ಅಣ್ಣಿಗೇರಿ ಪಟ್ಟಣದ ಮಾದರಿ ಕೇಂದ್ರ ಶಾಲಾ ಕೊಠಡಿಯ ಹೆಂಚುಗಳು ಒಡೆದಿವೆ
ಹುಬ್ಬಳ್ಳಿ: ‘ಬೇಸಿಗೆ ರಜೆ ಮುಗಿದು ಮೇ 29ರಿಂದ ಶಾಲೆಗಳು ಆರಂಭ ಆಗಲಿದ್ದು, ಹೊಸ ಹುರುಪಿನೊಂದಿಗೆ ಶಾಲೆಗೆ ಬರಲು ವಿದ್ಯಾರ್ಥಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಜಿಲ್ಲೆಯ ಬಹುತೇಕ ಶಾಲೆಗಳ ಕೊಠಡಿಗಳು ದುರಸ್ತಿ ಆಗಬೇಕಿದ್ದು, ಇದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ’ ಎಂಬುದು ಪೋಷಕರ ಆತಂಕವಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಮಳೆ ಆರಂಭವಾಗಿದ್ದು, ಬಿಟ್ಟೂಬಿಡದೆ ಸುರಿಯುತ್ತಿದೆ. ಇದರಿಂದ ಹಲವೆಡೆ ಶಾಲಾ ಕೊಠಡಿಗಳು ಸೋರುತ್ತಿವೆ. ಇನ್ನು ಕೆಲವೆಡೆ ಶಿಥಿಲಗೊಂಡಿರುವ ಶಾಲಾ ಕೊಠಡಿಗಳು ಕುಸಿದುಬೀಳುವ ಸ್ಥಿತಿಯಲ್ಲಿವೆ. ಜಿಲ್ಲಾಧಿಕಾರಿ ದಿವ್ಯಪ್ರಭು ಅವರ ನಿರ್ದೇಶನದ ಮೇರೆಗೆ ಇಂತಹ ಶಾಲೆಗಳನ್ನು ಶಿಕ್ಷಣ ಇಲಾಖೆ ಗುರುತಿಸಿದ್ದು, ಬೇಸಿಗೆ ರಜೆಯಲ್ಲಿ ಕೆಲವು ಶಾಲೆಗಳ ಕೊಠಡಿಗಳ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಬಹುತೇಕ ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಇನ್ನೂ ಬಾಕಿ ಇದೆ.
ಜಿಲ್ಲೆಯಲ್ಲಿ 735 ಪ್ರಾಥಮಿಕ ಶಾಲೆಗಳು ಹಾಗೂ 112 ಪ್ರೌಢಶಾಲೆಗಳು ಇವೆ. ಇವುಗಳ 2,528 ಶಾಲಾ ಕೊಠಡಿಗಳಲ್ಲಿ 1,490 ಕೊಠಡಿಗಳು ಮಾತ್ರ ಸುಸ್ಥಿಯಲ್ಲಿವೆ. ಉಳಿದಂತೆ 259 ಶಾಲಾ ಕೊಠಡಿಗಳು ಬಾಗಿಲು, ಶೌಚಾಲಯ, ಕಿಟಕಿ, ಗೋಡೆ, ವಿದ್ಯುತ್ ಸೇರಿದಂತೆ ಸಣ್ಣಪುಟ್ಟ ದುರಸ್ತಿಗೆ ಬಂದಿವೆ. 580 ಶಾಲಾ ಕೊಠಡಿಗಳು ಹೆಚ್ಚಿನ ಪ್ರಮಾಣದಲ್ಲಿ ದುರಸ್ತಿ ಆಗಬೇಕಿದೆ.
173 ಶಾಲಾ ಕೊಠಡಿಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ಇವುಗಳನ್ನು ನೆಲಸಮ ಮಾಡಿ ಮತ್ತೆ ಕಟ್ಟಬೇಕಿದೆ. ಕಲಘಟಗಿ, ಧಾರವಾಡ ನಗರ, ಧಾರವಾಡ ಗ್ರಾಮೀಣದಲ್ಲೇ ಅತೀ ಹೆಚ್ಚು ಶಾಲಾ ಕೊಠಡಿಗಳ ದುರಸ್ತಿ ಆಗಬೇಕಿದೆ. ಆದರೆ ಇದೆಲ್ಲದಕ್ಕೂ ₹15.38 ಕೋಟಿ ಅನುದಾನ ಬೇಕು ಎನ್ನುತ್ತದೆ ಶಿಕ್ಷಣ ಇಲಾಖೆ.
2024-25ರಲ್ಲಿ ವಿವೇಕ ಯೋಜನೆಯಡಿ 147 ಶಾಲೆಗಳ ಕೊಠಡಿಗಳ ದುರಸ್ತಿಗೆ ಅನುದಾನ ಮಂಜೂರಾಗಿದ್ದು, ಮೂರು ಕಾಮಗಾರಿ ಮಾತ್ರ ಪೂರ್ಣಗೊಂಡಿದ್ದು, 86 ಕೊಠಡಿಗಳ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ 58 ಕೊಠಡಿಗಳ ದುರಸ್ತಿ ಬಾಕಿ ಇದೆ.
‘ಮಳೆಗಾಲದಲ್ಲಿ ಪ್ರತಿ ವರ್ಷವೂ ಶಾಲಾ ಕೊಠಡಿಗಳು ಸೋರಿ ವಿದ್ಯಾರ್ಥಿಗಳ ಕಲಿಕೆಗೆ ಸಾಕಷ್ಟು ಸಮಸ್ಯೆ ಆಗುತ್ತದೆ. ಆಗ ಸುಸ್ಥಿತಿಯಲ್ಲಿರುವ ಕೊಠಡಿಯೊಂದರಲ್ಲೇ ಎರಡ್ಮೂರು ತರಗತಿಯ ವಿದ್ಯಾರ್ಥಿಗಳನ್ನು ಸೇರಿಸಿ, ಇಲ್ಲವೇ ಸಮುದಾಯ ಭವನ, ಮಂಟಪ, ದೇವಸ್ಥಾನಗಳಲ್ಲಿ ಕೂರಿಸಿ ಪಾಠ ಮಾಡಲಾಗುತ್ತದೆ. ಇನ್ನು ಬೇಸಿಗೆ ಸಂದರ್ಭದಲ್ಲಿ ಶಾಲಾ ಆವರಣ, ಕಟ್ಟೆ ಮೇಲೆ ಬಿಸಿಲಿನಲ್ಲೇ ವಿದ್ಯಾರ್ಥಿಗಳು ಕಲಿಯುವುದು ಕಾಯಂ ಆಗಿದೆ. ಶಿಕ್ಷಣ ಇಲಾಖೆ, ಜಿಲ್ಲಾಡಳಿತವು ಶಾಲಾರಂಭದ ಮೊದಲೇ ಕೊಠಡಿಗಳ ದುರಸ್ತಿ ಮಾಡಿಸಬೇಕು’ ಎನ್ನುತ್ತಾರೆ ವಿದ್ಯಾರ್ಥಿಗಳ ಪೋಷಕರು.
ಶಿಥಿಲಗೊಂಡ ಹಾಗೂ ಮಳೆಗೆ ಸೋರುವ ಶಾಲೆ ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳನ್ನು ಗುರುತಿಸಿ ದುರಸ್ತಿ ಕಾರ್ಯ ಕೈಗೊಂಡು ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಆಯಾ ಇಲಾಖೆಗಳಿಗೆ ಸೂಚಿಸಲಾಗಿದೆದಿವ್ಯಪ್ರಭು ಜಿಲ್ಲಾಧಿಕಾರಿ
ಶಿಥಿಲಾವಸ್ಥೆಯ ಮಳೆಗೆ ಸೋರುವ ಶಾಲೆಗಳ ಕೊಠಡಿಗಳನ್ನು ಮೊದಲ ಹಂತದಲ್ಲಿ ಅಭಿವೃದ್ಧಿಪಡಿಸಲಾಗುವುದು. ಉಳಿದ ಕೊಠಡಿಗಳನ್ನು ನಂತರ ದುರಸ್ತಿಗೊಳಿಸಲಾಗುವುದುಭುವನೇಶ ದೇವಿದಾಸ ಪಾಟೀಲ ಸಿಇಒ ಜಿಲ್ಲಾ ಪಂಚಾಯಿತಿ
ಕಳೆದ ವರ್ಷ 286 ಹಾಗೂ ಈ ವರ್ಷ 376 ಶಾಲಾ ಕೊಠಡಿಗಳನ್ನು ದುರಸ್ತಿ ಕೈಗೊಳ್ಳಲಾಗಿದೆ. ಇನ್ನೂ ಕೆಲವು ಶಾಲೆಗಳ ಕೊಠಡಿ ದುರಸ್ತಿ ಬಾಕಿ ಇದ್ದು ಅವುಗಳಲ್ಲಿ ಮಕ್ಕಳನ್ನು ಕೂರಿಸದಂತೆ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆಎಸ್.ಎಸ್. ಕೆಳದಿಮಠ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ
‘ಹಾನಿಗೊಳಗಾದ ಶಾಲೆಗಳ ಗುರುತು’
ಕಳೆದ ಮಳೆಗಾಲದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಹಾನಿಗೊಳಗಾದ ಪ್ರಮುಖ ಶಾಲೆಗಳನ್ನು ಗುರುತಿಸಲಾಗಿದೆ. ಸಮಗ್ರ ಶಿಕ್ಷಣ ಕರ್ನಾಟಕ (ಎಸ್‌ಎಸ್‌ಕೆ) ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ (ಆರ್‌ಎಂಎಸ್‌ಎ)ದ ಅನುದಾನದಡಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಗೆ ಶಾಲೆಯ ದುರಸ್ತಿ ಕಾರ್ಯ ವಹಿಸಲಾಗಿದೆ. ಕೆಲಸದ ಮೇಲ್ವಿಚಾರಣೆಗಾಗಿ ಜಿಲ್ಲಾಮಟ್ಟದಲ್ಲಿ ತಂಡ ರಚಿಸಲಾಗಿದೆ. ‘ಜಿಲ್ಲೆಯ ಪ್ರತಿ ಬ್ಲಾಕ್‌ನಿಂದ ಸುಮಾರು 10ರಿಂದ 12 ಶಾಲೆಗಳನ್ನು ದುರಸ್ತಿ ಕಾರ್ಯಕ್ಕಾಗಿ ಗುರುತಿಸಿ ಕಾಮಗಾರಿ ಪ್ರಾರಂಭಿಸಲಾಗಿದೆ. ಶಾಲೆ ಆರಂಭಕ್ಕೂ ಮುನ್ನ ಪೂರ್ಣಗೊಳಿಸಲು ಸೂಚಿಸಲಾಗಿದೆ’ ಎಂದು ಡಿಡಿಪಿಐ ಕಚೇರಿಯ ಉಪ ಯೋಜನಾ ಸಂಯೋಜಕ ಎಸ್.ಎಂ. ಹುಡೇದಮನಿ ತಿಳಿಸಿದರು. ‘ತರಗತಿ ಕೊಠಡಿಗಳ ದುರಸ್ತಿ ಪುನರ್‌ನಿರ್ಮಾಣಕ್ಕೆ ಅನುದಾನ ನೀಡುವಂತೆ ಶಿಕ್ಷಣ ಇಲಾಖೆಯು ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದೆ. ಸರ್ಕಾರದಿಂದ ಅನುದಾನಕ್ಕೆ ಅನುಮೋದನೆ ದೊರೆತರೆ ಶೀಘ್ರದಲ್ಲೇ ಶಾಲಾ ಕಟ್ಟಡಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು’ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ತುರ್ತು ದುರಸ್ತಿಗೆ ಕಾದಿರುವ ಶಾಲೆಗಳೆಷ್ಟು?
ಜಿಲ್ಲೆಯಲ್ಲಿ ಧಾರವಾಡ ಗ್ರಾಮೀಣ ಮತ್ತು ಅಳ್ನಾವರ ಸೇರಿ ಒಟ್ಟು 62 ಶಾಲೆಗಳು ದುರಸ್ತಿಗೆ ಕಾದಿವೆ. ಅದರಲ್ಲಿ 10 ಶಾಲೆಗಳ ತುರ್ತು ರಿಪೇರಿ ಅಗತ್ಯವಾಗಿದೆ. ಕುಂದಗೋಳದಲ್ಲಿ 120 ಶಾಲೆಗಳಲ್ಲಿ ಸಣ್ಣಪುಟ್ಟ ರಿಪೇರಿಗಳಿವೆ. ಅದರಲ್ಲಿ 39 ಶಾಲೆಗಳಲ್ಲಿ ತುರ್ತು ದುರಸ್ತಿ ಅಗತ್ಯತೆ ಇದೆ. ಕಲಘಟಗಿ– 12 ಶಾಲೆಗಳು ನವಲಗುಂದ– 6 ಶಾಲೆಗಳು ಧಾರವಾಡ ನಗರ– 4 ಶಾಲೆಗಳು ಹುಬ್ಬಳ್ಳಿ ಗ್ರಾಮೀಣ– 5 ಶಾಲೆಗಳು ಹುಬ್ಬಳ್ಳಿ ನಗರದಲ್ಲಿ 8 ಶಾಲೆಗಳು ತುರ್ತು ರಿಪೇರಿ ಆಗಬೇಕಿದೆ. ಹುಬ್ಬಳ್ಳಿ ನಗರದಲ್ಲಿ ಎಂಟು ಶಾಲೆ ಕೊಠಡಿಗಳ ದುರಸ್ತಿ ಆಗಬೇಕಿದೆ. ಬಿಡನಾಳ ನಾಗಶೆಟ್ಟಿಕೊಪ್ಪ ಕಮರಿಪೇಟೆ ಪೆಂಡಾರ ಗಲ್ಲಿ– 2 ಸದಾಶಿವ ನಗರ ತಬೀಬಲ್ಯಾಂಡ್– 2 ಶಾಲೆಗಳಲ್ಲಿ ಚಾವಣಿ ಗೋಡೆಗಳಿಗೆ ಹಾನಿಯಾಗಿವೆ. ಗ್ರಾಮೀಣ ಭಾಗದ ನೂಲ್ವಿ ಅಂಚಟಗೇರಿ ಸುತ್ತಗಟ್ಟಿ ತಾರಿಹಾಳ ಕುಸುಗಲ್ ಗ್ರಾಮಗಳ ಸರ್ಕಾರಿ ಶಾಲೆಗಳ ಕೊಠಡಿಗಳು ದುರಸ್ತಿಗೆ ಕಾದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.