ADVERTISEMENT

ಹುಬ್ಬಳ್ಳಿ: ಕಾರ್ಮಿಕ ಸಂಹಿತೆ ಜಾರಿಗೆ ವಿರೋಧ, ಪ್ರತಿಭಟನೆ

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 13:55 IST
Last Updated 23 ಸೆಪ್ಟೆಂಬರ್ 2024, 13:55 IST
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಕಾರ್ಮಿಕರು ಹುಬ್ಬಳ್ಳಿಯ ತಹಶೀಲ್ದಾರ್‌ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಕಾರ್ಮಿಕರು ಹುಬ್ಬಳ್ಳಿಯ ತಹಶೀಲ್ದಾರ್‌ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಕಾರ್ಮಿಕರು ಹುಬ್ಬಳ್ಳಿಯ ತಹಶೀಲ್ದಾರ್‌ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ತಹಶೀಲ್ದಾರ್ ಕಚೇರಿ ಎದುರು ಸೇರಿದ ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

‘ಕೇಂದ್ರ ಸರ್ಕಾರ ಕಾರ್ಮಿಕ ವರ್ಗದ ತೀವ್ರ ವಿರೋಧದ ಮಧ್ಯೆ ದೇಶವನ್ನು ಲೂಟಿ ಮಾಡಲು, ಕಾರ್ಪೊರೇಟ್ ವಲಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ದೇಶದಲ್ಲಿ ಜಾರಿಯಲ್ಲಿರುವ 34 ಕಾರ್ಮಿಕ ಕಾನೂನುಗಳನ್ನು ಒಟ್ಟುಗೂಡಿಸಿ 4 ಕಾರ್ಮಿಕ ಸಂಹಿತೆಗಳನ್ನು (ಕೋಡ್‌) ಜಾರಿ ಮಾಡಲು ಹೊರಟಿದೆ. ಇದು ಖಂಡನೀಯ’ ಎಂದು ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಮಹೇಶ ಪತ್ತಾರ ಹೇಳಿದರು.

ADVERTISEMENT

‘ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕರ ಜಾರಿ ಮಾಡಲು ಹೊರಟಿರುವ ಈ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರನ್ನು ನವಗುಲಾಮಗಿರಿಗೆ ತಳ್ಳುತ್ತವೆ. ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಕಾರ್ಮಿಕರ ಸಂಘಟನೆಯ ಹಕ್ಕು, ಮುಷ್ಕರದ ಹಕ್ಕು, ಕನಿಷ್ಠ ವೇತನ, ಕೆಲಸದ ಅವಧಿ, ಸಾಮಾಜಿಕ, ಆರ್ಥಿಕ ಭದ್ರತೆ ಹಕ್ಕುಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ’ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಟಿಯುಸಿಸಿ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬಾರ್ಕಿ, ಎಐಟಿಯುಸಿ ಮುಖಂಡ ಎ.ಎಸ್. ಪೀರಜಾದೆ, ವಿಮಾ ನೌಕರರ ಮುಖಂಡ ಬಿ.ಎನ್. ಪೂಜಾರಿ, ಎಐಯುಟಿಯುಸಿ ಮುಖಂಡ ಗಂಗಾಧರ ಬಡಿಗೇರ ಮಾತನಾಡಿದರು.

ಮುಖಂಡರಾದ ಎಂ.ಎಚ್. ಮುಲ್ಲಾ, ಎ.ಎಂ. ಖಾನ್, ಗುರುಸಿದ್ದಪ್ಪ ಅಂಬಿಗೇರ, ಹನಮಂತ ಅಂಬಿಗೇರ, ಗಾಳೆಪ್ಪ ಮುತ್ಯಾಳ, ಭುವನಾ ಬಳ್ಳಾರಿ, ಕತಾಲಸಾಬ ಮುಲ್ಲಾ, ಶ್ರಮಜೀವಿ ಅಟೊರೀಕ್ಷಾ ಚಾಲಕರ ಸಂಘದ ಚಿದಾನಂದ ಸವದತ್ತಿ, ಪುಂಡಲೀಕ ಬಡಿಗೇರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.