್ದು, ಅವರ ಮಾಹಿತಿಯನ್ನು ಸಹ ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಅಲ್ಲಿಯ ನಿವಾಸಿಗಳು ಬಹುತೇಕ ಒಂದೇ ಸಮುದಾಯದವರು ಆಗಿರುವುದರಿಂದ, ಸ್ಥಳೀಯರಿಂದ ಅವರ ಪ್ರಾಣಕ್ಕೆ ಸಮಸ್ಯೆಯಾಗಬಹುದು ಎನ್ನುವ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ಕೆಲವು ವಿದ್ಯಾಸಂಸ್ಥೆಗಳಿಗೆ ಹಾಗೂ ಕಂಪನಿಗಳ ಮುಖ್ಯಸ್ಥರಿಗೆ ಕಾಶ್ಮೀರದವರು ಇದ್ದರೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ 2013ರಲ್ಲಿ ನಡೆದ ಬಾಂಬ್ ಸ್ಫೋಟ್ ಪ್ರಕರಣದಲ್ಲಿ ಲಷ್ಕರ್–ಎ–ತೊಯ್ಬಾ ಸಂಘಟನೆಯ ಹುಬ್ಬಳ್ಳಿಯ ನಿವಾಸಿಗಳ ಕೈವಾಡವಿರುವುದು ಕೋರ್ಟ್‌ನಲ್ಲಿ ಸಾಬೀತಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ. 2020ರಲ್ಲಿ ನಗರದ ಕಾಲೇಜಿನ ವಿದ್ಯಾರ್ಥಿಯೊಬ್ಬ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಅದು ಸಹ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು.
‘ಅವಳಿನಗರದ ಕೆಲ ಸ್ಥಳಗಳಲ್ಲಿ ಪಾಕಿಸ್ತಾನ ಪ್ರಜೆಗಳು ಕಾನೂನು ಬಾಹಿರವಾಗಿ ವಾಸವಿರುವ ಬಗ್ಗೆ ಮಾಹಿತಿಯಿದೆ. ಗುಪ್ತಚರ ಮತ್ತು ಪೊಲೀಸ್ ಇಲಾಖೆ ಅಲ್ಲಿಗೆ ಭೇಟಿ ನೀಡಿ, ಸಂಶಯಾಸ್ಪದ ವ್ಯಕ್ತಿಗಳನ್ನು ಮುಲಾಜಿಲ್ಲದೆ ವಿಚಾರಣೆ ನಡೆಸಬೇಕು. ಭಯೋತ್ಪಾದಕ ದಾಳಿ ನಡೆದಾಗ ಮಾತ್ರ ಕ್ರಮ ಕೈಗೊಳ್ಳದೆ, ಇದು ನಿರಂತರ ಪ್ರಕ್ರಿಯೆ ಆಗಬೇಕು’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆಗ್ರಹಿಸಿದರು.
ಅವಳಿನಗರದಲ್ಲಿ ಪಾಕಿಸ್ತಾನ ಪ್ರಜೆಗಳು ಅನಧಿಕೃತವಾಗಿ ವಾಸವಿರುವ ಸಾಧ್ಯತೆಯಿದೆ. ಅಂಥವರ ಬಗ್ಗೆ ನಿಗಾ ವಹಿಸಿ ಸೂಕ್ತ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು.ಮಹೇಶ ಟೆಂಗಿನಕಾಯಿ ಶಾಸಕ
ವಿಶೇಷ ತಂಡ ರಚನೆ: ಡಿಸಿಪಿ
‘ಆಫ್ರಿಕಾ ನೈಜೇರಿಯಾ ದೇಶದಿಂದ ಕೆಲವಷ್ಟು ಮಂದಿ ವಿದ್ಯಾರ್ಥಿ ವಿಸಾದ ಅಡಿಯಲ್ಲಿ ಅವಳಿನಗರಕ್ಕೆ ಬಂದು ವಿದ್ಯಾಭ್ಯಾಸ ಮಾಡುತ್ತಾರೆ. ಪಾಕಿಸ್ತಾನದಿಂದ ಬರುವವರು ಅಪರೂಪ. ಸರ್ಕಾರದ ಸೂಚನೆ ಮೇರೆಗೆ ಪಾಕಿಸ್ತಾನ ಪ್ರಜೆಗಳ ಹಾಗೂ ಕಾಶ್ಮೀರದಿಂದ ಬಂದವರ ಮಾಹಿತಿ ಸಂಗ್ರಹ ಕಾರ್ಯ ನಡೆಯುತ್ತಿದೆ. ಕಾನೂನು ಬಾಹಿರವಾಗಿ ವಾಸವಿದ್ದವರ ಪತ್ತೆ ಹಚ್ಚಲು ವಿಶೇಷ ತಂಡ ರಚನೆ ಮಾಡಲಾಗಿದೆ’ ಎಂದು ಡಿಸಿಪಿ ಮಹಾನಿಮಗ ನಂದಗಾವಿ ತಿಳಿಸಿದರು.
ತಪಾಸಣೆ ಹೆಚ್ಚುವರಿ ಸಿಬ್ಬಂದಿ
ಕಾಶ್ಮೀರ ಪಹಲ್ಗಾಮ್ ದಾಳಿ ನಂತರ ಹುಬ್ಬಳ್ಳಿ–ಧಾರವಾಡ ಮಹಾನಗರಕ್ಕೆ ಬರುವ ಮತ್ತು ಹೊರಹೋಗುವ ವಾಹನಗಳ ವಿಶೇಷ ತಪಾಸಣೆಯನ್ನು ಮಾಡಲಾಗುತ್ತಿದೆ. ಪೊಲೀಸ್ ಸಿಬ್ಬಂದಿ ಗಡಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್ ಮತ್ತು ಬ್ಯಾರಿಕೇಡ್ ಅಳವಡಿಸಿ ದಿನದ ಇಪ್ಪತ್ನಾಲ್ಕು ಗಂಟೆಯೂ ತಪಾಸಣೆ ನಡೆಸುತ್ತಿದ್ದಾರೆ. ಸಿದ್ಧಾರೂಢ ಸ್ವಾಮಿ ರೈಲ್ವೆ ನಿಲ್ದಾಣ ವಿಮಾನ ನಿಲ್ದಾಣ ಮಾರುಕಟ್ಟೆ ಪ್ರದೇಶ ಸೇರಿದಂತೆ ಕೆಲವು ಧಾರ್ಮಿಕ ಸ್ಥಳಗಳಿಗೂ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.