ADVERTISEMENT

'ಈದ್ಗಾ' ಗಣೇಶೋತ್ಸವ: ಮುಂದುವರಿದ ಪ್ರತಿಭಟನೆ; ಶಾಸಕ ಟೆಂಗಿನಕಾಯಿ ಬೆಂಬಲ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2023, 4:29 IST
Last Updated 15 ಸೆಪ್ಟೆಂಬರ್ 2023, 4:29 IST
   

ಹುಬ್ಬಳ್ಳಿ: ನಗರದ ರಾಣಿ ಚನ್ನಮ್ಮ‌ ಮೈದಾನ(ಈದ್ಗಾ)ದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಹಾಗೂ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರವೂ ಮುಂದುವರಿದಿದೆ.

ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆಯಿಂದ ಆರಂಭವಾದ ಪ್ರತಿಭಟನೆ ಅಹೋರಾತ್ರಿ ನಡೆಯಿತು. ಪಾಲಿಕೆಯ ಬಿಜೆಪಿ ಸದಸ್ಯರು ಆಯುಕ್ತರ ಕಚೇರಿಯಲ್ಲಿಯೇ ಮಲಗಿ ಪ್ರತಿಭಟಿಸಿದರು.

ಬೆಂಗಳೂರಿನಿಂದ ಹುಬ್ಬಳ್ಳಿಗೆ ಶುಕ್ರವಾರ ಬೆಳಿಗ್ಗೆ ಬಂದ ಶಾಸಕ ಮಹೇಶ ಟೆಂಗಿನಕಾಯಿ ನೇರವಾಗಿ ಪ್ರತಿಭಟನಾ ಸ್ಥಳಕ್ಕೆ ತೆರಳಿ, ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು. ತಾವು ಸಹ ಧರಣಿ ಕೂತು ಬೆಂಬಲ ಸೂಚಿಸಿದರು. ಸರ್ಕಾರ ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ನಂತರ‌ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಗಸ್ಟ್ 31ರಂದೇ ಠರಾವು ಪಾಸಾಗಿದೆ. ಆದರೆ, ಪಾಲಿಕೆ ಆಯುಕ್ತರು ಈವರೆಗೂ ಅನುಮತಿ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ಖ‌ಡನೀಯ' ಎಂದರು.

'ಮೈದಾನದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡದಂತೆ ಕೆಲವರು ಕೋರ್ಟ್'ಗೆ ಹೋಗುತ್ತಿದ್ದಾರೆ. ಮೈದಾನ ಪಾಲಿಕೆ ಆಸ್ತಿಯಾಗಿದ್ದು ಆಯುಕ್ತರು ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು ಎಂದು‌ ಕಳೆದ ಬಾರಿ ಕೋರ್ಟ್ ನಿರ್ದೇಶನ ನೀಡಿದೆ. ಹೀಗಿದ್ದಾಗಲೂ ಆಯುಕ್ತರು ಅನುಮತಿ ನೀಡಲು ಮೀನಮೇಷ ಮಾಡುತ್ತಿರುವುದು ನೋಡಿದರೆ, ಸರ್ಕಾರ ಕುಮ್ಮಕ್ಕು ನೀಡುತಗತಿರುವುದು ಸ್ಪಷ್ಟವಾಗುತ್ತಿದೆ. ಅಲ್ಲದೆ, ಇದರ ಹಿಂದೆ ಯಾವುದೋ ಹಿಡನ್ ಅಜೆಂಡಾ ಇದೆ ಎಂದು ಅನುಮಾನ ವ್ಯಕ್ತವಾಗುತ್ತಿದೆ' ಎಂದು ಹೇಳಿದರು.

'ಹುಬ್ಬಳ್ಳಿ ಅಂಜುಮನ್ ಸಂಸ್ಥೆಯವರು ಪದೇಪದೇ ಕೋರ್ಟ್'ಗೆ ಹೋಗುತ್ತಿರುವುದು ಸರಿಯಲ್ಲ. ವರ್ಷದಲ್ಲಿ ಎರಡು ದಿನ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅವರಿಗೂ ಅವಕಾಶ ನೀಡಲಾಗಿದೆ. ಅವರು ಹೀಗೆ ಮಾಡುತ್ತಿದ್ದರೆ, ನಾವು ಸಹ ಮುಂದಿನ ದಿನಗಳಲ್ಲಿ‌ ಅನಿವಾರ್ಯವಾಗಿ ಕಾನೂನು ಹೋರಾಟ ನಡೆಸಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದರು.

'ಯಾವುದಕ್ಕೂ ಬಗ್ಗುವುದಿಲ್ಲ...'
'ಈದ್ಗಾ ಮೈದಾನದ ವಿಷಯ ಕುರಿತು ಹಿಂದೆ ಅನೇಕ ಘಟನೆಗಳು ನಡೆದಿವೆ. ಧ್ವಜಾರೋಹಣ ನಡೆಯುವ ಸಂದರ್ಭ ಅವಘಡಗಳು ನಡೆದಿದ್ದವು. ಮತ್ತೆ ಅಂತಹ‌ ಸನ್ನಿವೇಶಗಳಿಗೆ ರಾಜ್ಯ ಸರ್ಕಾರ ಅವಕಾಶ ನೀಡಬಾರದು. ಮೈದಾನದಲ್ಲಿ ಗಣೇಶೋತ್ಸವ ಆಚರಿಸುವ ಕುರಿತು ಈಗಾಗಲೇ ಸಮಸ್ತ ಹಿಂದೂ ಸಮಾಜ ನಿರ್ಣಯ ತೆಗೆದುಕೊಂಡಿದೆ. ಅಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡೇ ಮಾಡುತ್ತೇವೆ. ನಾವು ಯಾವುದಕ್ಕೂ ಬಗ್ಗುವುದಿಲ್ಲ' ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.