
ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು.
–ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ: ‘ಮುಂಬರುವ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಬಸವರಾಜ ಹೊರಟ್ಟಿ ಅವರು ನಮ್ಮ ಪಕ್ಷವಲ್ಲದೆ ಬೇರೆ ಪಕ್ಷದಿಂದ ಸ್ಪರ್ಧಿಸಿದರೆ, ಅವರ ವಿರುದ್ಧ ಪ್ರಚಾರ ನಡೆಸುವೆ. ವೈಯಕ್ತಿಕವಾಗಿ ಅವರ ಗೆಲುವಿಗೆ ಹಾರೈಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
‘ಪಶ್ಚಿಮ ಶಿಕ್ಷಕರ ಮತಕ್ಷೇತ್ರದಿಂದ ಸತತ ಎಂಟು ಬಾರಿ ಗೆದ್ದು 45 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ನೆಹರೂ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಬಸವರಾಜ ಹೊರಟ್ಟಿ ಅವರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹೊರಟ್ಟಿ ಅವರು ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ವಿಧಾನ ಪರಿಷತ್ ಸದಸ್ಯರಾಗಿ, ಸಭಾಪತಿ ಆಗಿದ್ದಾರೆ. ಅವರ ಮೇಲೆ ಶಿಕ್ಷಕರಿಗೆ ಪ್ರೀತಿ–ವಿಶ್ವಾಸ ಇದ್ದ ಕಾರಣಕ್ಕೆ ಎಂಟು ಬಾರಿ ನಿರಂತರವಾಗಿ ಆಯ್ಕೆಯಾಗಿದ್ದು. ಅವರು ಮತ್ತೊಮ್ಮೆ ವಿಧಾನ ಪರಿಷತ್ ಸದಸ್ಯರಾಗಲಿ ಎಂದು ನಾನು ವೈಯಕ್ತಿಕವಾಗಿ ಹಾರೈಸುವೆ. ಆದರೆ, ರಾಜಕಾರಣವೇ ಬೇರೆ, ಸ್ನೇಹವೇ ಬೇರೆ’ ಎಂದರು.
‘ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ಗೆ ಬಹುಮತಕ್ಕೆ ಒಂದು ಮತ ಮಾತ್ರ ಕಡಿಮೆಯಿದೆ. ಮುಂದಿನ ಚುನಾವಣೆಯಲ್ಲಿ ಅದು ಸಿಗಬಹುದು ಎಂದುಕೊಂಡಿದ್ದೇನೆ. ಅಲ್ಲಿವರೆಗೆ ಹೊರಟ್ಟಿ ಅವರೇ ಸಭಾಪತಿಯಾಗಿ ಮುಂದುವರಿಯುತ್ತಾರೆ. ಸಭಾಪತಿಯಾಗಿ ಅವರು ನಿರ್ವಹಿಸುತ್ತಿರುವ ಕಾರ್ಯವೈಖರಿಗೆ ಎಲ್ಲ ಸದಸ್ಯರು ಖುಷಿಯಾಗಿದ್ದಾರೆ. ಸರ್ಕಾರಕ್ಕೆ ಮುಜಗರ ಮಾಡುವ ಕೆಲಸವನ್ನು ಅವರು ಎಂದಿಗೂ ಮಾಡಿಲ್ಲ. ನಮ್ಮ ಪಕ್ಷದವರೇ ಸಭಾಪತಿಯಾಗಿದ್ದಾರೆ ಎನ್ನುವ ಭಾವ ನಮ್ಮಲ್ಲಿದೆ’ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಹೊರಟ್ಟಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರೆ ಸಾಕು, ಅವರೇ ಎಂಎಲ್‌ಸಿ ಎನ್ನುವುದು ಪಕ್ಕಾ ಆಗಿ ಬಿಡುತ್ತದೆ. 45 ವರ್ಷಗಳವರೆಗೆ ವಿಧಾನಪರಿಷತ್‌ನಲ್ಲಿ ಕೆಲಸ ನಿರ್ವಹಿಸಿ ರಾಜಕೀಯದಲ್ಲಿ ಲಿಮ್ಕಾ ದಾಖಲೆ ಮಾಡಿದ್ದಾರೆ. ಶೀಘ್ರ ಕೋಪಿ, ದೀರ್ಘ ದ್ವೇಷಿಯಲ್ಲದ ವ್ಯಕ್ತಿತ್ವ ಅವರದ್ದಾಗಿದ್ದು, ಸಿದ್ದರಾಮಯ್ಯ ಅವರ ಅವಧಿಯಲ್ಲಿ ಅವರು ಸಭಾಪತಿಯಾಗಿ ಮುಂದುವರಿಯುತ್ತಾರೆ ಎನ್ನುವ ಆಶಯ ನಮ್ಮದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.