ADVERTISEMENT

ಹೊಸೂರು ನಿಲ್ದಾಣಕ್ಕೆ ಬಸ್‌ ಸ್ಥಳಾಂತರ ವಿಳಂಬ

ವಾಣಿ ವಿಲಾಸ ರಸ್ತೆ ಅಭಿವೃದ್ಧಿಪಡಿಸಿದ ನಂತರವೇ ಮುಂದಿನ ಕ್ರಮ

ಎಂ.ನವೀನ್ ಕುಮಾರ್
Published 15 ಡಿಸೆಂಬರ್ 2018, 20:00 IST
Last Updated 15 ಡಿಸೆಂಬರ್ 2018, 20:00 IST
ಹುಬ್ಬಳ್ಳಿಯ ಹೊಸೂರಿನಲ್ಲಿರುವ ಹೊಸ ಬಸ್ ನಿಲ್ದಾಣ
ಹುಬ್ಬಳ್ಳಿಯ ಹೊಸೂರಿನಲ್ಲಿರುವ ಹೊಸ ಬಸ್ ನಿಲ್ದಾಣ   

ಹುಬ್ಬಳ್ಳಿ: ಹೊಸೂರಿನ ಹೊಸ ನಿಲ್ದಾಣಕ್ಕೆ ಬೆಂಗಳೂರು ಮಾರ್ಗದ ಬಸ್‌ಗಳ ಸ್ಥಳಾಂತರ ಇನ್ನಷ್ಟು ತಡವಾಗಲಿದೆ. ಸುಮಾರು 700 ಬಸ್‌ಗಳನ್ನು ಹಳೇ ಬಸ್ ನಿಲ್ದಾಣದಿಂದ ಸ್ಥಳಾಂತರ ಮಾಡಲು ಬಿಆರ್‌ಟಿಎಸ್ ನಿರ್ಧರಿಸಿತ್ತು. ಆದರೆ, ಅದಕ್ಕಾಗಿ ಸಿದ್ಧತೆ ಪೂರ್ಣಗೊಳಿಸಲು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಒಮ್ಮೆಲೆ ಬಸ್‌ಗಳನ್ನು ಹೊಸೂರು ನಿಲ್ದಾಣಕ್ಕೆ ಸ್ಥಳಾಂತರಿಸಿದರೆ, ಭಾರಿ ದಟ್ಟಣೆ ಉಂಟಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತದೆ. ಆದ್ದರಿಂದ ವಾಣಿ ವಿಲಾಸ ವೃತ್ತದಿಂದ ಹೊಸೂರು ನಿಲ್ದಾಣದ ವರೆಗಿನ ರಸ್ತೆಯನ್ನು ವಿಸ್ತರಣೆ ಮಾಡಿದ ನಂತರವೇ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಆ ಮಾರ್ಗದಲ್ಲಿ ಕೆಲವರು ರಸ್ತೆ ಅತಿಕ್ರಮಿಸಿಕೊಂಡಿದ್ದು, ಅವುಗಳನ್ನು ತೆರವುಗೊಳಿಸಬೇಕಾಗುತ್ತದೆ.

‘ವಾಣಿ ವಿಲಾಸ ವೃತ್ತದಿಂದ ಕೋರ್ಟ್‌ ಮುಂಭಾಗದ ವರೆಗೆ ರಸ್ತೆ ವಿಸ್ತರಣೆ ಮಾಡುವ ಮೂಲಕ ಮುಂದೆ ಎದುರಾಗಬಹುದಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮ ಉದ್ದೇಶವಾಗಿದೆ. ಹುಬ್ಬಳ್ಳಿ– ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಜಾಗವೂ ಈ ಮಾರ್ಗದಲ್ಲಿದೆ. ಆದ್ದರಿಂದ ವಿಸ್ತರಣೆಗೆ ಸಮಸ್ಯೆಯಾಗದು’ ಎನ್ನುತ್ತಾರೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ.

ADVERTISEMENT

‘ಬೆಂಗಳೂರು, ದಾವಣಗೆರೆ, ಇಳಕಲ್, ಚಿಕ್ಕೋಡಿ, ಹಾವೇರಿ ಬಳ್ಳಾರಿ ಮಾರ್ಗದಲ್ಲಿ ಸುಮಾರು 700 ಬಸ್‌ಗಳು ಸಂಚರಿಸುತ್ತಿದ್ದು, ಅವುಗಳನ್ನು ಹೊಸೂರು ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗುವುದು. ಬಿಆರ್‌ಟಿಎಸ್‌ ಈ ಬಗ್ಗೆ ನಿರ್ಧಾರ ಕೈಗೊಂಡು ದಿನಾಂಕ ನಿಗದಿ ಮಾಡಬೇಕು’ ಎನ್ನುತ್ತಾರೆ ವಾಯವ್ಯ ಸಾರಿಗೆ ಮುಖ್ಯ ಸಂಚಾರ ವ್ಯವಸ್ಥಾಪಕ ಶಾಂತಪ್ಪ ಗೊಟಗೊಡಕಿ.

ಬೆಂಗಳೂರು ಮಾರ್ಗದ ಬಸ್‌ಗಳು ಅಧಿಕ ಆದಾಯದ ಮೂಲಗಳಾಗಿವೆ. ಹಳೆಯ ಬಸ್ ನಿಲ್ದಾಣದ ಸಮೀಪವೇ ಇರುವ ಬಸವವನದ ಮುಂಭಾಗ ಖಾಸಗಿ ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿವೆ. ದಿಢೀರ್ ಎಂದು ವಾಯವ್ಯ ಸಾರಿಗೆ ಬಸ್‌ಗಳು ಹೊಸೂರಿಗೆ ಸ್ಥಳಾಂತರವಾದರೆ ಪ್ರಯಾಣಿಕರು ಖಾಸಗಿ ಬಸ್‌ಗಳತ್ತ ವಾಲುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ ವಾಯವ್ಯ ಸಾರಿಗೆ ಆದಾಯದ ಮೇಲೆ ಹೊಡೆತ ಬೀಳಲಿದೆ. ಆದ್ದರಿಂದ ಆ ಪ್ರದೇಶವನ್ನು ನಿಲುಗಡೆ ರಹಿತ ಪ್ರದೇಶ ಎಂದು ಘೋಷಣೆ ಮಾಡಬೇಕಾಗುತ್ತದೆ. ಇದಕ್ಕೂ ಸಹ ಸಮಯ ಬೇಕಾಗುತ್ತದೆ.

ಹೊರ ಜಿಲ್ಲೆ ಹಾಗೂ ಅವಳಿ ನಗರಗಳಲ್ಲಿ ಸಂಚರಿಸುತ್ತಿದ್ದ 1,800 ಬಸ್‌ಗಳ ಪೈಕಿ ಈಗಾಗಲೇ ಸುಮಾರು 500 ಬಸ್‌ಗಳನ್ನು ಗೋಕುಲ ರಸ್ತೆ ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.