ADVERTISEMENT

ಕಲಘಟಗಿ | ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪಿಸಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 4:03 IST
Last Updated 8 ಫೆಬ್ರುವರಿ 2026, 4:03 IST
ಕಲಘಟಗಿಯ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್ಸಿ ಎಸ್ಟಿ ಸಮಾಜದವರ ಕುಂದುಕೊರತೆ ಸಭೆ ನಡೆಯಿತು
ಕಲಘಟಗಿಯ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್ಸಿ ಎಸ್ಟಿ ಸಮಾಜದವರ ಕುಂದುಕೊರತೆ ಸಭೆ ನಡೆಯಿತು   

ಕಲಘಟಗಿ: ‘ಪಟ್ಟಣದ ಬಮ್ಮಿಗಟ್ಟಿ ಕ್ರಾಸ್‌ನಲ್ಲಿ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಮುಖಂಡರು ಆರೋಪಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ತಾಲ್ಲೂಕು ಎಸ್ಸಿ, ಎಸ್ಟಿ ಸಮಾಜದವರ ಕುಂದುಕೊರತೆ ಸಭೆ ಶನಿವಾರ ನಡೆಯಿತು.

ಪ್ರಭಾರ ಐಎಎಸ್ ಅಧಿಕಾರಿ ವರ್ತಿಕಾ ವರ್ಮಾ ಮಾತನಾಡಿ, ‘ಸಮಾಜ ಕಲ್ಯಾಣ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿಯವರು ಅಂಬೇಡ್ಕರ್ ಮೂರ್ತಿ ಬಗ್ಗೆ ಸರ್ಕಾರದ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಿ’ ಎಂದು ಅಧಿಕಾರಿಗಳಿಗೆ ತಿಳಿಸಿದರು.

ADVERTISEMENT

‘ಪಟ್ಟಣದ ಅಂಬೇಡ್ಕರ್ ನಗರ ಹಾಗೂ ಭೋವಿ ಓಣಿಯ ಎಸ್ಸಿ, ಎಸ್ಟಿ ಕಾಲೊನಿಯಲ್ಲಿ ಚರಂಡಿ ಸ್ವಚ್ಛತೆ ಇಲ್ಲ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹಲವು ಬಾರಿ ತಿಳಿಸಿದರೂರು ಅಧಿಕಾರಿಗಳು ಗಮನ ಹರಿಸುತ್ತಿಲ್ಲ’ ಎಂದು ಮುಖಂಡರಾದ ಶಶಿಕುಮಾರ್ ಕಟ್ಟಿಮನಿ ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದರೂ ಹಣ ಬರುತ್ತಿಲ್ಲ ಎಂದು ತಾಲ್ಲೂಕಿನ ದುಮ್ಮವಾಡ ಗ್ರಾಮದ ಯಲ್ಲವ್ವ ಹೊಸಮನಿ ದೂರು ಸಲ್ಲಿಸಿದರು.

‘ಸಮಾಜ ಕಲ್ಯಾಣ ಇಲಾಖೆಯಿಂದ ಎಸ್ಸಿ, ಎಸ್ಟಿ ಸಮಾಜಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಸರ್ಕಾರದಿಂದ ಸಮಾಜದ ಅಭಿವೃದ್ಧಿಗೆ ಬರುವ ಯೋಜನೆಗಳ ಮಾಹಿತಿ ನೀಡುತ್ತಿಲ್ಲ ಹಾಗೂ ಸಮಾಜ ಕಲ್ಯಾಣ ಇಲಾಖೆ ಬಾಡಿಗೆ ಕಟ್ಟಡದಲ್ಲಿದೆ’ ಎಂದು ಇಲಾಖೆ ವಿರುದ್ಧ ದೂರು ಕೇಳಿಬಂತು.

‘ಬರುವ ದಿನಗಳಲ್ಲಿ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಅವರ ಕಷ್ಟ ಅರಿತು ಸರಿಯಾಗಿ ಸ್ಪಂದಿಸಿ ಕೆಲಸ ನಿರ್ವಹಿಸಬೇಕು. ಸಮಾಜದ ಸಣ್ಣಮಟ್ಟದ ಸಮಸ್ಯೆಗಳು ಇದ್ದರೆ ಸ್ಥಳದಲ್ಲೇ ಪರಿಹರಿಸಲು ಶ್ರಮಿಸಿ’ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅನುಷಾ ಹಿರೇಮಠ ಅವರಿಗೆ ತಹಶೀಲ್ದಾರ್ ಬಸವರಾಜ ಹೊಂಕದಣವರ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಇಒ ಪಿ.ವೈ. ಸಾವಂತ, ಸಿಪಿಐ ಶ್ರೀಶೈಲ್ ಕೌಜಲಗಿ, ವಲಯ ಅರಣ್ಯಾಧಿಕಾರಿ ಅರುಣ್ ಕುಮಾರ ಅಷ್ಟಗಿ ಹಾಗೂ ಸಮಾಜದ ಮುಖಂಡರಾದ ರಾಮಣ್ಣ ಬಂಡಿವಡ್ಡರ, ಮಂಜುನಾಥ ಮಾದರ, ಹುಮಂತಪ್ಪ ಹರಿಜನ, ಬಸವರಾಜ ಕಟ್ಟಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.