ADVERTISEMENT

ಧಾರವಾಡ: ತಿರುಗುಬಾಣವಾದ ಖಾಸಗಿ ಆಸ್ಪತ್ರೆಗಳ ನಿರ್ಧಾರ

ಹೊರೆ ತಾಳದ ಸ್ಥಿತಿ ತಲುಪಿದ ಕಿಮ್ಸ್

ಬಸವರಾಜ ಹವಾಲ್ದಾರ
Published 13 ಮೇ 2020, 19:30 IST
Last Updated 13 ಮೇ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ರಾಜ್ಯದಲ್ಲಿ ಕೋವಿಡ್‌ –19 ಬಾಧಿತ ಪ್ರಕರಣಗಳು ಕಂಡು ಬಂದ ಆರಂಭದಲ್ಲಿ ಇತರೆ ರೋಗಿಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದ ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿಗಳ ನಿರ್ಧಾರ ಈಗ ಅವರಿಗೇ ತಿರುಗುಬಾಣವಾಗಿದೆ.

ಆಡಳಿತ ಮಂಡಳಿಯವರು ತಮ್ಮ ಆಸ್ಪತ್ರೆಯ ವೈದ್ಯರ ಸಲಹೆಯಂತೆ ಇತರೆ ರೋಗಿಗಳಿಗೂ ಚಿಕಿತ್ಸೆ ನೀಡದೆ ಆಸ್ಪತ್ರೆಗಳ ಬಾಗಿಲು ಮುಚ್ಚಿದ್ದರು. ಕೆಲ ಆಸ್ಪತ್ರೆಗಳಲ್ಲಿ ಹೆಸರಿಗೆ ಮಾತ್ರ ಹೊರರೋಗಿಗಳ ವಿಭಾಗವನ್ನು ತೆರೆಯಲಾಗಿತ್ತಾದರೂ, ಚಿಕಿತ್ಸೆ ಮಾತ್ರ ಮೊದಲಿನಂತೆ ದೊರೆಯುತ್ತಿರಲಿಲ್ಲ.

ಆಸ್ಪತ್ರೆಗಳ ನಿಲುವಿನಿಂದಾಗಿ ಒಳ ಹಾಗೂ ಹೊರ ರೋಗಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಲಭ್ಯವಿರುವ ಬೆಡ್‌ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಖಾಲಿ ಬಿದ್ದಿವೆ. ರೋಗಿಗಳು ಬಾರದ್ದರಿಂದ ಪ್ರಯೋಗಾಲಯಗಳ ಶುಲ್ಕದಿಂದ ಬರುತ್ತಿದ್ದ ಆದಾಯವೂ ನಿಂತು ಹೋಗಿದೆ.

ADVERTISEMENT

ಒಳ್ಳೆಯ ಹೆಸರು ಮಾಡಿದ ವೈದ್ಯರುಗಳಿಗೆ ಹೆಚ್ಚು, ಹೆಚ್ಚು ಸಂಬಳ ನೀಡಿ ಆಡಳಿತ ಮಂಡಳಿಗಳವರು ತಮ್ಮ ಆಸ್ಪತ್ರೆಗಳಿಗೆ ಸೇರಿಸಿಕೊಂಡಿದ್ದರು. ಈಗ ಅವರು ಹೊರಹೋದರೆ ಆಸ್ಪತ್ರೆಗಳನ್ನು ನಡೆಸುವುದು ಕಷ್ಟವಾಗುತ್ತದೆ. ಸಂಬಳ ನೀಡಿ ಉಳಿಸಿಕೊಳ್ಳಬೇಕೆಂದರೆ ಆರ್ಥಿಕ ತೊಂದರೆ ಎದುರಾಗಿದೆ. ಆಡಳಿತ ಮಂಡಳಿಗಳು ಅಡಕತ್ತರಿಯಲ್ಲಿ ಸಿಕ್ಕಂತಾಗಿವೆ.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಸಾರ್ವಜನಿಕರ ದೂರುಗಳ ನಂತರ, ‘ಕೋವಿಡ್‌ –19 ಹೊರತುಪಡಿಸಿ ಎಲ್ಲ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ, ಕ್ರಮಕೈಗೊಳ್ಳಲಾಗುವುದು’ ಎಂಬ ರಾಜ್ಯ ಸರ್ಕಾರದ ಎಚ್ಚರಿಕೆಯ ನಂತರ ಕೆಲವು ಆಸ್ಪತ್ರೆಗಳು ಬಾಗಿಲು ತೆರೆದಿವೆ.

‘ಒಳರೋಗಿಗಳು ಹಾಗೂ ಹೊರ ರೋಗಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆದರೆ, ಆಸ್ಪತ್ರೆಯ ನಿರ್ವಹಣಾ ವೆಚ್ಚ ಅಷ್ಟೇ ಇದೆ. ಹಾಗಾಗಿ, ಆಸ್ಪತ್ರೆಗಳ ಆಡಳಿತ ಮಂಡಳಿಗಳಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಎಲ್ಲ ಕ್ಷೇತ್ರಗಳೂ ಇಂತಹ ಬಿಕ್ಕಟ್ಟು ಎದುರಿಸುತ್ತಿವೆ’ ಎನ್ನುತ್ತಾರೆ ಹುಬ್ಬಳ್ಳಿಯ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಕ್ರಾಂತಿಕಿರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.