ADVERTISEMENT

‘ಆಮೂರಿಗೆ ವಿಮರ್ಶೆಯೇ ಜೀವನ, ಜೀವನವೇ ವಿಮರ್ಶೆ’

ಜಿ.ಎಸ್‌.ಆಮೂರ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭ

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:10 IST
Last Updated 8 ಮೇ 2025, 15:10 IST
ಧಾರವಾಡದಲ್ಲಿ ಗುರುವಾರ ನಡೆದ ಜಿ.ಎಸ್‌.ಆಮೂರ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದ ಉದ್ಘಾಟನೆಯಲ್ಲಿ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿದರು ಪ್ರಜಾವಾಣಿ ಚಿತ್ರ
ಧಾರವಾಡದಲ್ಲಿ ಗುರುವಾರ ನಡೆದ ಜಿ.ಎಸ್‌.ಆಮೂರ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದ ಉದ್ಘಾಟನೆಯಲ್ಲಿ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿದರು ಪ್ರಜಾವಾಣಿ ಚಿತ್ರ   

ಧಾರವಾಡ: ‘ಬಸವಣ್ಣನವರಿಗೆ ಜೀವನವೇ ಸಾಹಿತ್ಯ, ಸಾಹಿತ್ಯವೇ ಜೀವನ ಆಗಿತ್ತು ಹಾಗೆಯೇ ಜಿ.ಎಸ್‌.ಆಮೂರ ಅವರಿಗೆ ವಿಮರ್ಶೆಯೇ ಜೀವನ, ಜೀವನವೇ ವಿಮರ್ಶೆ ಆಗಿತ್ತು’ ಎಂದು ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.

ಜಿ.ಬಿ.ಜೋಶಿ ಮೆಮೊರಿಯಲ್‌ ಟ್ರಸ್ಟ್‌, ಜಿ.ಎಸ್‌.ಆಮೂರ ಜನ್ಮಶತಮಾನೋತ್ಸವ ಸಮಿತಿ ಹಾಗೂ ಅಣ್ಣಾಜಿರಾವ್‌ ಸಿರೂರು ರಂಗಮಂದಿರ ಪ್ರತಿಷ್ಠಾನ ವತಿಯಿಂದ ಸೃಜನಾ ರಂಗಮಂದಿರದಲ್ಲಿ ಗುರುವಾರ ನಡೆದ ಜಿ.ಎಸ್‌.ಆಮೂರ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದ ಉದ್ಘಾಟನೆಯಲ್ಲಿ ಮಾತನಾಡಿದರು.

‘ಕಾವ್ಯವು ದ.ರಾ.ಬೇಂದ್ರೆ ಅವರ ಸ್ವಧರ್ಮ, ಹಾಗೆಯೇ ಜಿ.ಎಸ್‌.ಆಮೂರ ಅವರ ಸ್ವಧರ್ಮ ವಿಮರ್ಶೆ. ಯಾವುದು ಸ್ವಧರ್ಮವೋ ಅದು ಸೃಜನಶೀಲ’ ಎಂದು ಹೇಳಿದರು.

ADVERTISEMENT

‘ಬೇಂದ್ರೆ ಅವರ ಸಾಹಿತ್ಯವನ್ನು ಸಮಗ್ರವಾಗಿ ಅರ್ಥೈಸುವುದು ಬಹಳ ಕಠಿಣ. ಅದಕ್ಕೆ ಬಹಳಷ್ಟು ತಯಾರಿ ಬೇಕಾಗುತ್ತದೆ. ನಮ್ಮ ಅಧ್ಯಯನವನ್ನೇ ಸ್ವಧ್ಯಾಯವನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಆಮೂರ ಅವರು ಬೇಂದ್ರೆ ಸಾಹಿತ್ಯವನ್ನು ನಮಗೆ ಆಳವಾಗಿ, ಚೆನ್ನಾಗಿ ಅರ್ಥ ಮಾಡಿಸಿಕೊಟ್ಟರು.

ವಿಮರ್ಶೆಯು ಸ್ವಧ್ಯಾಯದ ಸವಾಲವನ್ನು ಎದುರಿಸಬೇಕಾಗಿದೆ. ಆ ಸವಾಲನ್ನು ಎದುರಿಸಿದವರು ಆಮೂರ. ಸ್ವಧ್ಯಾಯ ಬದಲಾದರೆ ವ್ಯಕ್ತಿತ್ವ ಬದಲಾಗುತ್ತದೆ’ ಎಂದು ವಿಶ್ಲೇಷಿಸಿದರು.

ಸಾಹಿತಿ ರಾಘವೇಂದ್ರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ‘ಆಮೂರ ಅವರು ಆಧುನಿಕ ಕನ್ನಡ ಸಾಹಿತ್ಯವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ವಿಮರ್ಶೆ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಬದ್ಧತೆ, ಪ್ರತಿಭೆ, ವ್ಯುತ್ಪತ್ತಿ ಮತ್ತು ಆನ್ವಯ ಶಕ್ತಿ ಅವರಲ್ಲಿತ್ತು. ವಿಮರ್ಶೆ ಕಾರ್ಯವನ್ನು ವ್ರತವಾಗಿ ನಿರ್ವಹಿಸಿದವರು’ ಎಂದು ಹೇಳಿದರು.

‘ವಿಮರ್ಶಕನಿಗೆ ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಅಪಾರ ಕಾಳಜಿ ಇರಬೇಕು. ಅದು ಆಮೂರರಿಗೆ ಇತ್ತು. ಅವರ ವಿಮರ್ಶೆಯು ಸೌಂದರ್ಯಾತ್ಮಕ ಮತ್ತು ಸಾಹಿತ್ಯಿಕ ವಿಮರ್ಶೆಯ ಮಿಳಿತವಾಗಿತ್ತು’ ಎಂದರು.

ಕೃಷ್ಣಕಟ್ಟಿ, ಜಯಂತ ಆಮೂರ, ಜಿ.ಎಂ.ಹೆಗಡೆ, ಎಚ್‌.ವಿ.ಕಾಖಂಡಿಕಿ ಪಾಲ್ಗೊಂಡಿದ್ದರು.

ಧಾರವಾಡದಲ್ಲಿ ಗುರುವಾರ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಜಿ.ಎಂ.ಹೆಗಡೆ ಸಾಹಿತಿ ಜಯಂತ ಕಾಯ್ಕಿಣಿ ಹಾಗೂ ಎಂ.ಜಿ.ಹೆಗಡೆ ಮಾತುಕತೆಯಲ್ಲಿ ತೊಡಗಿದ್ದರು ಪ್ರಜಾವಾಣಿ ಚಿತ್ರ

’ವಿಮರ್ಶೆಗೆ ಹೊಸ ಆಯಾಮ ಕೊಟ್ಟವರು ಆಮೂರ

’ ಆಮೂರ ಅವರು ವಿಮರ್ಶೆಗೆ ಹೊಸ ಆಯಾಮ ಕೊಟ್ಟವರು. ಅವರದು ಜೀವನ ಪ್ರಜ್ಞೆಯ ಬರಹ ಎಂದು ಸಾಹಿತಿ ಜಯಂತ್‌ ಕಾಯ್ಕಿಣಿ ಹೇಳಿದರು. ‘ಬೆಳಕಿನ ಬೆಳೆ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಆಮೂರ ಅವರು ತಮಗನಿಸಿದ್ದನ್ನು ನಿರ್ಭಿಡೆಯಿಂದ ಬರೆದರು. ನಮ್ಮ ಸಂವೇದನೆ ಹೆಚ್ಚಿಸಿ ಮುಕ್ತವಾಗಿಸಿದರು. ವಿಮರ್ಶಾ ಸಾಹಿತ್ಯವನ್ನು ಓದಲು ಹೊಸ ತಲೆಮಾರಿನವರನ್ನು ಸೆಳೆಯಬೇಕು ಎಂದರು. ‘ಅಮೂರ ಅವರು ಕೃತಿ ನಿಷ್ಠ ವಸ್ತು ನಿಷ್ಠ ಮತ್ತು ಸತ್ಯ ನಿಷ್ಠ ವಿಮರ್ಶಕ. ಸರ್ಕಾರವು ಅವರ ಹೆಸರಿನಲ್ಲಿ ಟ್ರಸ್ಟ್‌ ಸ್ಥಾಪಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮನು ಬಳಿಗಾರ ಹೇಳಿದರು. ಸರ್ಕಾರದ ವತಿಯಿಂದ ಅವರ ಜನ್ಮಶತಮಾನೋತ್ಸವ ಆಚರಿಸಿ ಅವರ ಸಮಗ್ರ ಸಾಹಿತ್ಯವನ್ನು ಪ್ರಕಟಿಸಬೇಕು. ಸರ್ಕಾರ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಖರೀದಿಸಬೇಕು ಎಂದರು. ಕೃತಿಗಳ ಸಂಪಾದಕರಾದ ಜಿ.ಎಂ.ಹೆಗಡೆ ಎಂ.ಜಿ.ಹೆಗಡೆ ಪಾಲ್ಗೊಂಡಿದ್ದರು. === ಪುಸ್ತಕ ವಿವರ ಕೃತಿ: ಬೆಳ‌ಕಿನ ಬೆಳೆ (ಜಿ.ಎಸ್‌.ಆಮೂರರ ಆಯ್ದ ವಿಮರ್ಶಾ ಲೇಖನಗಳು) ಸಂಪಾದಕ: ಎಂ.ಜಿ.ಹೆಗಡೆ ಪ್ರಕಾಶನ: ಮನೋಹರ ಗ್ರಂಥಮಾಲಾ ಧಾರವಾಡ ಪುಟ:472 ಬೆಲೆ: ₹ 675 ಪುಸ್ತಕ ವಿವರ ಕೃತಿ: ಜಿ.ಎಸ್‌.ಆಮೂರ ಅವರ ಸಮಗ್ರ ಬೇಂದ್ರೆ ವಿಮರ್ಶೆ ಸಂಪಾದಕ: ಜಿ.ಎಂ.ಹೆಗಡೆ ಪ್ರಕಾಶನ: ಸಾಹಿತ್ಯ ಪ್ರಕಾಶ ಹುಬ್ಬಳ್ಳಿ ಪುಟ:1032 ಬೆಲೆ: ₹ 1250

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.