ADVERTISEMENT

ಜಾನಪದ ಕಲಾವಿದ ಶಹನಾಯಿ ವೆಂಕಪ್ಪಗೆ ರಾಜ್ಯೋತ್ಸವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 13:52 IST
Last Updated 31 ಅಕ್ಟೋಬರ್ 2021, 13:52 IST
ವೆಂಕಪ್ಪ ಭಜಂತ್ರಿ
ವೆಂಕಪ್ಪ ಭಜಂತ್ರಿ   

ಹುಬ್ಬಳ್ಳಿ: ತಾಲ್ಲೂಕಿನ ಶರೇವಾಡ ಗ್ರಾಮದ ಜಾನಪದ ಕಲಾವಿದ ವೆಂಕಪ್ಪ ಗೋವಿಂದಪ್ಪ ಭಜಂತ್ರಿ ಅವರು ಪ್ರಸ್ತುತ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

75 ವರ್ಷದ ವೆಂಕಪ್ಪ ಅವರು, ಕಳೆದ 55 ವರ್ಷಗಳಿಂದಶಹನಾಯಿ ಹಾಗೂ ಕರಡಿ ಮೇಳದಲ್ಲಿ ಸಲ್ಲಿಸಿರುವ ಸೇವೆ ಪರಿಗಣಿಸಿ, ಸರ್ಕಾರ ಅವರಿಗೆ ಜಾನಪದ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ.

ವೆಂಕಪ್ಪ ಅವರು ಶಹನಾಯಿ ಮತ್ತು ಕರಡಿ ಮೇಳಗಳನ್ನು ಕಟ್ಟಿಕೊಂಡು ರಾಜ್ಯದ ಉದ್ದಗಲಕ್ಕೂ ಸಂಚರಿಸಿ ನೂರಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸರ್ಕಾರದ ಪ್ರಾಯೋಜಕತ್ವದ ಕಾರ್ಯಕ್ರಮದಲ್ಲೂ ಅವರು ಪಾಲ್ಗೊಂಡು ಕಲೆ ಪ್ರದರ್ಶಿಸಿದ್ದಾರೆ. ಮೈಸೂರು ದಸರಾ ಉತ್ಸವ ಹಾಗೂ ಮಂಗಳೂರು ಕುದ್ರೋಳಿ ದಸರಾ ಉತ್ಸವದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ADVERTISEMENT

ಪೌರಾಣಿಕ ನಾಟಕ, ಸಣ್ಣಾಟ–ದೊಡ್ಡಾಟ, ಕೋಲಾಟ, ಹೆಜ್ಜೆ ಮೇಳ ಮತ್ತು ಭಜನಾ ಮೇಳದಲ್ಲಿ ಶಹನಾಯಿ ನುಡಿಸುವುದರಲ್ಲಿ ಪ್ರಸಿದ್ಧರಾಗಿದ್ದಾರೆ. ಗುರು ಶಿಷ್ಯ ಪರಂಪರೆಯಲ್ಲಿ ಶಹನಾಯಿ ತರಬೇತಿಯನ್ನು ಮೂರು ತಿಂಗಳು ನೀಡಿದ್ದಾರೆ. ಧಾರವಾಡ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿರುವ ಅವರಿಗೆ, ಹಲವಾರು ಪ್ರಶಸ್ತಿಗಳು ದೊರಕಿವೆ. ಬೆಂಗಳೂರಿನ ಕರ್ನಾಟಕ ನೃತ್ಯ ಅಕಾಡೆಮಿ ‘ನಮ್ಮ ಸಾಧಕರು’ ಪ್ರಶಸ್ತಿ ನೀಡಿ ಗೌರವಿಸಿದೆ.

‘ಆಧುನಿಕ ದಿನಗಳಲ್ಲಿ ಜಾನಪದ ಕಲೆಗೆ ಸರಿಯಾಗಿ ಗೌರವ ಸಿಗುತ್ತಿಲ್ಲ ಎನ್ನುವ ಬೇಸವಿತ್ತು. ಇದೀಗ ಸರ್ಕಾರ ಶಹನಾಯಿ ಕಲೆ ಗುರುತಿಸಿ, ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದು ಜಾನಪದ ಕ್ಷೇತ್ರಕ್ಕೆ ಸಂದ ಗೌರವ. ಜಾನಪದ ಕಲೆಯಲ್ಲಿ ಅಧ್ಯಾತ್ಮವಿದೆ, ಬದುಕಿನ ಮೌಲ್ಯವಿದೆ. ಕಲೆಯ ಉಳಿವಿಗೆ ಇಂದಿನ ಯುವ ಸಮುದಾಯ ಮುಂದಾಗಬೇಕಿದೆ’ ಎಂದು ಪ್ರಶಸ್ತಿಗೆ ಭಾಜನರಾದ ವೆಂಕಪ್ಪ ಭಜಂತ್ರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.