ADVERTISEMENT

ಹುಬ್ಬಳ್ಳಿಯಲ್ಲಿ ಡ್ರಗ್ಸ್ ಪೆಡ್ಲಿಂಗ್ ಆರೋಪಿಗಳ ಪೊಲೀಸ್‌ ಪರೇಡ್‌

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 6:08 IST
Last Updated 26 ಆಗಸ್ಟ್ 2025, 6:08 IST
ಹುಬ್ಬಳ್ಳಿಯ ಹಳೇ ಸಿಎಆರ್‌ ಮೈದಾನದಲ್ಲಿ ಪೊಲೀಸರು ಸೋಮವಾರ ಮಾದಕ ವಸ್ತುಗಳ ಮಾರಾಟ, ಸಾಗಾಟ, ಬಳಕೆದಾರರ ಪರೇಡ್‌ ನಡೆಸಿದರು
ಹುಬ್ಬಳ್ಳಿಯ ಹಳೇ ಸಿಎಆರ್‌ ಮೈದಾನದಲ್ಲಿ ಪೊಲೀಸರು ಸೋಮವಾರ ಮಾದಕ ವಸ್ತುಗಳ ಮಾರಾಟ, ಸಾಗಾಟ, ಬಳಕೆದಾರರ ಪರೇಡ್‌ ನಡೆಸಿದರು   

ಹುಬ್ಬಳ್ಳಿ: ಈದ್‌ ಮಿಲಾದ್‌ ಹಾಗೂ ಗಣೇಶ ಹಬ್ಬದ ಪ್ರಯುಕ್ತ ಸೋಮವಾರ ನಗರದ ಕಾರವಾರ ರಸ್ತೆಯ ಸಿಎಆರ್‌ ಮೈದಾನದಲ್ಲಿ ಹು–ಧಾ ಮಹಾನಗರ ಪೊಲೀಸರು ಮಾದಕ ವಸ್ತುಗಳ ಮಾರಾಟ, ಸಾಗಾಟ ಮತ್ತು ಬಳಕೆದಾರರ ಪರೇಡ್‌ ನಡೆಸಿದರು. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌, ‘ಹಬ್ಬಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪರೇಡ್ ನಡೆಸಲಾಗಿದೆ. ಅವಳಿನಗರದಲ್ಲಿ 800ಕ್ಕೂ ಹೆಚ್ಚು ಮಾದಕ ವಸ್ತುಗಳ ಬಳಕೆದಾರರಿದ್ದು, ತ‍ಪಾಸಣೆಯಲ್ಲಿ ಇವರ ವರದಿ ಪಾಸಿಟಿವ್ ವರದಿ ಬಂದಿದೆ. ಇಂದು (ಸೋಮವಾರ) ನಾಲ್ಕುನೂರು ಮಂದಿಯ ಪರೇಡ್ ನಡೆಸಿದ್ದು, ಕೆಲವರು ಮಾಹಿತಿ ತಿಳಿದು ಪರಾರಿಯಾಗಿದ್ದಾರೆ. ಅವರ ಮನೆಗಳಿಗೆ ತೆರಳಿ ಎಚ್ಚರಿಕೆ ನೀಡಲಾಗುವುದು’ ಎಂದರು.

‘ಪ್ರಸಕ್ತ ವರ್ಷ ಗಡೀಪಾರು ಮಾಡಿರುವ 105 ಮಂದಿಯಲ್ಲಿ, 19 ಮಂದಿ ಡ್ರಗ್ ಪೆಡ್ಲರ್ಸ್‌ ಇದ್ದಾರೆ. ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯ ಪ್ರಕರಣ ಮುಕ್ತಾಯವಾದ ತಕ್ಷಣ ರೌಡಿ ಪಟ್ಟಿಯಿಂದ ಹೆಸರು ತೆಗೆಯಬೇಕೆನ್ನುವ ನಿಯಮವಿಲ್ಲ. ಅಧಿಕಾರಿಗಳು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ’ ಎಂದರು.

ADVERTISEMENT

‘ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಕೆಲವರು ದಲಿತ ಸಂಘಟನೆ ಹೆಸರು ಹೇಳಿಕೊಳ್ಳುತ್ತಾರೆ. ಜೇಬಿನಲ್ಲಿ ಅಂಬೇಡ್ಕರ್‌ ಭಾವಚಿತ್ರವಿರುವ ಪೆನ್‌ ಇಟ್ಟಿಕೊಂಡಿರುತ್ತಾರೆ. ಕೆಲವು ರೌಡಿಗಳು ತಾವು ಮಾನವ ಹಕ್ಕುಗಳ ಅಧಿಕಾರಿ ಎಂದು ಹೇಳಿಕೊಳ್ಳುತ್ತಿರುವುದು ಆಘಾತಕಾರಿ ಸಂಗತಿ’ ಎಂದು ಹೇಳಿದರು.

ಡಿಸಿಪಿಗಳಾದ ಸಿ.ಆರ್. ರವೀಶ್‌, ಯಲ್ಲಪ್ಪ ಕಾಶಪ್ಪನವರ, ಎಸಿಪಿಗಳಾದ ಶಿವಪ್ರಕಾಶ ನಾಯ್ಕ, ವೀರೇಶ, ಶಿವರಾಜ ಕಟಕಭಾವಿ, ಪ್ರಶಾಂತ ಸಿದ್ದನಗೌಡರ, ವಿಜಯಕುಮಾರ ತಳವಾರ ಇದ್ದರು.

‘ಬುಗಡಿ ವಿರುದ್ಧ ಏಳು ಪ್ರಕರಣ’

‘ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಗಿರೀಶ ಮಟ್ಟೆಣ್ಣವರ ಅವರು ಮಾನವ ಹಕ್ಕು ಅಧಿಕಾರಿ ಎಂದು ಪರಿಚಯಿಸಿದ್ದ ಮದನ ಬುಗಡಿ ವಿರುದ್ಧ ಕೊಲೆ ಸೇರಿ ಏಳು ಪ್ರಕರಣಗಳು ದಾಖಲಾಗಿವೆ. ಹಳೇ ಹುಬ್ಬಳ್ಳಿಯಲ್ಲಿ ಐದು ಕೇಶ್ವಾಪುರ ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಇದರ ಹೊರತಾಗಿಯೂ ಬೇರೆ ಕಡೆಗಳಲ್ಲಿ ಪ್ರಕರಣಗಳಿವೆಯೇ ಎನ್ನುವ ಮಾಹಿತಿ ಸಂಗ್ರಹಿಸುತ್ತಿದ್ದೇವೆ’ ಎಂದು ಪೊಲೀಸ್‌ ಕಮಿಷನರ್‌ ಎನ್. ಶಶಿಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.