ADVERTISEMENT

ರಾಜತಾಂತ್ರಿಕ ವ್ಯವಸ್ಥೆಯಲ್ಲಿ ಕ್ರಮ: ಕದನ ವಿರಾಮದ ಕುರಿತು ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 11 ಮೇ 2025, 7:51 IST
Last Updated 11 ಮೇ 2025, 7:51 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: 'ವಿಶ್ವಮಟ್ಟದ ರಾಜತಾಂತ್ರಿಕ ವ್ಯವಸ್ಥೆಯಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಕದನಕ್ಕೆ ವಿರಾಮ ಘೋಷಿಸಲಾಗಿದೆ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

'ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು(ಡಿಜಿಎಂಒ) ಕದನ‌ ವಿರಾಮಕ್ಕೆ ಮನವಿ ಮಾಡಿದ್ದರು. ಅಮೆರಿಕಾ ಅಧ್ಯಕ್ಷರು ಸಹ ಈ ಕುರಿತು ಭಾರತದ ಜೊತೆ ಚರ್ಚಿಸಿದ್ದರು. ಕದನ ವಿರಾಮ ಘೋಷಿಸಿದ ನಂತರವೂ ಪಾಕಿಸ್ತಾನ ಗಡಿಯಲ್ಲಿ ಗುಂಡಿನ ಚಕಮಕಿ ನಡೆಸಿದ್ದು ಸರಿಯಲ್ಲ' ಎಂದು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಆಕ್ರೋಶ ವ್ಯಕ್ತಪಡಿಸಿದರು.

‘ಪಾಕಿಸ್ತಾನದ್ದು ಎಂದಿಗೂ ಇಬ್ಬಗೆಯ ನೀತಿ. ಅಲ್ಲಿಯ ಮಿಲಿಟರಿ ಪಡೆ ಚುನಾಯಿತಿ ಸರ್ಕಾರದ ಮಾತು ಎಂದಿಗೂ ಕೇಳಲ್ಲ. ಅಲ್ಲದೆ, ಅಲ್ಲಿಯ ಸರ್ಕಾರವೇ ಭಯೋತ್ಪಾದನೆಯನ್ನು ಪೋಷಣೆ ಮಾಡತ್ತಾ ಬಂದಿದೆ. ಇದು ಸರಿಯಾದ ನಡೆಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಎರಡು-ಮೂರು ದಿನಗಳಿಂದ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ನಮ್ಮ ಸೈನಿಕರು, ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾರೆ. ನಮ್ಮ ‌ಮಿಲಿಟರಿ ಪಡೆಗೆ ಎಲ್ಲ ಸ್ವಾತಂತ್ರ್ಯ ಕೊಡಲಾಗಿತ್ತು. ಸಂಘರ್ಷದಲ್ಲಿ ಸಾಕಷ್ಟು ಸಾವು-ನೋವು ಸಂಭವಿಸಿವೆ. ಇದರಲ್ಲಿ ನಾವು ಯಾವ ಕಾರಣಕ್ಕೂ ರಾಜಕಾರಣ ಬೆರಸಲ್ಲ’ ಎಂದು ಹೇಳಿದರು.

‘ಪಾಕಿಸ್ತಾನದ ಮಾಧ್ಯಮಗಳ ವರದಿ ಪ್ರಕಾರ ಕಂದಹಾರ್‌ನಲ್ಲಿ ನಡೆದ ದಾಳಿಯಲ್ಲಿ, ಅನೇಕ ಭಯೋತ್ಪಾದಕರು ಹಾಗೂ ಅವರ ಕುಟುಂಬದವರು, ಸಂಬಂಧಿಕರು ಮೃತಪಟ್ಟಿದ್ದಾರೆ. ಮೋಸ್ಟ್ ವಾಂಟೆಂಡ್ ಉಗ್ರರರು ಸಹ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಇದರಲ್ಲಿ ಯಾವುದೇ ಗೊಂದಲ ಬೇಡ’ ಎಂದು ಸಚಿವ ಜೋಶಿ ಹೇಳಿದರು.

'ಕದನ ವಿರಾಮ ಘೋಷಣೆ ನಂತರ ಕೆಲವರು ಸಂಭ್ರಮಪಟ್ಟಿದ್ದಾರೆ. ಇದು ದೇಶದ ಭದ್ರತೆ ವಿಚಾರವಾಗಿದ್ದು, ಖುಷಿ ಪಡುವ ಅಗತ್ಯವಿಲ್ಲ' ಎಂದ ಸಚಿವ ಜೋಶಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಿಚಾರದ ಕುರಿತು, 'ಕೆಲವು ಬಾರಿ ಆಡಳಿತಾತ್ಮಕವಾಗಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈ ಕುರಿತು ವಿದೇಶಾಂಗ ಸಚಿವರು ಹೆಚ್ಚಿನ ಮಾಹಿತಿ ನೀಡುತ್ತಾರೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.