ADVERTISEMENT

ಆರು ಸಾವಿರ ಹಾಸಿಗೆ ಸಜ್ಜುಗೊಳಿಸಲು ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 11:48 IST
Last Updated 29 ಜೂನ್ 2020, 11:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಧಾರವಾಡ: ‘ಜಿಲ್ಲೆಯಲ್ಲಿ ಕೋವಿಡ್–19 ಸೋಂಕು ನಿರೀಕ್ಷೆಗೂ ಮೀರಿ ಉಲ್ಬಣಿಸಿದರೆ ಮುಂಜಾಗ್ರತಾ ಕ್ರಮವಾಗಿ ಆರು ಸಾವಿರ ಹಾಸಿಗೆ ಸಜ್ಜುಗೊಳಿಸಲು ಸಿದ್ಧತೆ ಆರಂಭಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

‘ಈ ಕುರಿಂತೆ ಈಗಾಗಲೇ ಖಾಸಗಿ ಆಸ್ಪತ್ರೆಗಳು ಹಾಗೂ ಹೋಟೆಲುಗಳನ್ನೂ ಒಳಗೊಡಂತೆ 95 ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಹುಬ್ಬಳ್ಳಿಯ ಕಿಮ್ಸ್‌ನಲ್ಲಿರುವ 200 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತುಂಬಿದರೆ ಮುಂದೆ ಇಂಥ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುವುದು. ಅವಳಿ ನಗರದ 17 ಆಸ್ಪತ್ರೆಗಳಿಗೆ ಯಾವುದೇ ಕ್ಷಣಕ್ಕೂ ಸಜ್ಜಾಗಿರುವಂತೆ ಸೂಚಿಸಲಾಗಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲೆಯಲ್ಲಿ ಸಮುದಾಯ ಹರಡುವಿಕೆ ಆಗಿಲ್ಲ. ನವಲಗುಂದ ತಾಲ್ಲೂಕಿನ ಮೊರಬದಲ್ಲಿ 52 ಪ್ರಕರಣಗಳು ದಾಖಲಾಗಿದ್ದರೂ ಅವು ಕುಟುಂಬದವರಿಗೆ ತಗುಲಿದ ಸೋಂಕುಗಳಾಗಿವೆ. ಗುಣಮುಖರಾಗುತ್ತಿರುವ ಸಂಖ್ಯೆ ಹೆಚ್ಚು ಇರುವುದರಿಂದ ಭಯಪಡುವ ಅಗತ್ಯವಿಲ್ಲ. ಜನರು ಸುರಕ್ಷತಾ ಕ್ರಮಗಳನ್ನು ಅನುಸರಿಸದಿದ್ದರೆ, ಸೋಂಕು ಮತ್ತಷ್ಟು ತೀವ್ರಗತಿಯಲ್ಲಿ ವ್ಯಾಪಿಸಲಿದೆ’ ಎಂದರು.

ADVERTISEMENT

‘ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಿತ್ತಿಪತ್ರಗಳನ್ನು ಮನೆಗಳಿಗೆ ತಲುಪಿಸುವುದು, ಬೃಹತ್ ಹೋರ್ಡಿಂಗ್‌ಗಳನ್ನು ಹಾಕುವುದು, ಬೀದಿ ನಾಟಕಗಳ ಮೂಲಕ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಜತೆಗೆ ಮುಖಗವಸು ತೊಡದಿರುವುದು ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸದವರ ವಿರುದ್ಧ ಕಾನೂನು ರೀತಿಯಲ್ಲೂ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ ಸಾರ್ವಜನಿಕರು ಇದಕ್ಕೆ ಅವಕಾಶ ನೀಡದೆ, ವೈಯಕ್ತಿಕ ಸುರಕ್ಷತೆಗೆ ಆದ್ಯತೆ ನೀಡಬೇಕು’ ಎಂದು ಶೆಟ್ಟರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.