ADVERTISEMENT

ಕತಾರ್‌ನಲ್ಲಿ ಹೆಬ್ಬಾಳರ ಉತ್ತರ ಕರ್ನಾಟಕ ಬಳಗ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 19:30 IST
Last Updated 26 ಆಗಸ್ಟ್ 2019, 19:30 IST
ಕತಾರ್‌ನಲ್ಲಿರುವ ಉತ್ತರ ಕರ್ನಾಟಕ ಬಳಗದ ಸದಸ್ಯರು
ಕತಾರ್‌ನಲ್ಲಿರುವ ಉತ್ತರ ಕರ್ನಾಟಕ ಬಳಗದ ಸದಸ್ಯರು   

ನಮ್ಮ ನೆಲ–ಜಲ, ಜನಮನದ ಬಗ್ಗೆ ಅಭಿಮಾನ ಬೆಳೆಸಿಕೊಂಡು, ಕ್ರಿಯಾಶೀಲರಾಗಿ ಸಕ್ರಿಯವಾಗಿರುವ ವ್ಯಕ್ತಿ ಶಶಿಧರ ಹೆಬ್ಬಾಳ. ವಿಜಯಪುರ ಜಿಲ್ಲೆಯ ಸಿಂದಗಿಯವರಾದ ಶಶಿಧರ ಮಧ್ಯಮ ವರ್ಗದಲ್ಲಿ ಬೆಳೆದು, ಬಾಗಲಕೋಟೆಯಲ್ಲಿ ಎಂಜಿನಿಯರಿಂಗ್‌ ಓದಿದವರು. ಧಾರವಾಡದ ಮುರುಘಾಮಠದಲ್ಲಿ ವಾಸವಾಗಿದ್ದು, ಪಿಯುಸಿ ಮುಗಿಸಿದರು.

ಶಾಲೆಯಲ್ಲಿದ್ದಾಗಲೇ ನಟನೆ–ಬರವಣಿಗೆಯಲ್ಲಿ ಆಸಕ್ತರಾಗಿದ್ದ ಇವರು ಅನೇಕ ನಾಟಕಗಳನ್ನು ತಾವೇ ಬರೆದು ಗೆಳೆಯರೊಂದಿಗೆ ಅಭಿನಯಿಸಿದ್ದಾರೆ. ಕೆಲವು ಕಥೆ–ಕವನಗಳು ಶಾಲಾಪತ್ರಿಕೆಗಳಲ್ಲಿ ಪ್ರಕಟಗೊಂಡಾಗ ಗುರು–ಹಿರಿಯರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮುಂದೆ ವಿಜ್ಞಾನ ವಿಷಯವನ್ನು ಆಯ್ದುಕೊಂಡು, ಉತ್ತಮ ಅಂಕಗಳನ್ನು ಪಡೆದು ಎಂಜಿನಿಯರಿಂಗ್ ಪದವಿ ಓದಿದರು. ಓದಿನಲ್ಲಿ ಹೆಚ್ಚು ಗಮನ ಕೊಡಬೇಕಾದ್ದರಿಂದ ಸಾಂಸ್ಕೃತಿಕ ಚಟುವಟಿಕೆಗಳು ಕಡಿಮೆಯಾದರೂ ಆಸಕ್ತಿ ಕುಂದಿರಲಿಲ್ಲ. ಹಾಗಾಗಿ ಕಾಲೇಜು ದಿನಗಳಲ್ಲೂ ನಾಟಕಾಭಿನಯ ಮತ್ತು ಬರವಣಿಗೆ ಮುಂದುವರೆಸಿದರು.

ಸಾಮಾಜಿಕ ಕಳಕಳಿ ಮತ್ತು ಅನ್ಯಾಯವನ್ನು ಸಹಿಸದ ವ್ಯಕ್ತಿತ್ವ ಹೊಂದಿರುವ ಶಶಿಧರರ ನಾಟಕ, ಕಥೆಗಳಲ್ಲೂ ಈ ವಿಷಯ ಎದ್ದು ಕಾಣುತ್ತಿತ್ತು. ಸಾಮಾಜಿಕ ರಂಗದಲ್ಲಿ ಬದಲಾವಣೆಗಳಾಗಬೇಕೆಂಬ ಉತ್ಕಟ ಆಸೆಯಿಂದ ಸ್ಥಳೀಯ ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಆದರೆ ಈ ರಾಜಕೀಯ ಬಹಳ ದಿವಸ ಮುಂದುವರೆಯಲಿಲ್ಲ. ಕಾರಣ ದೂರದ ಕತಾರ್‌ ದೇಶದಲ್ಲಿ ಸರ್ಕಾರಿ ನೌಕರಿಯೊಂದು ಇವರಿಗೆ ಕಾಯುತ್ತಿತ್ತು. ‘ಅರ್ಜಿ ಹಾಕಿದ್ದಷ್ಟೆ ನೆನೆಪು...ಅದು ಹೇಗೆ ನನ್ನ ಆಯ್ಕೆಯಾಯಿತೋ, ನನ್ನಲ್ಲಿಯ ಯಾವ ಪ್ರತಿಭೆ ಕತಾರ್‌ ಸರ್ಕಾರಕ್ಕೆ ಮೆಚ್ಚುಗೆಯಾಯಿತೋ ನಾನರಿಯೇ...ನೌಕರಿ ಬಂದೇಬಿಡ್ತು’ ಎಂದು ನಗುನಗುತ ಹೇಳುವ ಶಶಿಧರ, ಇಂದು ಬಿಡುವಿಲ್ಲದ ಸರ್ಕಾರಿ ಅಧಿಕಾರಿ. ಎಲ್ಲರೊಂದಿಗೆ ಬೆರೆತು ತಮ್ಮ ಕರ್ತವ್ಯದಿಂದ ಸೈ ಎನಿಸಿಕೊಂಡಿದ್ದಾರೆ.

ADVERTISEMENT

ಕತಾರ್‌ ದೇಶದ ಕನ್ನಡ ಜನರೊಂದಿಗೆ ಅಲ್ಲಿಯ ಕನ್ನಡ ಸಂಘದ ಹಿಂದಿನ ಅಧ್ಯಕ್ಷ ಅರವಿಂದ ಪಾಟೀಲರೊಂದಿಗೆ ಪರಿಚಯವಾಗಿ ಕತಾರದಲ್ಲಿಯ ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಶಶಿಧರ ಅವರ ಬಾಳಿನಲ್ಲಿ ಹೊಸ ಅಧ್ಯಾಯ. ಕತಾರ ಕನ್ನಡ ಸಂಘದಲ್ಲಿ ‘ನ ಭೂತೋ ನ ಭವಿಷ್ಯ’ ಎಂಬಂತಹ ಕಾರ್ಯಕ್ರಮ ಆಯೋಜಿಸಿದ ಅರವಿಂದ ಪಾಟೀಲರು ಶಶಿಧರರಿಗೆ ಮಾರ್ಗದರ್ಶಕರಾಗಿ ಸಹಕರಿಸಿದರು. ಇದರಿಂದ ಶಶಿಧರ ಹೆಬ್ಬಾಳರ ಉತ್ಸಾಹ ಇಮ್ಮಡಿಯಾಗಿ ಹೆಚ್ಚು ಹೆಚ್ಚು ಕನ್ನಡ ಕೆಲಸಗಳನ್ನು ಮಾಡಲಾರಂಭಿಸಿದರು.

ಕತಾರ್‌ ಕರ್ನಾಟಕ ಸಂಘದಲ್ಲಿ ಕನ್ನಡ ಅಭಿವೃದ್ಧಿ ಹಾಗೂ ನೈಸರ್ಗಿಕ ಸಂಚಾಲಕರಾಗಿ ಕಾರ್ಯ ನಿರ್ವಹಿಸಿ ಭೇಷ್‌ ಎನಿಸಿಕೊಂಡರು. ಅನೇಕ ಮಕ್ಕಳನ್ನು ಕನ್ನಡ ತರಗತಿಗಳಿಗೆ ಕರೆದುಕೊಂಡು ಬಂದು ಕನ್ನಡ ಕಲಿಯುವ ಬಯಕೆಯನ್ನು ಹೆಚ್ಚಿಸಿದ ಹೆಗ್ಗಳಿಕೆ ಶಶಿಧರ ಅವರದ್ದು.

ಎಲ್ಲರೊಂದಿಗೆ ನಗುನಗುತಾ ಸಕ್ರಿಯವಾಗಿ ಓಡಾಡಿಕೊಂಡಿದ್ದ ಶಶಿಧರ ಅವರ ಗಮನಕ್ಕೆ ಬಂದದ್ದು ಕತಾರದಲ್ಲಿಯ ಅಸಹಾಯಕ ಸ್ಥಿತಿಯಲ್ಲಿರುವ ದುಡಿಯುವ ವರ್ಗ! ಅದರಲ್ಲೂ ಕರ್ನಾಟಕದಿಂದ ಬಹಳಷ್ಟು ಜನರಿದ್ದರು. ಅವರಿಗಾಗಿ ಏನಾದರೊಂದು ಮಾರ್ಗ ಮಾಡಬೇಕೆಂದು ನಿರ್ಧರಿಸಿ ಉತ್ತರ ಕರ್ನಾಟಕ ಬಳಗವನ್ನು ಕತಾರ್‌ನಲ್ಲಿ ಸ್ಥಾಪಿಸಿದರು. ಸಮಾನ ಮನಸ್ಕರ ಹತ್ತಾರು ಗೆಳೆಯರನ್ನು ಜೋಡಿ ಮಾಡಿಕೊಂಡು ಕಟ್ಟಿದ ಉತ್ತರ ಕರ್ನಾಟಕ ಬಳಗಕ್ಕೆ ಸನಿಹದಲ್ಲಿ ವರ್ಷದ ಹರ್ಷ!

ಈ ಬಳಗದಿಂದ ಬಹಳಷ್ಟು ಕಾರ್ಯಕ್ರಮಗಳು ವರ್ಷವಿಡಿ ಕತಾರ್‌ದಲ್ಲಿ ಜರುಗಿವೆ. ರಕ್ತದಾನ ಶಿಬಿರ, ಮೆಡಿಕಲ್‌ ಕ್ಯಾಂಪ್‌ ಮತ್ತು ಸಹಾಯ ಶಿಬಿರ ಇವುಗಳಿಂದ ಹಲವಾರು ಅಸಹಾಯಕ ದುಡಿಯುವ ವರ್ಗದ ಜನ ಪ್ರಯೋಜನ ಪಡೆದಿದ್ದಾರೆ. ಇದರೊಂದಿಗೆ ಉತ್ತರ ಕರ್ನಾಟಕದ ಹಬ್ಬ–ಹರಿದಿನಗಳಾಚರಣೆ, ಹಾಡು–ನೃತ್ಯಗಳ ಕಾರ್ಯಕ್ರಮ, ನಾಟಕ, ಚಿತ್ರಕಲೆಗಳ ಸ್ಪರ್ಧೆಗಳನ್ನು ಆಯೋಜಿಸಿದೆ. ಉತ್ತರ ಕರ್ನಾಟಕದ 14 ಜಿಲ್ಲೆಗಳ (ದಾವಣಗೆರೆಯನ್ನು ಸೇರಿಸಿ) ಸದಸ್ಯರ ಹೊಂದಿದ ಈ ಬಳಗದಲ್ಲಿ ಸಹಭೋಜನ ಕಾರ್ಯಕ್ರಮ ಬಹಳ ಯಶಸ್ವಿಯಾಯಿತು.

ಮಡದಿ ಗೀತಾರ ಸಂಪೂರ್ಣ ಸಹಕಾರವಿದೆ. ಮತ್ತು ಅವರು ಉತ್ತರ ಕರ್ನಾಟಕ ಬಳಗದ ಮಹಿಳಾ ಘಟಕದ ಜವಾಬ್ದಾರಿ ತೆಗೆದುಕೊಂಡು ಮೆಡಿಕಲ್‌ ಕ್ಯಾಂಪ್‌ ಮತ್ತು ರಕ್ತದಾನ ಶಿಬಿರದಲ್ಲಿ ವಿಶೇಷ ಕಾಳಜಿಯಿಂದ ಕಾರ್ಯನಿರ್ವಹಿಸಿದ್ದಾರೆ. ಇಂತಹ ಸಹೃದಯಿ ದಂಪತಿಗೆ ಅಮೂಲ್ಯ ಎಂಬ ಮಗಳು ಹಾಗೂ ರೋಹನ್ ಎಂಬ ಮಗನಿದ್ದಾನೆ. ಹೈಸ್ಕೂಲ್‌ನಲ್ಲಿ ಓದುತ್ತಿರುವ ಇವರು ಯಶವಂತ ಸರದೇಶಪಾಂಡೆ ನಿರ್ದೇಶನದ ‘ವೆರಿಗುಡ್‌ 10/10’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನವೆಂಬರ್‌ನಲ್ಲಿ ದೊಡ್ಡ ಪ್ರಮಾಣದ ಉತ್ತರ ಕರ್ನಾಟಕ ಉತ್ಸವವನ್ನು ಕತಾರ್‌ನಲ್ಲಿ ಹಮ್ಮಿಕೊಂಡಿರುವ ಶಶಿಧರ ಹೆಬ್ಬಾಳರಿಗೆ ಬೆಳಗಾವಿಯ ಅರವಿಂದ ಪಾಟೀಲ ಸಂಪೂರ್ಣ ಬೆಂಬಲವಿದೆ. ಉತ್ತರ ಕರ್ನಾಟಕದ ಕಲೆ ಮತ್ತು ಕಲಾವಿದರ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಬಳಗವು ಉತ್ತರೋತ್ತರ ಬೆಳೆಯಲಿ.

ಪ್ರದೀಪ ಮುಧೋಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.