ಧಾರವಾಡ: ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಪ್ರಸ್ತಾವವನ್ನು ವಿರೋಧಿಸಿ ರಾಜ್ಯ ಕೊರಮ, ಕೊರಚ, ಬೋವಿ, (ವಡ್ಡರ) ಬಂಜಾರ (ಲಂಬಾಣಿ), ಭಜಂತ್ರಿ, ಡೊಂಬರ ಮೀಸಲಾತಿ ಸಂರಕ್ಷಣಾ ಹೋರಾಟ ಸಮಿತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ನಗರದ ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡು ಒಳಮೀಸಲಾತಿ ಜಾರಿಗೊಳಿಸದಂತೆ ಘೋಷಣೆಗಳನ್ನು ಕೂಗಿದರು.
‘ನಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದ್ದು, ನ್ಯಾಯ ಸಮ್ಮತ ಮತ್ತು ಸಂವಿಧಾನತ್ಮಕ ಅಂಶಗಳ ದೃಷ್ಟಿಯಿಂದ ಸರ್ಕಾರ ಹೊಸದಾಗಿ ಅಧ್ಯಯನಕ್ಕೆ ಕ್ರಮ ವಹಿಸಬೇಕು. ರಾಜ್ಯದಲ್ಲಿರುವ ಸಮುದಾಯಗಳ ದತ್ತಾಂಶವನ್ನು ವೈಜ್ಞಾನಿಕವಾಗಿ ಸಂಗ್ರಹಿಸದೆ ತರಾತುರಿಯಲ್ಲಿ ಒಳಮೀಸಲಾತಿ ಜಾರಿಗೊಳಸಬಾರದು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪರಿಶಿಷ್ಟ ಜಾತಿಯಲ್ಲಿ ಕೊರಚ, ಕೊರಮ, ಭೋವಿ, ವಡ್ಡರ, ಲಂಬಾಣಿ ಸಹಿತ 101 ಜಾತಿಗಳು ಇವೆ. ಕೇವಲ ಎರಡು ಜಾತಿಗಳಿಗೆ ಒಳಮಿಸಲಾತಿ ನೀಡಿದರೆ ಉಳಿದ 99 ಜಾತಿಗಳು ತೊಂದರೆಯಾಗುತ್ತದೆ. ಆದ್ದರಿಂದ ಜಾತಿಗಣತಿ ಆಗುವರೆಗೂ ಒಳಮೀಸಲಾತಿ ಜಾರಿ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.
2011ರ ನಂತರ ಜನಗಣತಿ ನಡೆದಿಲ್ಲ. ಜನಸಂಖ್ಯಾ ಮಾಹಿತಿ ಇಲ್ಲದೇ ಮತ್ತು ಜಾತಿ ಗಣತಿ ನಡೆಸದೆ ಒಳಮೀಸಲಾತಿ ಜಾರಿಗೆ ತರುವುದು ಸಮಂಜಸ ಆಗುವುದಿಲ್ಲ. ಸಮುದಾಯಗಳ ನಡುವೆ ಯಾವುದೇ ಧಕ್ಕೆ ತರದಂತೆ ಎಲ್ಲ ಪರಿಶಿಷ್ಟರ ಹಿತವನ್ನು ಕಾಪಾಡಲು ಸರ್ಕಾರ ಕ್ರಮವಹಿಸಬೇಕು ಎಂದು ಕೋರಿದರು.
ಹೋರಾಟ ಸಮಿತಿಯ ಕೃಷ್ಣಾಜಿ ಚವಾಣ್, ಹರಿಲಾಲ್ ಪವಾರ, ಲಾಲು ಲಮಾಣಿ, ನಾಗರಾಜ ನಾಯಕ್, ಮಂಗಳಪ್ಪ ಲಮಾಣಿ, ವಾಸು ಲಮಾಣಿ, ವೆಂಕಟೇಶ ಪಮ್ಮಾರ, ಗೋವಿಂದ ಪಮ್ಮಾರ, ಮಂಜುನಾಥ ಜಿ, ಚಂದ್ರಕಾಂತ ನಾಯಕ್, ರಮೇಶ ಲಮಾಣಿ ಪಾಲ್ಗೊಂಡಿದ್ದರು.
ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗೊಳಿಸುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮ್ಮಿಕೊಳ್ಳಲಾಗುವುದುಪಾಂಡುರಂಗ ಪಮ್ಮಾರ ರಾಜ್ಯಾಧ್ಯಕ್ಷ ಅಖಿಲ ಭಾರತ ಬಂಜಾರ ಸೇವಾ ಸಂಘ (ಎಐಬಿಎಸ್‍ಎಸ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.