ADVERTISEMENT

ಹುಬ್ಬಳ್ಳಿ: ಶಾಲೆಗೆ ತ್ಯಾಜ್ಯರಾಶಿಯ ದಿಗ್ಬಂಧನ! ಕ್ರಮಕೈಗೊಳ್ಳದ ಅಧಿಕಾರಿಗಳು

ನಿರ್ಮಲ ಪರಿಸರದಿಂದ ವಂಚಿತರಾದ ವಿದ್ಯಾರ್ಥಿಗಳು

ನಾಗರಾಜ ಚಿನಗುಂಡಿ
Published 22 ನವೆಂಬರ್ 2025, 4:55 IST
Last Updated 22 ನವೆಂಬರ್ 2025, 4:55 IST
<div class="paragraphs"><p>ಹಳೇ ಹುಬ್ಬಳ್ಳಿಯ ನೇಕಾರ ನಗರದ ಮುಖ್ಯರಸ್ತೆ ಪಕ್ಕದ ಸದಾಶಿವ ನಗರದ ಸರ್ಕಾರಿ ಉರ್ದು ಪ್ರೌಢಶಾಲೆ ಆವರಣ ಗೋಡೆ ಬಳಿ ತ್ಯಾಜ್ಯ ಸುರಿದಿರುವುದು</p></div>

ಹಳೇ ಹುಬ್ಬಳ್ಳಿಯ ನೇಕಾರ ನಗರದ ಮುಖ್ಯರಸ್ತೆ ಪಕ್ಕದ ಸದಾಶಿವ ನಗರದ ಸರ್ಕಾರಿ ಉರ್ದು ಪ್ರೌಢಶಾಲೆ ಆವರಣ ಗೋಡೆ ಬಳಿ ತ್ಯಾಜ್ಯ ಸುರಿದಿರುವುದು

   

ಹುಬ್ಬಳ್ಳಿ: ಇಲ್ಲಿನ ಹಳೇ ಹುಬ್ಬಳ್ಳಿಯಿಂದ ನೇಕಾರ ನಗರ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸದಾಶಿವ ನಗರದ ಸರ್ಕಾರಿ ಉರ್ದು ಪ್ರೌಢಶಾಲೆ ಹಾಗೂ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಳಿ ತ್ಯಾಜ್ಯ ರಾಶಿ ಸಂಗ್ರಹವಾಗಿದೆ. 

ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರುವ ಮಾರ್ಗದಲ್ಲಿ ತ್ಯಾಜ್ಯ ಹರಡಿಕೊಳ್ಳುತ್ತಿದೆ. ಕಸ ತುಳಿದುಕೊಂಡೆ ಮಕ್ಕಳು ಶಾಲೆಗೆ ತಲುಪುವ ಅನಿವಾರ್ಯ ಪರಿಸ್ಥಿತಿ ಇದೆ. ಶಾಲೆಯ ಸುತ್ತಮುತ್ತಲೂ ನಿರ್ಮಲವಾಗಿರಬೇಕಿದ್ದ ಪರಿಸರವು ಕಲ್ಮಶದಿಂದ ಕೂಡಿದೆ. ಮನೆಮನೆಯಿಂದ ಪೌರಕಾರ್ಮಿಕರು ಕಸ ಸಂಗ್ರಹ ಮಾಡುತ್ತಿದ್ದಾರೆ. ಆದರೆ, ಜನರು ಶಾಲೆಯ ಬಳಿ ಕಸ ಎಸೆಯುವ ಸಮಸ್ಯೆ ಎಂದಿನಂತೆ ಮುಂದುವರಿದಿದೆ.

ADVERTISEMENT

ರಾಶಿಯಾಗಿ ಬೀಳುವ ಕಸ ಎತ್ತಿಕೊಂಡು ವಿಲೇವಾರಿಗೊಳಿಸುವ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ. ಅಲ್ಲದೆ, ಜನರು ಕಸ ಎಸೆಯದಂತೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುತ್ತಿಲ್ಲ. ಈ ತ್ಯಾಜ್ಯ ರಾಶಿಯಲ್ಲಿ ಇದ್ದ ಅಳಿದುಳಿದ ಆಹಾರ ತಿನ್ನಲು ಬೀದಿನಾಯಿಗಳು ಮುಗಿಬೀಳುತ್ತವೆ. ಕಸವನ್ನು ರಸ್ತೆಯಲ್ಲೆಲ್ಲ ಹರಡುತ್ತಿವೆ. ಕಸ ವಿಲೇವಾರಿ ಸಮಸ್ಯೆ ಜತೆಗೆ ಬೀದಿನಾಯಿ ಹಾವಳಿಯಿಂದಲೂ ಶಾಲಾ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ.

ಪಕ್ಕದಲ್ಲೇ ಮೌಲಾನಾ ಆಜಾದ್‌ ಪಬ್ಲಿಕ್‌ ಶಾಲೆಯೂ ಇದೆ. ನೇಕಾರ ನಗರ ಮುಖ್ಯರಸ್ತೆಯಲ್ಲಿರುವ ವ್ಯಾಪಾರಿಗಳು ಕೂಡಾ ಕಸದ ರಾಶಿಯಿಂದಾಗಿ ತಾಪತ್ರಯ ಅನುಭವಿಸುತ್ತಿದ್ದಾರೆ.

‘ಪ್ರತಿ ಎರಡು ದಿನಕ್ಕೊಮ್ಮೆ ಪಾಲಿಕೆಯ ಪೌರಕಾರ್ಮಿಕರು ಬಿದ್ದಿರುವ ತ್ಯಾಜ್ಯವನ್ನು ಎತ್ತಿಕೊಂಡು ಹೋಗುತ್ತಾರೆ. ಹಬ್ಬದ ನಂತರದಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗಿಲ್ಲ. ಜನರು ಕಸ ಎಸೆಯುವುದನ್ನು ತಡೆಗಟ್ಟುವುದಕ್ಕಾಗಿ ಈ ಕೂಡಲೇ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ವ್ಯವಸ್ಥೆ ಆಗಬೇಕು’ ಎಂದು ಹೆಸರು ಹೇಳಲಿಚ್ಚಿಸದ ವ್ಯಾಪಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಡಾವಣೆ ಮಾರ್ಗಗಳು ಕಿರಿದಾಗಿ ಇರುವುದರಿಂದ ತಳ್ಳುವ ಗಾಡಿಯಲ್ಲಿ ಮನೆಮನೆಯಿಂದ ತ್ಯಾಜ್ಯ ಸಂಗ್ರಹಿಸುವ ವ್ಯವಸ್ಥೆ ಸದಾಶಿವ ನಗರ ಸೇರಿದಂತೆ ಬಾಣತಿ ಕಟ್ಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಇದೆ. ತಳ್ಳುವ ಗಾಡಿಯಲ್ಲಿ ಬೇಗನೆ ತ್ಯಾಜ್ಯ ಭರ್ತಿಯಾಗುತ್ತದೆ. ಅದನ್ನು ಖಾಲಿ ಮಾಡಿ ಬರುವುದಕ್ಕೆ ವಿಳಂಬವಾಗುತ್ತದೆ. ಇಂಥ ಸನ್ನಿವೇಶದಲ್ಲಿ ಕಸ ಕೊಡುವುದಕ್ಕೆ ಸಾಧ್ಯವಾಗದ ಜನರು ಸರ್ಕಾರಿ ಶಾಲೆ ಬಳಿ ತಂದು ಹಾಕುತ್ತಿದ್ದಾರೆ. ಅಲ್ಲದೆ, ರಾತ್ರಿ ವೇಳೆಯಲ್ಲಿ ತ್ಯಾಜ್ಯ ತಂದು ಬಿಸಾಡುವುದು ಹೆಚ್ಚಾಗಿದೆ.

ಅಕ್ಕಪಕ್ಕದಲ್ಲಿರುವ ಮೂರು ಸರ್ಕಾರಿ ಶಾಲೆಗೆ ಎತ್ತರವಾದ ಆವರಣ ಗೋಡೆ ನಿರ್ಮಿಸಲಾಗಿದೆ. ಆದರೆ ಶಾಲಾ ಮಕ್ಕಳು ಕಸದ ತಿಪ್ಪೆ ಬೀಳುವ ಕಡೆಯಲ್ಲೇ ಓಡಾಡುತ್ತಾರೆ. ಶಾಲಾ ಮಕ್ಕಳ ಹಿತದೃಷ್ಟಿಯಿಂದ ತ್ಯಾಜ್ಯ ಎಸೆಯುವುದಕ್ಕೆ ಕಡ್ಡಾಯ ಕಡಿವಾಣ ಹಾಕಬೇಕಿದೆ. ಈ ಮೂಲಕ ಶಾಲಾ ಮಕ್ಕಳಿಗೆ ನಿರ್ಮಲವಾದ ಪರಿಸರ ದೊರಕಿಸಬೇಕಿದೆ.

ರಾತ್ರಿ ವೇಳೆ ಕಸ ತಂದು ಹಾಕುವ ಪ್ರವೃತ್ತಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು.
-ಬಾಲಾಜಿ, ನೇಕಾರ ನಗರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.