
ಅಳ್ನಾವರ: ತಾಲ್ಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮಾಜದವರು ಅನ್ಯಾಯಕ್ಕೊಳಗಾಗುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅವರ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಬಿ.ಸಣ್ಣೇರ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಬುಧವಾರ ನಡೆದ ಎಸ್‍ಸಿ, ಎಸ್‍ಟಿ ಸಮಾಜದ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ವಿವರಿಸಲಾಗುವುದು. ಸರ್ಕಾರದ ಸೌಲಭ್ಯಗಳನ್ನು ಪ್ರತಿಯೊಬ್ಬ ಅರ್ಹ ವ್ಯಕ್ತಿಗೆ ತಲುಪಿಸುವ ಜವಾಬ್ದಾರಿ ಇಲಾಖೆಯ ಮೇಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಮಾತನಾಡಿ, ಸಂವಿಧಾನದಲ್ಲಿ ಒದಗಿಸಿದ ಅವಕಾಶಗಳು ಮತ್ತು ಸೌಲಭ್ಯಗಳನ್ನು ಪರಿಶಿಷ್ಟ ಜನಾಂಗದವರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಅಹವಾಲುಗಳು: ಕುಂದು ಕೊರತೆ ಸಭೆಗಳನ್ನು ನಿಯಮಿತವಾಗಿ ನಡೆಸಬೇಕು. ಪಟ್ಟಣ ಪಂಚಾಯಿತಿ ಆವರಣದಲ್ಲಿ ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಜಾಗ ನೀಡಬೇಕು. ಸರ್ಕಾರದ ಸೌಲಭ್ಯ ದೊರಕಿಸಿಕೊಡಬೇಕು. ವಾಣಿಜ್ಯ ಮಳಿಗೆ ಹಂಚಿಕೆಯಲ್ಲಿ ಮೀಸಲಾತಿ ನಿಗದಿ ಮಾಡಬೇಕು. ವಿವಿಧೆಡೆ ರಸ್ತೆ ಜಾಲ ಸರಿಪಡಿಸಬೇಕು. ಬಾಬಾ ಸಾಹೇಬ ಅಂಬೇಡ್ಕರ್ ಸಭಾ ಭವನ ಕಟ್ಟಲು ಕ್ರಮ ಜರುಗಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಮಾಜದ ಅನೇಕ ಹಿರಿಯರು ಮಂಡಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಪ್ರಶಾಂತ ತುರ್ಕಾಣಿ, ಪಿಎಸ್‍ಐ ಬಸವರಾಜ ಯದ್ದಲಗುಡ್ಡ, ವಲಯ ಅರಣ್ಯಾಧಿಕಾರಿ ಶಕುಂತಲಾ, ನೀರಾವರಿ ಇಲಾಖೆಯ ರವಿಚಂದ್ರ ಪಾಟೀಲ, ಡಾ.ಸುನೀಲ ಬನ್ನಿಗೋಳ, ನಾಗರಾಜ ಗುರ್ಲಹೊಸುರ, ಕೃಷಿ ಇಲಾಖೆ ಎಡಿ ರಾಜಶೇಖರ ಅಣ್ಣುಗೌಡರ, ಸಮಾಜದ ಮುಖಂಡರಾದ ಶಾಹು ಶಿಂಧೆ, ಅರ್ಜುನ ಬೆನ್ನಳಕರ, ರಾಹುಲ್ ಶಿಂದೆ, ಅಂದಾನೆಪ್ಪ ಕಾಳೆ, ಹರೀಶ ಚಲವಾದಿ, ಗಜಾನನ ಛಲವಾದಿ , ಹನಮಂತ ಶಿಂಧೆ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.