ಹುಬ್ಬಳ್ಳಿ: ‘ಆದಿಬಣಜಿಗ ಸಮಾಜವನ್ನು ಪ್ರವರ್ಗ 2 ‘ಎ’ಗೆ ಸೇರ್ಪಡೆ ಮಾಡಬೇಕು’ ಎಂದು ಅಖಿಲ ಕರ್ನಾಟಕ ಆದಿಬಣಜಿಗ ಸಮಾಜ ಕಲ್ಯಾಣ ಸಮಿತಿ ಆಗ್ರಹಿಸಿದೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಘಟನಾ ಕಾರ್ಯದರ್ಶಿ ಶರಣಬಸವ ಕಿವುಡನವರ, ‘ಎಚ್. ಕಾಂತರಾಜು ಹಾಗೂ ಜಯಪ್ರಕಾಶ ಹೆಗಡೆ ಅವರು ಸಲ್ಲಿಸಿದ ವರದಿಯಂತೆ ಸಮಾಜದ ಜನಸಂಖ್ಯೆ 1.31 ಲಕ್ಷ ಎಂದು ಅಂದಾಜಿಸಲಾಗಿದೆ. ಇದು ಸ್ವಾಗತಾರ್ಹ. ಸರ್ಕಾರ ಈ ವರದಿಯನ್ನು ಅಂಗೀಕರಿಸಬೇಕು’ ಎಂದು ಹೇಳಿದರು.
‘ಲಿಂಗಾಯತ ಉಪಜಾತಿಯಾದ ಆದಿಬಣಜಿಗ ಸಮಾಜವನ್ನು ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಗೆಜೆಟ್‌ನಲ್ಲಿ ಗುರುತಿಸಲಾಗಿತ್ತು. ಸ್ವಾತಂತ್ರ್ಯಾನಂತರದಲ್ಲಿ ಸಮಾಜವನ್ನು ಗುರುತಿಸಲಾಗಿಲ್ಲ. ಇದಕ್ಕಾಗಿ ನಿರಂತರ ಹೋರಾಟ ನಡೆದಿದ್ದು, ಗೆಜೆಟ್‌ನಲ್ಲಿ ಗುರುತಿಸುವ ಪ್ರಯತ್ನಗಳು ಕಾರಣಾಂತರದಿಂದ ವಿಫಲವಾದವು. ಹಾಗಾಗಿ, ಈವರೆಗೆ ನಾವು ಮತಬ್ಯಾಂಕ್ ಆಗಿ ಅಷ್ಟೇ ಬಳಕೆಯಾಗಿದ್ದೇವೆ’ ಎಂದರು.
‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳೆ ಸಮಾಜದ ಮುಖಂಡರೂ ವಿವಿಧೆಡೆ ತೆರಳಿ, ಆದಿಬಣಜಿಗ ಸಮಾಜದವರಿಗೆ ಅರಿವು ಮೂಡಿಸಿದ್ದೆವು. ಇದರಿಂದ ಸಮೀಕ್ಷೆ ವರದಿಯಲ್ಲಿ ಸಮಾಜವನ್ನು ಗುರುತಿಸಲಾಗಿದೆ. ಸಮಾಜದವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಪ್ರತ್ಯೇಕ ಮೀಸಲಾತಿಗೆ ನಮ್ಮ ಸಮ್ಮತವಿದೆ’ ಎಂದು ತಿಳಿಸಿದರು.
ಸಮಿತಿ ಅಧ್ಯಕ್ಷ ಸದಾಶಿವ ಸಿ. ಕಾರಡಗಿ, ಮಲ್ಲಿಕಾರ್ಜುನ, ವೈ.ಬಿ. ಪಾಟೀಲ, ಕಾಡಸಿದ್ಧಪ್ಪ ಯಲ್ಲಪ್ಪ ಗೌರಿ, ಬಸವರಾಜ ಪೀರಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.