ADVERTISEMENT

ಉಪ್ಪಿನಬೆಟಗೇರಿ| ಹನುಮನಕೊಪ್ಪ ಶಾಲೆ: ಸಾಮೂಹಿಕ ರಾಜೀನಾಮೆ ಸಲ್ಲಿಸಿದ ಎಸ್‌ಡಿಎಂಸಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 6:24 IST
Last Updated 23 ನವೆಂಬರ್ 2025, 6:24 IST
ಚಿತ್ರಾವಳಿ: ಉಪ್ಪಿನಬೆಟಗೇರಿ ಸಮೀಪದ ಹನುಮನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ,ಎಮ್.ಸಿ ಸಮಿತಿಯ ಸಾಮೂಹಿಕ ರಾಜೀನಾಮೆ ಅಂಗೀಕರಿಸಬೇಕು ಎಂದು ಆಗ್ರಹಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಲಾ ಶಿಕ್ಷಕರ ಮೂಲಕ ಶುಕ್ರವಾರ ಮನವಿ ಪತ್ರ ಸಲ್ಲಿಸಿತು.
ಚಿತ್ರಾವಳಿ: ಉಪ್ಪಿನಬೆಟಗೇರಿ ಸಮೀಪದ ಹನುಮನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ,ಎಮ್.ಸಿ ಸಮಿತಿಯ ಸಾಮೂಹಿಕ ರಾಜೀನಾಮೆ ಅಂಗೀಕರಿಸಬೇಕು ಎಂದು ಆಗ್ರಹಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಲಾ ಶಿಕ್ಷಕರ ಮೂಲಕ ಶುಕ್ರವಾರ ಮನವಿ ಪತ್ರ ಸಲ್ಲಿಸಿತು.   

ಉಪ್ಪಿನಬೆಟಗೇರಿ: ಹನುಮನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಸಮತಿಯ ಸಭೆಗಳು ನಿಯಮಿತವಾಗಿ ಮತ್ತು ನಡಾವಳಿಗಳ ಪ್ರಕಾರ ನಡೆಯುತ್ತಿಲ್ಲ ಎಂದು ಆರೋಪಿಸಿದ ಎಸ್‌ಡಿಎಂಸಿ ಸಮಿತಿ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಅಂಗೀಕರಿಸಬೇಕು ಎಂದು ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.

ಶಾಲಾ ಸುಧಾರಣೆಗೆ ಅಗತ್ಯವಿರುವ ಎಲ್ಲ ಕಾರ್ಯಗಳನ್ನು ಸಮಿತಿ ಕಾಳಜಿಪೂರ್ವಕವಾಗಿ ಮಾಡುತ್ತಿದ್ದು. ಮುಖ್ಯ ಶಿಕ್ಷಕರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಶಾಲಾ ಸುಧಾರಣೆಗೆ ಚರ್ಚಿಸಿದ ವಿಷಯಗಳು ಹಾಗೂ ಕೈಗೊಂಡ ತಿರ್ಮಾನಗಳು ದಾಖಲಾಗುತ್ತಿಲ್ಲ. ಶಾಲಾ ಅಭಿವೃದ್ಧಿ ಯೋಜನೆ ತಯಾರಿಸಲಾಗಿಲ್ಲ ಎಂದು ದೂರಿದ್ದಾರೆ.

ಶಾಲೆಯ ಶಿಕ್ಷಕ ಶಿವಾನಂದ ಸವಸುದ್ದಿ ಅವರನ್ನು ವಾರದಲ್ಲಿ ಮೂರು ದಿನ ಸಮೀಪದ ಲೋಕೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ತಾತ್ಕಾಲಿಕವಾಗಿ ಕಳಿಸಲು ಅನುಮತಿ ನೀಡಿದೆ. ಇದಕ್ಕೆ ಒಪ್ಪಿಗೆ ಸೂಚಿಸಿರುವ ಸಮಿತಿ, ಲೋಕೂರ ಪ್ರೌಢಶಾಲೆಗೆ ಶಿಕ್ಷಕರನ್ನು ನೇಮಿಸಿದ ಬಳಿಕ ಮೂಲ ಶಾಲೆಯಲ್ಲಿ ಮುಂದುವರಿಸಬೇಕು ಎಂದು ತಿಳಿಸಿತ್ತು. ಈಗ ಅಲ್ಲಿ ಶಿಕ್ಷಕರನ್ನು ಭರ್ತಿ ಮಾಡಲಾಗಿದ್ದು, ಹನುಮನಕೊಪ್ಪ ಶಾಲೆಯ ಶಿಕ್ಷಕರು ಪ್ರಸ್ತುತ ವಾರಪೂರ್ತಿ ಅಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ನೀಡಿದ ಭರವಸೆ ಹುಸಿಯಾಗಿದೆ. ಹೀಗಾದರೆ ಎಸ್‌ಡಿಎಂಸಿ ಯಾಕೆ ಮಾಡಿದ್ದಿರಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

’ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಗುಣಮಟ್ಟದ ಶಿಕ್ಷಣ ಅಗತ್ಯವಿದೆ. ಮುಖ್ಯ ಶಿಕ್ಷಕರು ನಿರ್ಲಕ್ಷ್ಯವಹಿಸದೇ ಕೂಡಲೇ ಮೊದಲಿದ್ದ ಶಿಕ್ಷಕರನ್ನು ಹನುಮನಕೊಪ್ಪ ಶಾಲೆಗೆ ಕಾಯಂಗೊಳಿಸಲು ಮೇಲಾಧಿಕಾರಿಗಳಿಗೆ ಮನವಿ ಮಾಡಬೇಕು ಎಂದು ಹನುಮನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲುಸ್ತುವಾರಿ ಹಾಗೂ ಅಭಿವೃದ್ದಿ ಸಮಿತಿ ಆಗ್ರಹಿಸಿದೆ.

ಶಿಕ್ಷಣಾಧಿಕಾರಿ ಹಾಗೂ ಮೇಲಾಧಿಕಾರಿಗಳ ಆದೇಶದ ಮೇರೆಗೆ ಲೋಕೂರ ಪ್ರೌಢಶಾಲೆಯಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ನನ್ನದೇನೂ ಪಾತ್ರವಿಲ್ಲ. ಎಲ್ಲರೂ ಒಟ್ಟಾಗಿ ಶಾಲಾ ಅಭಿವೃದ್ಧಿಗೆ ಕೈಜೋಡಿಸಬೇಕು
ಮುಖ್ಯ ಶಿಕ್ಷಕಿ ಎಸ್.ಎಂ.ಬೊಂಗಾಳೆ
ಎಸ್‌ಎಲ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಉತ್ತಮ ಫಲಿತಾಂಶ ಗಳಿಸಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಎರಡು ತಿಂಗಳ ಮಟ್ಟಿಗೆ ಲೋಕೂರ ಪ್ರೌಢಶಾಲೆಯಲ್ಲಿ ಕಾರ್ಯ ನಿರ್ವಹಿಸಲು ಮೇಲಾಧಿಕಾರಿಗಳು ಆದೇಶಿಸಿದ್ದಾರೆ.
ಶಿವಾನಂದ ಸವಸುದ್ದಿ ಪ್ರಸ್ತುತ ಲೋಕೂರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.