ADVERTISEMENT

ಗುಡಗೇರಿ: ಪ್ಯಾಸೆಂಜರ್‌ ರೈಲು; ಬೆಲೆ ತಾರತಮ್ಯ

ಒಂದು ರೈಲಿಗೆ ₹10, ಮತ್ತೊಂದು ರೈಲಿಗೆ ₹30 ಬೆಲೆ ನಿಗದಿ

ವಾಸುದೇವ ಮುರಗಿ
Published 16 ಮಾರ್ಚ್ 2022, 16:17 IST
Last Updated 16 ಮಾರ್ಚ್ 2022, 16:17 IST
ಗುಡಗೇರಿ ನಿಲ್ದಾಣದಲ್ಲಿ ರೈಲು
ಗುಡಗೇರಿ ನಿಲ್ದಾಣದಲ್ಲಿ ರೈಲು   

ಗುಡಗೇರಿ: ಬಡವರ ಜೀವನಾಡಿ ಎಂದೇ ಹೆಸರಾದ ರೈಲು ಪ್ರಯಾಣದ ದರ ಕೋವಿಡ್‌ ಪ್ರಕರಣಗಳು ಕಡಿಮೆಯಾದರೂ ಇಳಿಕೆಯಾಗಿಲ್ಲ. ಹೀಗಾಗಿ ಪ್ರಯಾಣಿಕರು ಹೆಚ್ಚು ಹಣ ಕೊಟ್ಟು ಓಡಾಡುವಂತಾಗಿದೆ.

ಕೋವಿಡ್‌ ಪ್ರಕರಣಗಳು ಹೆಚ್ಚು ಇದ್ದಾಗ ಇಲಾಖೆ ಅನೇಕ ‘ವಿಶೇಷ’ ರೈಲುಗಳನ್ನು ಓಡಿಸಿತ್ತು. ಆಗ ಮೊದಲಿಗಿಂತ ಹೆಚ್ಚಿನ ದರ ನಿಗದಿ ಮಾಡಿತ್ತು. ಈಗ ಕೋವಿಡ್‌ ಸಂಖ್ಯೆ ಕಡಿಮೆಯಾಗಿ ಎಲ್ಲಾ ನಿರ್ಬಂಧಗಳು ತೆರವಾದರೂ ಕೆಲ ಪ್ಯಾಸೆಂಜರ್‌ ರೈಲುಗಳ ಸಂಚಾರದ ದರ ಮಾತ್ರ ಕಡಿಮೆ ಮಾಡಿಲ್ಲ.

ಬೆಂಗಳೂರಿನಿಂದ–ಹುಬ್ಬಳ್ಳಿಗೆ ನಿತ್ಯ ಬರುವ ಪ್ಯಾಸೆಂಜರ್‌ ರೈಲಿನಲ್ಲಿ ಗುಡಿಗೇರಿ ಹಾಗೂ ಸುತ್ತಮುತ್ತಲಿನ ನೂರಾರು ಪ್ರಯಾಣಿಕರು ತೆರಳುತ್ತಾರೆ. ವಾಣಿಜ್ಯ ಚಟುವಟಿಕೆಗೆ, ಆಸ್ಪತ್ರೆಗೆ ಹಾಗೂ ಹೋಲ್‌ಸೇಲ್‌ ಮಾರುಕಟ್ಟೆಗೆ ವಾಣಿಜ್ಯ ನಗರಿ ಖ್ಯಾತಿ ಪಡೆದಿದೆ. ಇವುಗಳಿಗಾಗಿ ಜನ ಬರುತ್ತಾರೆ.

ADVERTISEMENT

ಈ ರೈಲು ಬೆಳಿಗ್ಗೆ 8 ಗಂಟೆ ಸುಮಾರಿಗೆ ಬೆಂಗಳೂರಿನಿಂದ ಗುಡಗೇರಿಗೆ ಬರುತ್ತದೆ. ಇದೇ ರೈಲು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗುವಾಗ ಸಂಜೆ 6.40ರ ಸುಮಾರಿಗೆ ಗುಡಗೇರಿ ತಲುಪುತ್ತದೆ. ಬೆಳಿಗ್ಗೆ ಇಲ್ಲಿಂದ ಹೊರಟು, ಸಂಜೆ ಹುಬ್ಬಳ್ಳಿಯಿಂದ ಬರುವ ಕಾರಣ ದಿನದ ಕೆಲಸ ಮುಗಿಸಿಕೊಂಡು ಹುಬ್ಬಳ್ಳಿಗೆ ಹೋಗಿಬರಲು ಈ ರೈಲು ಜನರಿಗೆ ಅನುಕೂಲವಾಗಿದೆ. ಇದನ್ನು ಹೊರತುಪಡಿಸಿ ಬೇರೆ ಪ್ಯಾಸೆಂಜರ್ ರೈಲುಗಳ ಪ್ರಯಾಣದ ದರ ಇಳಿಕೆ ಮಾಡಿದ್ದರೂ, ಇದರ ದರ ಮಾತ್ರ ಕಡಿಮೆ ಮಾಡಿಲ್ಲ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ‘ರೈಲ್ವೆ ಮಂಡಳಿ ಕೋವಿಡ್ ಸಮಯದಲ್ಲಿ ವಿಶೇಷ ರೈಲುಗಳನ್ನು ಓಡಿಸಿದಾಗ ಬೆಲೆ ಹೆಚ್ಚಿಸಿತ್ತು. ಪ್ರತ್ಯೇಕವಾಗಿ ಒಂದು ರೈಲಿನ ದರ ಮಾತ್ರ ಹೆಚ್ಚಿರುವುದರ ಬಗ್ಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.