ADVERTISEMENT

ಹೆಚ್ಚುವರಿ ವೈದ್ಯಕೀಯ ಸೀಟು ಮಂಜೂರಾತಿಗೆ ಪ್ರಸ್ತಾವ: ಶರಣಪ್ರಕಾಶ ಪಾಟೀಲ

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 14:40 IST
Last Updated 22 ಏಪ್ರಿಲ್ 2025, 14:40 IST
ಶರಣಪ್ರಕಾಶ ಪಾಟೀಲ
ಶರಣಪ್ರಕಾಶ ಪಾಟೀಲ   

ಹುಬ್ಬಳ್ಳಿ: ‘ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪದವಿಪೂರ್ವ (ಯುಜಿ) ಕೋರ್ಸ್‌ಗಳಿಗೆ 800 ಮತ್ತು ಸ್ನಾತಕೋತ್ತರ ಪದವಿ (ಪಿಜಿ) ವೈದ್ಯಕೀಯ ಕೋರ್ಸ್‌ಗಳಿಗೆ 700 ಹೆಚ್ಚುವರಿ ಸೀಟು ನೀಡುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್‌ಎಂಸಿ) ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

‘ಹೆಚ್ಚುವರಿ ಸೀಟು ಮಂಜೂರಾದರೆ, ಪ್ರತಿ ವೈದ್ಯಕೀಯ ಕಾಲೇಜಿಗೆ 50 ಸೀಟುಗಳು ಹೆಚ್ಚುವರಿಯಾಗಿ ಸಿಗಲಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು (ಏಮ್ಸ್) ರಾಯಚೂರಿಗೆ ಮಂಜೂರು ಮಾಡುವಂತೆ ಅಲ್ಲಿನ ಜನ ಹಲವು ತಿಂಗಳುಗಳಿಂದ ಹೋರಾಟ ನಡೆಸಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಸಹ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದೆ.  ಆದರೂ ಸ್ಪಂದಿಸುತ್ತಿಲ್ಲ’ ಎಂದರು.

ADVERTISEMENT

‘ಯಾವುದೇ ರಾಜ್ಯವು ಅಭಿವೃದ್ಧಿಯಾಗಬೇಕಾದರೆ, ಆರೋಗ್ಯ ಸೌಲಭ್ಯಗಳು ಎಲ್ಲ ಜಿಲ್ಲೆಗಳಿಗೂ ಸಮಾನವಾಗಿ ಹಂಚಿಕೆ ಆಗಬೇಕು. ಏಮ್ಸ್‌ ಅನ್ನು ರಾಯಚೂರಿಗೆ ಮಂಜೂರು ಮಾಡಬೇಕು ಎಂಬುದು ರಾಜ್ಯ ಸರ್ಕಾರದ ಸ್ಪಷ್ಟ ನಿಲುವು. ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್, ಕ್ಯಾನ್ಸರ್ ಆಸ್ಪತ್ರೆ ಇರಬೇಕು ಎಂಬುದು  ಸರ್ಕಾರದ ಸಂಕಲ್ಪ’ ಎಂದರು.

‘ಮೂರು ತಿಂಗಳಲ್ಲಿ ತಾಲ್ಲೂಕು ಜಿಲ್ಲಾ ಪಂಚಾಯಿತಿ ಚುನಾವಣೆ’

ಹುಬ್ಬಳ್ಳಿ: ‘ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗೆ ಮೂರು ತಿಂಗಳಲ್ಲಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಗ್ರಾಮ ಪಂಚಾಯಿತಿ ಹಾಗೂ ಪುರಸಭೆಗಳಿಗೆ 8 ತಿಂಗಳಲ್ಲಿ ಚುನಾವಣೆ ನಡೆಸುತ್ತೇವೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು. ಇಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಹಿಂದಿನ ಬಿಜೆಪಿ ಸರ್ಕಾರವು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿಲ್ಲ. ಕ್ಷೇತ್ರ ಮರುವಿಂಗಡಣೆ ಹಾಗೂ ಮೀಸಲಾತಿ ವಿಷಯದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿತ್ತು. ನ್ಯಾಯಾಲಯದ ಮೆಟ್ಟಿಲು ಏರಿತ್ತು. ಇವೆಲ್ಲ ಸಮಸ್ಯೆಗಳನ್ನು ನಮ್ಮ ಸರ್ಕಾರ ಬಗೆಹರಿಸಿದ್ದು ಚುನಾವಣೆ ನಡೆಸಲು ಅಗತ್ಯ ಸಿದ್ಧತೆ ನಡೆದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.