
ಹುಬ್ಬಳ್ಳಿ: ‘ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ಭಾಗಿಯಾದವರನ್ನು ಗಲ್ಲುಶಿಕ್ಷೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಲಘಟಗಿ ಘಟಕ ಆಗ್ರಹಿಸಿದೆ.
ನಗರದ ಮಿನಿ ವಿಧಾನಸೌಧದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದ ಸಮಿತಿ ಸದಸ್ಯರು, ಕೃತ್ಯ ನಡೆಸಿದ ಆರೋಪಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆರು ತಿಂಗಳು ಗರ್ಭಿಣಿ ಮಾನ್ಯಾ ಅವರ ಸಾವಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿ, ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿದರು.
‘ಅನ್ಯ ಜಾತಿಯ ಹುಡುಗನನ್ನು ಮದುವೆಯಾಗಿದ್ದಾಳೆ ಎಂದು ತಂದೆಯೇ ಮಗಳನ್ನು ಕೊಲೆ ಮಾಡಿರುವುದು ಅತ್ಯಂತ ಅಮಾನವೀಯ ಕೃತ್ಯ. ಆಧುನಿಕ ದಿನಗಳಲ್ಲೂ ಇಂಥ ಪ್ರಕರಣ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು, ಇನ್ನೆಲ್ಲೂ ಇಂಥ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮಾನ್ಯಾ ಕೊಲೆ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ, ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು’ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಸಮಿತಿಯ ಮಂಜುನಾಥ ಮಾದರ, ನಿಂಗಪ್ಪ ಕೆಳಗೇರಿ, ಮಹೇಂದ್ರ ಹುಣಶ್ಯಾಳ, ಹನುಮಂತ ಮಾದರ, ಪರಶುರಾಮ ದಿಂಡವಾರ, ವೆಂಕಟೇಶ ವೀರಾಪುರ, ತಿಪ್ಪಣ್ಣ ಕಲಹಾರ, ಮಂಜುಳಾ ಹೊಸಮನಿ, ಯಲ್ಲಪ್ಪ ಮಾದರ, ಆನಂದ ಬೆನಸಮೇಟಿ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.