ADVERTISEMENT

ಹುಬ್ಬಳ್ಳಿ | ಶಾಸಕ, ಮೇಯರ್ ಭರವಸೆ ನಂತರ ಮುಷ್ಕರ ಹಿಂಪಡೆದ ಪೌರಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2023, 11:58 IST
Last Updated 3 ಅಕ್ಟೋಬರ್ 2023, 11:58 IST
<div class="paragraphs"><p>ಹುಬ್ಬಳ್ಳಿಯ ಪಾಲಿಕೆ ಕಚೇರಿ ಎದುರು ಮುಷ್ಕರ ನಡೆಸುತ್ತಿದ್ದ ಪೌರ ಕಾರ್ಮಿಕರನ್ನು ಉದ್ದೇಶಿಸಿ ಮಹೇಶ ಟೆಂಗಿನಕಾಯಿ ಮಾತನಾಡಿದರು</p></div>

ಹುಬ್ಬಳ್ಳಿಯ ಪಾಲಿಕೆ ಕಚೇರಿ ಎದುರು ಮುಷ್ಕರ ನಡೆಸುತ್ತಿದ್ದ ಪೌರ ಕಾರ್ಮಿಕರನ್ನು ಉದ್ದೇಶಿಸಿ ಮಹೇಶ ಟೆಂಗಿನಕಾಯಿ ಮಾತನಾಡಿದರು

   

ಪ್ರಜಾವಾಣಿ ಚಿತ್ರ

ಹುಬ್ಬಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮಹಾನಗರ ಪಾಲಿಕೆ ಎದುರು ಕಳೆದ ಐದು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದ ಪೌರಕಾರ್ಮಿಕರು ಮಂಗಳವಾರ ಮುಷ್ಕರ ಹಿಂಪಡೆದಿದ್ದಾರೆ. ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್‌ ವೀಣಾ ಬರದ್ವಾಡ ಅವರ ಭರವಸೆ ಹಿನ್ನಲೆಯಲ್ಲಿ ಪ್ರತಿಭಟನೆ ಕೈಬಿಟ್ಟಿರುವುದಾಗಿ ಘೋಷಿಸಿ, ಬುಧವಾರದಿಂದ ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದರು.

ADVERTISEMENT

ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಸದಸ್ಯರು ಸೆ. 29ರಿಂದ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದರು. ಅರೆಬೆತ್ತಲೆ ಪ್ರತಿಭಟನೆ, ಬಾಯಿ ಬಡಿದುಕೊಂಡು ಪ್ರತಿಭಟನೆ, ರಕ್ತದಲ್ಲಿ ಸರ್ಕಾರಕ್ಕೆ ಪತ್ರ ಬರೆದು ಪ್ರತಿಭಟನೆ ನಡೆಸಿದ್ದರು. ಬೇಡಿಕೆ ಈಡೇರುವವರೆಗೂ ಮುಷ್ಕರ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಆದರೆ, ಮಂಗಳವಾರ ಶಾಸಕ ಮಹೇಶ ಟೆಂಗಿನಕಾಯಿ ಮತ್ತು ಪಾಲಿಕೆ ಬಿಜೆಪಿ ಸದಸ್ಯರ ಭರವಸೆ ಹಿನ್ನೆಲೆಯಲ್ಲಿ ಮುಷ್ಕರ ಹಿಂಪಡೆದಿದ್ದಾರೆ.

‘ಐದು ದಿನಗಳಿಂದ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿನ ಕಸ ತೆಗೆಯದೆ ಮುಷ್ಕರದಲ್ಲಿ ಪಾಲ್ಗೊಂಡಿದ್ದೆವು. ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಶಾಸಕರು ಮತ್ತು ಪಾಲಿಕೆ ಬಿಜೆಪಿ ಸದಸ್ಯರು ಮುಂದಿನ ಸಾಮಾನ್ಯ ಸಭೆಯಲ್ಲಿ ನೇರ ನೇಮಕಾತಿ ಕುರಿತು ಠರಾವು ಪಾಸು ಮಾಡುವುದಾಗಿ ಭರವಸೆ ನೀಡಿದ್ದರಿಂದ ಮುಷ್ಕರ ಹಿಂಪಡೆಯುತ್ತಿದ್ದೇವೆ’ ಎಂದು ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಹೇಳಿದರು.

ಶಾಸಕ ಭರವಸೆ: ‘ಕಳೆದ ಬಾರಿ ನಡೆದ ಸಾಮಾನ್ಯ ಸಭೆಯ ಹೆಚ್ಚಿನ ವಿಷಯಪಟ್ಟಿಯಲ್ಲಿ ಪೌರ ಕಾರ್ಮಿಕರ ನೇರ ನೇಮಕಾತಿ ವಿಷಯ ಸೇರ್ಪಡೆ ಮಾಡಲಾಗಿತ್ತು. ಕಾರಣಾಂತರಗಳಿಂದ ಸಭೆಯೇ ಮುಂದೂಡಿತು. ಪಕ್ಷದ ಸದಸ್ಯರ ಜೊತೆ ಸಭೆ ನಡೆಸಿದ್ದು, ಮುಂದಿನ ಸಭೆಯಲ್ಲಿ ಠರಾವು ಪಾಸು ಮಾಡುವುದಾಗಿ ತಿಳಿಸಿದ್ದಾರೆ. ಆಯುಕ್ತರ, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿಯೇ ಅದು ಜಾರಿಗೆ ಬಂದರೆ ಉತ್ತಮ. ಸರ್ಕಾರದ ಮಟ್ಟದಲ್ಲಿ ಏನಾದರೂ ಮಾಡಬೇಕೆಂದರೆ, ನಾನೇ ಮುಂದು ನಿಂತು ಮಾಡುತ್ತೇನೆ. ಅಲ್ಲೂ ಸಮಸ್ಯೆಗೆ ಪರಿಹಾರ ಸಿಗದಿದ್ದರೆ, ಮುಂದಿನ ಅಧಿವೇಶನದಲ್ಲಿ ನಿಮ್ಮ ಧ್ವನಿಯಾಗಿ ಮಾತನಾಡುತ್ತೇನೆ. ನಿಮಗೆ ಅನ್ಯಾಯವಾಗಲು ಬಿಡುವುದಿಲ್ಲ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಭರವಸೆ ನೀಡಿದರು.

ಮೇಯರ್ ವೀಣಾ ಬರದ್ವಾಡ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಶಿವು ಮೆಣಸಿನಕಾಯಿ, ಸತೀಶ ಹಾನಗಲ್, ಸಂತೋಷ ಚವ್ಹಾಣ್‌, ರಾಧಾಬಾಯಿ ಸಫಾರೆ, ರೂಪಾ ಶೆಟ್ಟಿ, ಸಂಘದ ಪದಾಧಿಕಾರಿಗಳಾದ ಹೊನ್ನಪ್ಪ ದೇವಗೇರಿ, ರಮೇಶ ರಾಮಯ್ಯನವರ, ಬಸಪ್ಪ ಮಾದರ, ಗಾಳೆಪ್ಪ ದ್ವಾಸಲಕೇರಿ, ಭಾಗ್ಯಲಕ್ಷ್ಮಿ ಮಾದರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.