
ಹುಬ್ಬಳ್ಳಿ: ‘ಮುಂದಿನ ದಿನಗಳಲ್ಲಿ ಹಿಂದೂ ದೇವತೆಗಳಿಗೆ, ಮಹಾಪುರುಷರಿಗೆ ಅವಮಾನವೇನಾದರೂ ಮಾಡಿದರೆ, ಅಂತವರ ಮನೆ–ಮನೆಗಳಿಗೆ ಹಾಗೂ ಮಸೀದಿಗಳಿಗೆ ಹೊಕ್ಕು ಹೊಡೆಯುತ್ತೇವೆ. ನಮ್ಮ ಸಹನೆಯ ಕಟ್ಟೆಯೂ ಒಡೆದಿದೆ’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಎಚ್ಚರಿಸಿದರು.
‘ಬಾಗಲಕೋಟೆಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಕೇವಲ ಎಂಟು ಮಂದಿಯನ್ನು ಮಾತ್ರ ಬಂಧಿಸಲಾಗಿದೆ. ಉಳಿದವರನ್ನು ಶೀಘ್ರ ಬಂಧಿಸಬೇಕು. ಅಲ್ಲಿರುವ ಮಸೀದಿಗೆ ಬೀಗ ಹಾಕಿ, ಮುತವಲ್ಲಿ ಹಾಗೂ ಮೌಲ್ವಿಗಳನ್ನು ವಶಕ್ಕೆ ಪಡೆಯಬೇಕು. ಈ ಕುರಿತು ಫೆ. 26ರಂದು ಬಾಗಲಕೋಟೆ ಹಾಗೂ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಶಿವಾಜಿ ಜಯಂತಿ ದಿನದಂದು ಬಾಗಲಕೋಟೆಯಲ್ಲಿ ಮಸೀದಿ ಎದುರು ಮೆರವಣಿಗೆ ಹೋಗುತ್ತಿದ್ದಾಗ, ದುಷ್ಕರ್ಮಿಗಳು ಪ್ರತಿಮೆ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಪೊಲೀಸರು ಸಹ ಗಾಯಗೊಂಡಿದ್ದಾರೆ. ಹೀಗಿದ್ದಾಗಲೂ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸಲಾಗುತ್ತಿದೆ. ಕಾಂಗ್ರೆಸ್‌ನ ತುಷ್ಟೀಕರಣ ನೀತಿಯಿಂದಾಗಿ ಕೆಲವು ಮುಸ್ಲಿಮರು ಮೆರೆದಾಡುತ್ತಿದ್ದಾರೆ. ರಾಜ್ಯದಲ್ಲಿರುವುದು ಕಾಂಗ್ರೆಸ್ ಸರ್ಕಾರವೇ? ಅಥವಾ ಮುಸ್ಲಿಮ್ ಸರ್ಕಾರವೇ? ಎನ್ನುವ ಅನುಮಾನ ಬರುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಹಿಂದೂಗಳನ್ನು ರಾಜಕೀಯ ಪಕ್ಷದ ಮುಖಂಡರು ರಕ್ಷಿಸುತ್ತಾರೆ ಎನ್ನುವ ಭರವಸೆ ನಮಗಿಲ್ಲ. ಈ ಹಿಂದೆ ಬಿಜೆಪಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರಲ್ಲಿ, ಸುಪ್ರೀಂ ಕೋರ್ಟ್ ಆದೇಶದಂತೆ ಆಜಾನ್ ಕುರಿತು ಕ್ರಮ ಕೈಗೊಳ್ಳಲು ವಿನಂತಿಸಲಾಗಿತ್ತು. ಅವರಿಂದಲೂ ಕೋರ್ಟ್ ಆದೇಶ ಪಾಲಿಸಲು ಸಾಧ್ಯವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೂ ಸಂಘಟನೆ ಮುಖಂಡ ಶಿವಾನಂದ ಸತ್ತಿಗೇರಿ ಮಾತನಾಡಿ, ‘ಬಾಗಲಕೋಟೆಯಲ್ಲಿ ನಡೆದ ಪ್ರಕಣವನ್ನು ವಿರೋಧಿಸಿ ಸಮಸ್ತ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ, 26ರಂದು ಹುಬ್ಬಳ್ಳಿಯಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 11ರಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಶಿವಾಜಿ ಮೂರ್ತಿ ಇಟ್ಟುಕೊಂಡು ಎರಡು ತಾಸು ವಾಹನಗಳ ಸಂಚಾರ ಸ್ಥಗಿತಗೊಳಿಸಲಿದ್ದೇವೆ’ ಎಂದರು.
ವಿವಿಧ ಹಿಂದೂ ಸಂಘಟನೆಗಳ ಮುಖಂಡರಾದ ವಿಶ್ವನಾಥ ಬೂದನೂರ, ವಿಶಾಲ ಜಾಧವ, ಮಹಾಂತೇಶ ಟಿ., ಶ್ರೀಧರ ಕಲಬುರ್ಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.