
ಹುಬ್ಬಳ್ಳಿ: ವಂದೇ ಭಾರತ್ ರೈಲಿನ ವೇಗ ಹೆಚ್ಚಳ ಹಾಗೂ ಪಾದಚಾರಿಗಳ ಸುರಕ್ಷತೆಗಾಗಿ ನಗರದ ಕೆಎಂಸಿ–ಆರ್‌ಐ ಆಸ್ಪತ್ರೆ ಹಿಂಭಾಗದ ರೈಲು ಮಾರ್ಗದ ಬಳಿ ₹2.24 ಕೋಟಿ ವೆಚ್ಚದಲ್ಲಿ ಕೆಳಸೇತುವೆ ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ.
ಕೊಲ್ಹಾಪುರದ ವಿಶಾಲ ಕನ್‌ಸ್ಟ್ರಕ್ಸನ್ ಕಂಪನಿ ಗುತ್ತಿಗೆ ನೀಡಿದ್ದು, ಎರಡು ಬೃಹತ್ ಕ್ರೇನ್, ಐದು ಜೆಸಿಬಿ ಬಳಸಿ ಕಾಮಗಾರಿ ನಡೆಸುತ್ತಿದೆ. ರೈಲ್ವೆ ಹಳಿ ಕೆಳಭಾಗದ 3.2 ಮೀಟರ್ ಉದ್ದದ ಪಾದಚಾರಿ ಮಾರ್ಗಕ್ಕೆ 12 ಕಾಂಕ್ರಿಟ್ ಬಾಕ್ಸ್‌ಗಳನ್ನು ಬಳಸಲಾಗುತ್ತಿದೆ. ನಂತರ ಹಳಿಯ ಅಕ್ಕಪಕ್ಕ ಕಾಂಕ್ರಿಟ್ ತಡೆಗೋಡೆ ಹಾಗೂ 50 ರಿಂದ 60 ಮೀಟರ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ.
‘ಕಳೆದ ನವೆಂಬರ್‌ನಿಂದ ಕಾಮಗಾರಿ ಆರಂಭವಾಗಿದ್ದು, ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕಿದೆ. ಈಗಾಗಲೇ ಶೇ 50ರಷ್ಟು ಕಾಮಗಾರಿ ಮುಕ್ತಾಯವಾಗಿದೆ. ತ್ವರಿತವಾಗಿ ಪೂರ್ಣಗೊಳಿಸಲು ಆಧುನಿಕ ಯಂತ್ರಗಳನ್ನು ಬಳಸಿ, ಹಗಲು–ರಾತ್ರಿ ಕಾಮಗಾರಿ ನಡೆಸಲಾಗುತ್ತಿದೆ. 20 ಮೀಟರ್ ಉದ್ದದ ಕಬ್ಬಿಣದ ಗರ್ಡರ್‌ಗಳನ್ನು ಹಳಿಯ ಕೆಳಭಾಗ ಜೋಡಿಸಿ, ರೈಲು ಸಂಚಾರಕ್ಕೆ ಅಡೆತಡೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ಹುಬ್ಬಳ್ಳಿ ರೈಲ್ವೆ ವಿಭಾಗದ ಎಂಜಿನಿಯರ್ ಚೇತನ ಹೇಳಿದರು.
‘ಧಾರವಾಡದಿಂದ ಬೆಂಗಳೂರಿಗೆ ತೆರಳುವ ವಂದೇ ಭಾರತ್ ರೈಲು ಸದ್ಯ 90 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದೆ. ಅದರ ವೇಗ 130ಕಿ.ಮೀ.ಗೆ ಹೆಚ್ಚಳ ಮಾಡಬೇಕಿರುವುದರಿಂದ, ಪಾದಚಾರಿಗಳು ಹೆಚ್ಚಾಗಿ ರೈಲು ಹಳಿ ದಾಟುವ ಸ್ಥಳದಲ್ಲಿ ಕೆಳಸೇತುವೆ ನಿರ್ಮಾಣ ಮಾಡುತ್ತಿದ್ದೇವೆ. ಪಾದಚಾರಿಗಳಿಗೂ ಸುರಕ್ಷತೆ ದೊರೆಯುತ್ತದೆ’ ಎಂದರು.
‘ಶಾಂತಿನಗರದಲ್ಲಿ ಪ್ರತಿ ಬುಧವಾರ ಸಂತೆ ನಡೆಯುತ್ತದೆ. ವಿದ್ಯಾನಗರದವರು ಅಲ್ಲಿಗೆ ಹೋಗಬೇಕೆಂದರೆ ಬೈಲಪ್ಪನವರ ನಗರ, ದೇಶಪಾಂಡೆನಗರ, ಆದರ್ಶನಗರ ದಾಟಿ ತೆರಳಬೇಕಿತ್ತು. ಸುಮಾರು ಎರಡು ಕಿ.ಮೀ. ದೂರವನ್ನು ಈಗ ಕೇವಲ 40 ಮೀಟರ್ ಒಳಗೆ ಕ್ರಮಿಸಬಹುದು. ಪಾದಚಾರಿಗಳು ರೈಲು ಹಳಿ ದಾಟುವಾಗ ಮೃತಪಟ್ಟ ಉದಾಹರಣೆಗಳು ಇವೆ. ಜಾನುವಾರುಗಳು ಸಹ ರೈಲಿಗೆ ಸಿಲುಕಿ ಮೃತಪಟ್ಟಿವೆ. ಕೆಳಸೇತುವೆ ಮಾರ್ಗದಿಂದ ನಿಟ್ಟುಸಿರು ಬಿಡುವಂತಾಗಿದೆ’ ಎಂದು ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ ಹೇಳಿದರು.
ವಿದ್ಯಾನಗರದಿಂದ ಶಾಂತಿನಗರಕ್ಕೆ ತೆರಳಲು ಸುತ್ತುಹಾಕಿ ಹೋಗಬೇಕಿತ್ತು. ಪಾದಚಾರಿ ಕೆಳಮಾರ್ಗ ನಿರ್ಮಾಣವಾಗುತ್ತಿರುವುದರಿಂದ ಜನರಿಗೆ ಅನುಕೂಲವಾಗಿದೆ–ರೂಪಾ ಶೆಟ್ಟಿ, ಪಾಲಿಕೆ ಸದಸ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.